Published on: October 17, 2023
ಚುಟುಕು ಸಮಾಚಾರ : 14-16 ಅಕ್ಟೋಬರ್ 2023
ಚುಟುಕು ಸಮಾಚಾರ : 14-16 ಅಕ್ಟೋಬರ್ 2023
- ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿ ಮೇಲೆ ನಿರ್ಮಿಸುತ್ತಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈವರೆಗೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಗಳಿಸಿದ್ದ ಚೀನಾದ ಬೇಪಾನ್ಜಿಯಾಂಗ್ ನದಿಯ ಮೇಲಿನ ಉಕ್ಕಿನ ಸೇತುವೆಯನ್ನು (275 ಮೀಟರ್ ಎತ್ತರ) ಇದು ಹಿಂದಿಕ್ಕಿ ನಂ.1 ಎತ್ತರದ ಸೇತುವೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಭಾಗವಾಗಿ (USBRL) ಈ ಸೇತುವೆ ನಿರ್ಮಾಣವಾಗುತ್ತಿದೆ.
- ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯವು ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ್ ಅವರದ್ದು ಎನ್ನಲಾದ 17ನೇ ಶತಮಾನದ ಪೌರಾಣಿಕ “ವಾಘ್ ನಖ್” ಮಧ್ಯಕಾಲೀನ ಅಸ್ತ್ರವನ್ನು ರಾಜ್ಯಕ್ಕೆ ಮರಳಿ ತರಲು ತಿಳುವಳಿಕೆ ಪತ್ರ (MOU) ಕ್ಕೆ ಸಹಿ ಹಾಕಿದೆ. ಮೂರು ವರ್ಷಗಳ ಅವಧಿಗೆ ಪುರಾತನ ಆಯುಧವನ್ನು ಸಾಲದ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು, ಈ ಸಮಯದಲ್ಲಿ ಅದನ್ನು ರಾಜ್ಯದಾದ್ಯಂತದ ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ಅಂಗವಾಗಿ ‘ಹುಲಿ ಉಗುರಿನ’ ಆಯುಧವನ್ನು ಭಾರತಕ್ಕೆ ನೀಡಲಾಗುತ್ತಿದೆ.
- ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಭಾರತೀಯ ಸೇನೆಯ ಸಹಯೋಗದಲ್ಲಿ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್ ಗ್ಲೇಸಿಯರ್ನಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಟವರನ್ನು ಸ್ಥಾಪಿಸಲಾಗಿದೆ.
- 2028ರ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರಿಸುವ ಪ್ರಸ್ತಾವನೆಗೆ ಐಒಸಿ ಒಪ್ಪಿಗೆ: ಕ್ರೀಡಾಕೂಟ ಆಯೋಜಿಸುವ ಪ್ರತಿ ನಗರವು ಆಯಾ ಆವೃತ್ತಿಗೆ ಹೊಸ ಕ್ರೀಡೆಗಳನ್ನು ಸೇರ್ಪಡೆಗೊಳಿಸಲು ಐಒಸಿ ನಿಯಮಗಳ ಅಡಿಯಲ್ಲಿ ಮನವಿ ಸಲ್ಲಿಸಬಹುದಾಗಿದೆ. ಅದರಂತೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಆಯೋಜಕರು, ಕ್ರಿಕೆಟ್, ಫ್ಲಾಗ್ ಫುಟ್ಬಾಲ್, ಲಾಕ್ರೋಸ್, ಸ್ಕ್ವಾಷ್ ಮತ್ತು ಬೇಸ್ಬಾಲ್–ಸಾಫ್ಟ್ಬಾಲ್ ಕ್ರೀಡೆಗಳನ್ನು ಸೇರಿಸುವ ಬಯಕೆ ವ್ಯಕ್ತಪಡಿಸಿದ್ದರು. ‘ಪಸ್ತಾವನೆಗಳನ್ನು ಐಒಸಿ ಕಾರ್ಯಕಾರಿ ಮಂಡಳಿಯು ಅನುಮೋದಿಸಿದೆ’. 1900ರ ಒಲಿಂಪಿಕ್ನಲ್ಲಿ ಕೊನೆಯ ಬಾರಿ ಕ್ರಿಕೆಟ್ ಆಡಲಾಗಿತ್ತು. ಫ್ರಾನ್ಸ್ ವಿರುದ್ಧ ನಡೆದ ಏಕೈಕ ಪಂದ್ಯದಲ್ಲಿಇಂಗ್ಲೆಂಡ್ (ಗ್ರೇಟ್ ಬ್ರಿಟನ್) ತಂಡ ಚಿನ್ನದ ಪದಕ ಜಯಿಸಿತ್ತು
- ಮನೆ ಬಾಗಿಲಿಗೆ ಪಡಿತರ’ ಯೋಜನೆ : ಕರ್ನಾಟಕ ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆಯಡಿ ವಿತರಿಸುವ ಪಡಿತರವನ್ನು 75 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಮನೆ ಬಾಗಿಲಿಗೆ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಹಿರಿಯ ನಾಗರಿಕಸ್ನೇಹಿ ನೀತಿ ಪರಿಚಯಿಸುತ್ತಿದೆ.
- ಅರುಣಾಚಲ ಪ್ರದೇಶವು ಇತ್ತೀಚೆಗೆ ಅರುಣಾಚಲ ಯಾಕ್ ಚುರ್ಪಿ, ಖಾವ್ ತೈ (ಖಮ್ತಿ ಅಕ್ಕಿ), ಮತ್ತು ತಂಗ್ಸಾ ಜವಳಿಗಳಿಗೆ ಭೌಗೋಳಿಕ ಸೂಚಕ (GI ಟ್ಯಾಗ್) ಅನ್ನು ಸ್ವೀಕರಿಸಿದೆ.
- ದೇಶದ ಯುವ ಸಮುದಾಯದ ಶ್ರೇಯೋಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇರಾ ಯುವ ಭಾರತ್ (ಮೈ ಭಾರತ್/My Bharat) ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದೆ.
- ಉತ್ತರ ಅಮೆರಿಕದ ಮೇರಿಲ್ಯಾಂಡ್ನ ಆ್ಯಕೊಕೀಕ್ ನಗರದ 13 ಎಕರೆಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು 2023 ಅಕ್ಟೋಬರ್ 14 ರಂದು ಲೋಕಾರ್ಪಣೆಗೊಳಿಸಲಾಯಿತು. ಇದು ಭಾರತದ ಹೊರಗೆ ನಿರ್ಮಿಸಿರುವ ಅತಿ ಎತ್ತರದ ಪ್ರತಿಮೆಯಾಗಿದೆ
- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗಂಗಾನದಿಯ ಡಾಲ್ಫಿನ್ ಅನ್ನು ರಾಜ್ಯದ ಜಲಚರ ಪ್ರಾಣಿ ಎಂದು ಘೋಷಿಸಿದ್ದಾರೆ.