Published on: June 3, 2024

ಚುಟುಕು ಸಮಾಚಾರ :1&2 ಜೂನ್ 2024

ಚುಟುಕು ಸಮಾಚಾರ :1&2 ಜೂನ್ 2024

ಕರ್ನಾಟಕ ರಾಜ್ಯ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆಯ ಇಲಾಖೆಯ ತಂಡವು ಹಂಪಿ ವಿಶ್ವ ಪರಂಪರೆ ಪ್ರದೇಶದಲ್ಲಿರುವ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಹತ್ತಿರದ ಪಂಪ ಸರೋವರಕ್ಕೆ ಹೋಗುವ ದಾರಿಯ ಗುಡ್ಡದಲ್ಲಿರುವ ಬಂಡೆಯಲ್ಲಿ ಗವಿವರ್ಣ ಚಿತ್ರಗಳನ್ನು ಪತ್ತೆ ಹಚ್ಚಿವೆ. ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಚಿತ್ರಗಳಾಗಿದ್ದು, ನಿಂತಿರುವ ಗೂಳಿಯು ಡುಬ್ಬದಿಂದ ಕೂಡಿವೆ. ಈ ಗೂಳಿಯ ಕಾಲುಗಳನ್ನು ಹುಲಿಯು ಹಿಡಿದಿರುವಂತೆ ಚಿತ್ರಿಸಲಾಗಿದ್ದು, ಹುಲಿಯುದಷ್ಟ ಪುಷ್ಟವಾಗಿದ್ದು ಪಟ್ಟೆಗಳಿಂದ ಕೂಡಿದೆ.  ಇವು ಪ್ರಾಗೈತಿಹಾಸ ಕಾಲದ ಗವಿವರ್ಣ ಚಿತ್ರಗಳಾಗಿದ್ದು, ಸುಮಾರು 2,500 ವರ್ಷಗಳ ಹಿಂದಿನ ವರ್ಣ ಚಿತ್ರಗಳೆಂದು ಹೇಳಬಹುದಾಗಿದೆ.

ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ. 2024 ಏಪ್ರಿಲ್ನಲ್ಲಿ ಕೆಲವು ದೇಶಗಳು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಮೂಲಕ ಸ್ವೀ ಡನ್ ಒಪ್ಪಂದಕ್ಕೆ ಸಹಿ ಹಾಕಿದ 37ನೇ ದೇಶ ಹಾಗೂ ಸ್ವಿಟ್ಜರ್ಲೆಂಡ್ 38ನೇ ದೇಶ ಎನಿಸಿಕೊಂಡಿದ್ದವು. ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ದೇಶಗಳು ತಮ್ಮ ಚಂದ್ರಯಾನ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪರಸ್ಪರ ಸಹಕಾರದ ಮತ್ತು ಜವಾಬ್ದಾರಿಯುತ ನಡವಳಿಕೆಗೆ ಬದ್ಧವಾಗಿರುತ್ತವೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ)ಯ 22 ಸದಸ್ಯ ದೇಶಗಳಲ್ಲಿ 16 ದೇಶಗಳು ಈಗ ಈ ಒಪ್ಪಂದಕ್ಕೆ ಸಹಿ ಹಾಕಿವೆ. ಜೂನ್ 21, 2023 ರಂದು, ಭಾರತೀಯ ಗಣರಾಜ್ಯವು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಿದ 27 ನೇ ರಾಷ್ಟ್ರವಾಯಿತು.

ವಿಶ್ವದಲ್ಲೇ ಮೊದಲ ಬಾರಿಗೆ, ಜಪಾನಿನ ಸಂಶೋಧಕರು ಲಿಗ್ನೋಸ್ಯಾಟ್ ಎಂಬ ಹೆಸರಿನ ಮರದ (ಕಟ್ಟಿಗೆ) ಸಣ್ಣ ಉಪಗ್ರಹವನ್ನು ನಿರ್ಮಿಸಿದ್ದಾರೆ. ಅದು ಸೆಪ್ಟೆಂಬರ್ನಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ. ಇದನ್ನು ಮೊದಲು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ರಾಕೆಟ್ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸಲಾಗುತ್ತದೆ.

ಆಸ್ಟ್ರೇಲಿಯಾದ ಕ್ರಯೋನಿಕ್ಸ್ ಕಂಪನಿಯು ತನ್ನ ಮೊದಲ ಗ್ರಾಹಕ (ಕ್ಲೈಂಟ್) ನನ್ನು ಭವಿಷ್ಯದಲ್ಲಿ ಜೀವಂತವಾಗಿಸುವ ಭರವಸೆಯಲ್ಲಿ ಫ್ರೀಜ್(ಶೈತ್ಯಾಗಾರದಲ್ಲಿ) ಮಾಡಿದೆ. ಕ್ರಯೋನಿಕ್ಸ್ ಬಗ್ಗೆ: ಕ್ರಯೋನಿಕ್ಸ್, ಮರಣ ಹೊಂದಿದ ವ್ಯಕ್ತಿಯನ್ನು ಘನೀಕರಿಸುವ ಅಭ್ಯಾಸ, ಭವಿಷ್ಯದಲ್ಲಿ ವ್ಯಕ್ತಿಯನ್ನು ಪುನಃ ಜೀವಂತವಾಗಿಸುವ ಉದ್ದೇಶವಾಗಿದೆ. ಕ್ರಯೋನಿಕ್ಸ್ ಎಂಬ ಪದವು ಗ್ರೀಕ್ ಕ್ರಿಯೋಸ್ ನಿಂದ ಬಂದಿದೆ, ಇದರರ್ಥ “ಹಿಮಾವೃತ”

ಆರೋಗ್ಯ ಜಾಗೃತಿ ಮೂಡಿಸುವ ವಿಷಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಾರಣಕ್ಕೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ  ಸಂಸ್ಥೆ(ನಿಮ್ಹಾನ್ಸ್) ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) 2024ನೇ ಸಾಲಿನ ನೆಲ್ಸನ್ ಮಂಡೇಲಾ ಪ್ರಶಸ್ತಿಗೆ ಆಯ್ಕೆ ಮಾಡಿದೆ. ನಿಮ್ಹಾನ್ಸ್ ತನ್ನ ರಚನೆಯ 50 ವರ್ಷಗಳನ್ನು ಮತ್ತು ಅದರ ಪೂರ್ವಭಾವಿ ಸಂಸ್ಥೆಯಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ (AIIMH) ನ 70 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಈ  ಪ್ರಶಸ್ತಿ ಸಂದಿರುವುದು ವಿಶೇಷವಾಗಿದೆ.

ಬಾಂಬೆ ಹೈಕೋರ್ಟನ ಗೋವಾ ಪೀಠವು ವ್ಯಕ್ತಿಯೊಬ್ಬರ ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಕಾರ್ಯಗತಗೊಳಿಸಲು ಅನುಮತಿ ನೀಡಿದೆ. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಎಸ್.ಸೋನಕ್ ಅವರು ‘ಮರಣ ಇಚ್ಛೆಯ ಉಯಿಲು’ ಪತ್ರಕ್ಕೆ ಒಪ್ಪಿಗೆ ನೀಡಿದರು. ಈ ಮೂಲಕ ನ್ಯಾಯಮೂರ್ತಿ ಸೋನಕ್ ಅವರು, ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಅಳವಡಿಸಿರುವ ಜೀವ ರಕ್ಷಕ ಸಾಧನ ತೆಗೆಯುವುದಕ್ಕೆ ಸಂಬಂಧಿಸಿದ ‘ಮರಣ ಇಚ್ಛೆಯ’ ಉಯಿಲಿಗೆ ಸಮ್ಮತಿ ನೀಡಿದ ದೇಶದ ಮೊದಲ ನ್ಯಾ ಯಮೂರ್ತಿ ಎನಿಸಿದ್ದಾರೆ. ಅದೇ ರೀತಿ ಗೋವಾ, ‘ಮರಣ ಇಚ್ಛೆಯ ಉಯಿಲು’ ಸೌಲಭ್ಯವನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯವೆನಿಸಿದೆ.