Published on: July 11, 2024

ಗೋದಾವರಿ-ಕೃಷ್ಣ-ಪೆನ್ನಾ-ಕಾವೇರಿ ನದಿ ಜೋಡಣೆ ಯೋಜನೆ

ಗೋದಾವರಿ-ಕೃಷ್ಣ-ಪೆನ್ನಾ-ಕಾವೇರಿ ನದಿ ಜೋಡಣೆ ಯೋಜನೆ

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗೋದಾವರಿ–ಕೃಷ್ಣಾ–ಕಾವೇರಿ–ಪೆನ್ನಾರ್ ನದಿಗಳ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಕರ್ನಾಟಕ ಸರ್ಕಾರ, ಈ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.

ಯೋಜನೆಯ ವಿವರ

  • ಮಹಾನದಿ–ಗೋದಾವರಿ ಕಣಿವೆಯ ಹೆಚ್ಚುವರಿ 7 ಸಾವಿರ ಮಿಲಿಯನ್ ಕ್ಯೂಬಿಕ್ ಮೀಟರ್ (ಎಂಸಿಎಂ) ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಯ ಭಾಗಕ್ಕೆ ಹರಿಸಿ 9.44 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲು ಸಂಸ್ಥೆ ಪ್ರಸ್ತಾವ ಸಿದ್ಧಪಡಿಸಿತ್ತು.
  • ಬಳಿಕ ಬೇಡ್ತಿ–ವರದಾ ನದಿಗಳ ಜೋಡಣೆಯನ್ನು ಈ ಪ್ರಸ್ತಾವದಲ್ಲಿ ಸೇರಿಸಲಾಗಿತ್ತು.
  • ಹೆಚ್ಚುವರಿ ನೀರಿನ ವರ್ಗಾವಣೆ ಪ್ರಮಾಣವನ್ನು 7 ಸಾವಿರ ಎಂಸಿಎಂನಿಂದ 4 ಸಾವಿರ ಎಂಸಿಎಂಗೆ ಇಳಿಸಲಾಗಿತ್ತು. ನದಿ ಜೋಡಣೆಯಾದ ಬಳಿಕ ದಕ್ಷಿಣದ ರಾಜ್ಯ ಗಳಿಗೆ 147 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ.
  • ಕರ್ನಾಟಕಕ್ಕೆ74 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿದೆ.
  • ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೈಗಾರಿಕೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಹಂಚಿಕೆ ಆಗಿದೆ.

ವಿರೋಧಿಸಲು ಕಾರಣ

ಐತಿಹಾಸಿಕ ಕಾರಣಗಳಿಂದಾಗಿ ಕೃಷ್ಣಾ ಹಾಗೂ ಕಾವೇರಿ ಕಣಿವೆಗೆ ಹೆಚ್ಚಿನ ನೀರು ಹಂಚಿಕೆಯಾಗಬೇಕು. ದಕ್ಷಿಣದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬರ ಪೀಡಿತ ಪ್ರದೇಶ ಹೆಚ್ಚು ಇರುವುದು ಕರ್ನಾಟಕದಲ್ಲೇ. ಹೀಗಾಗಿ, ಹೆಚ್ಚುವರಿ ನೀರಿನಲ್ಲಿ ರಾಜ್ಯಕ್ಕೆ ಶೇ 50ರಷ್ಟು ಪಾಲು ನೀಡಬೇಕು ಸರ್ಕಾರ ಎಂದು ಹೇಳಿದೆ.