Published on: October 18, 2021
ಗಡಿಕೇಶ್ವರ ಗ್ರಾಮ
ಗಡಿಕೇಶ್ವರ ಗ್ರಾಮ
ಸುದ್ಧಿಯಲ್ಲಿ ಏಕಿದೆ?ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಭೂಕಂಪನವಾಗುತ್ತಿರುವುದರಿಂದ ಹೈದರಾಬಾದಿನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್ಜಿಆರ್ಐ) ವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಕಂಪನದ ಅಲೆಯನ್ನು ಅಳೆಯಲು ಸಿಸ್ಮೋಮೀಟರ್ ಅನ್ನು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದೆ.
- ಸಿಸ್ಮೋಮೀಟರ್ ಸ್ಥಾಪಿಸಿದ್ದರಿಂದ ಗಡಿಕೇಶ್ವರ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪಗಳು ಸಂಭವಿಸಿದಲ್ಲಿ ನೆಲದೊಳಗಿನ ಭೂಮಿಯ ಚಲನೆಯನ್ನು ಇಲ್ಲಿ ದಾಖಲಾಗಿ ಮಾಹಿತಿಯು ನೇರವಾಗಿ ಹೈದ್ರಬಾದಿನ ಎನ್.ಜಿ.ಆರ್.ಐ ಸಂಸ್ಥೆಗೆ ರವಾನೆ ಆಗಲಿದೆ. ತದನಂತರ ಇದರ ಮಾಹಿತಿ ಆಧರಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳ ತಂಡ ನಿರ್ಧರಿಸಲಿದೆ.
ಇಲ್ಲಿ ಪದೇ ಪದೇ ಭೂಕಂಪ ಸಹಜ
- ಈ ಭಾಗದಲ್ಲಿ ಹೆಚ್ಚಾಗಿ ಸುಣ್ಣದಕಲ್ಲು ಇರುವ ಕಾರಣ ಪದೇಪದೇ ಭೂಕಂಪನವಾಗುವುದು ಸಹಜ. ಅತಿಯಾದ ಮಳೆ ಹಾಗೂ ಜಲಾಶಯಗಳಲ್ಲಿ ಮಳೆಗಾಲದ ಆರಂಭದಲ್ಲೇ ಹೆಚ್ಚು ನೀರು ಸಂಗ್ರಹವಾದಾಗ ಲಘು ಭೂಕಂಪನಗಳು ಸಂಭವಿಸುತ್ತವೆ.
- ಸುಮಾರು 20 ವರ್ಷಗಳಿಂದಲೂ ಭೂಕಂಪನ ಹಾಗೂ ಸ್ಫೋಟದ ಶಬ್ದದ ಅನುಭವಗಳು ಆಗುತ್ತಲೇ ಇವೆ. ಭೂತಳದಲ್ಲಿನ ಬೃಹತ್ ಬಂಡೆಗಳ ಘರ್ಷಣೆಯಿಂದ ಭೂಕಂಪ ಸಂಭವಿಸುತ್ತದೆ ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸುತ್ತೇವೆ. ಆದರೆ, ಸುಣ್ಣದ ಕಲ್ಲಿನಂಥ ಮೃದು ಪ್ರದೇಶದಲ್ಲಿ ಭೂತಳ ಒತ್ತಡ ಹೆಚ್ಚಿದಾಗ ಮೇಲಿಂದಮೇಲೆ ನೆಲವು ತೂಗಿದಂತಾಗುತ್ತದೆ.
- ಹತ್ತಿರದಲ್ಲಿರುವ ಜಲಾಶಯ, ಹೊಳೆ ಅಥವಾ ಅಣೆಕಟ್ಟೆಗಳಲ್ಲಿ ಜಲರಾಶಿ ವಿಪರೀತವಾದಾಗ ಅದರ ವ್ಯಾಪ್ತಿಯಲ್ಲಿ ಭೂಮಿ ನಡುಗುತ್ತದೆ. ಇದೇ ಕಾರಣಕ್ಕೆ ಕೊಯ್ನಾ ಜಲಾಶಯದ ಸುತ್ತಲಿನ ಪ್ರದೇಶದಲ್ಲೂ ಚಿಂಚೋಳಿ ಮಾದರಿಯಲ್ಲೇ ಭೂಮಿ ಕಂಪಿಸುತ್ತದೆ.
- ಕಲಬುರಗಿ ಜಿಲ್ಲೆಯಲ್ಲಿ ಕೂಡ ಅತಿವೃಷ್ಟಿ ಆದ ವರ್ಷ ಭೂಮಿ ನಡುಗುತ್ತದೆ. ಇದು ಕಾಕತಾಳೀಯವಲ್ಲ. ಇದಕ್ಕೆ ನಿಖರ ಸಂಬಂಧವಿದೆ.
- ದಶಕದ ಹಿಂದೆ ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲೂ ಭೂಕಂಪನದ ಸಂಶೋಧನೆಗಳು ನಡೆದವು. ರಿಕ್ಟರ್ ಮಾಪಕದಲ್ಲಿ 2.1ರಿಂದ 3.9ರವರೆಗೆ ಕಂಪನಗಳು ದಾಖಲಾದ ಉದಾಹರಣೆಗಳು ಸಾಕಷ್ಟು ಬಾರಿ ಸಿಕ್ಕಿವೆ. ಭೂಗರ್ಭ ಶಾಸ್ತ್ರಜ್ಞರು, ತಂತ್ರಜ್ಞರು, ಜಲತಜ್ಞರನ್ನು ಸೇರಿಸಿಕೊಂಡು ಅಧ್ಯಯನ ಮಾಡಿ ಇದಕ್ಕೆ ಕಾರಣ ಏನು ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದವು.
ಪರಿಹಾರ ಮಾರ್ಗಗಳೇನು?
- ಭೂಕಂಪವು ಎರಡು ರೀತಿ ಸಂಭವಿಸುತ್ತದೆ. ಭೂಮಿಯು ಮೇಲಿಂದ ಕೆಳಗೆ ಅಲ್ಲಾಡುವುದು ಮತ್ತು ಅಡ್ಡಡ್ಡವಾಗಿ ತೂಗುವುದು. ಮೇಲಿಂದ ಕೆಳಗೆ ಅಲ್ಲಾಡಿದಾಗ ಹೆಚ್ಚು ಅಪಾಯ ಆಗುವ ಸಂಭವವಿರುತ್ತದೆ. ಇದರಿಂದ ಸಂರಕ್ಷಿಸಿಕೊಳ್ಳಲು ಭೂವಿಜ್ಞಾನಿಗಳು ಎರಡು ರೀತಿಯ ಪರಿಹಾರಗಳನ್ನು ಸೂಚಿಸುತ್ತಾರೆ.
- ಭೂಕಂಪಕ್ಕೆ ಜಗ್ಗದಂತೆ ಮನೆಗಳನ್ನು ವಿನ್ಯಾಸಗೊಳಿಸಿಕೊಳ್ಳಬೇಕು ಅಥವಾ ಹಳೆ ಮನೆಗಳನ್ನು ಗಟ್ಟಿಗೊಳಿಸಬೇಕು. ಇದನ್ನು ರೆಟ್ರೋಫಿಟ್ಟಿಂಗ್ (Retrofitting) ಎನ್ನುತ್ತಾರೆ. ಮನೆ ಮುಂದೆ ಹಗುರ ವಸ್ತುಗಳಿಂದ ಶೆಡ್ ನಿರ್ಮಿಸಿಕೊಳ್ಳುವುದರಿಂದ ಕಬ್ಬಿಣ, ಗಟ್ಟಿಯಾದ ಮರದ ತೊಲೆಗಳಿಂದ ಅಪಾಯ ಆಗುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಅವರು.
- ಭೂಮಿ ನಡುಗಿದಾಗ ಮನೆಯಲ್ಲಿ ಟೇಬಲ್, ಮಂಚದಡಿ ಅಡಗಿಕೊಳ್ಳುವುದು ಅಥವಾ ಸುರಕ್ಷಿತ ಸ್ಥಳಕ್ಕೆ ಜಿಗಿಯುವುದು, ಹೊರಗೆ ಓಡುವುದು ತಾತ್ಕಾಲಿಕ ಸಲಹೆಗಳು.