Published on: November 21, 2023
ಚುಟುಕು ಸಮಾಚಾರ: 20 ನವೆಂಬರ್ 2023
ಚುಟುಕು ಸಮಾಚಾರ: 20 ನವೆಂಬರ್ 2023
- ವಾಣಿಜ್ಯೋದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊ ಯ್ಯುವ ಉದ್ದೇಶದಿಂದ ನವೋದ್ಯಮಗಳನ್ನು ಪ್ರೋತ್ಸಾಹಿಸಲು, ‘ಎಲಿವೇಟ್– 2023’ ಯೋಜನೆಯಡಿ ಆರಂಭಿಕ ಹಂತದ ನವೋದ್ಯಮಗಳಿಗೆ ನೆರವಾಗಲು 50 ಲಕ್ಷದವರೆಗೆ ಅನುದಾನ ನೀಡಲಾಗುವುದು ಎಂದು’ಕರ್ನಾಟಕ ರಾಜ್ಯ ಸರ್ಕಾರ ಹೇಳಿದೆ.
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿಗಳು ಮತ್ತು ಮನುಷ್ಯರ ಚಲನ ವಲನಗಳನ್ನು ಅರಿಯಲು ಬಹುದ್ ಗಾತ್ರದ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಗರುಡ ಕ್ಯಾಮೆರಾವನ್ನು ಅಳವಡಿಸಲಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಾಗರಹೊಳೆಯಲ್ಲಿ ಈ ಪ್ರಾಯೋಗಿಕ ಯೋಜನೆ ಜಾರಿ ಮಾಡಲಾಗುತ್ತಿದ್ದು ನಾಲ್ಕು ಕಡೆಗಳಲ್ಲಿ ಜಿಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪ್ರಾಯೋಜಕತ್ವವನ್ನು ಟಿವಿಎಸ್ ಮತ್ತು ಎಸ್ ಎಸ್ ಟಿ ಸಂಸ್ಥೆ ವಹಿಸಿಕೊಂಡಿದೆ ಜಿಯಾಧಾರಿತ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ಅಲ್ಡೈಸ್ ಸಂಸ್ಥೆ ನಿರ್ವಹಿಸುತ್ತಿದೆ. ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶದ ಭೂಪಾಲ್ ರಾಷ್ಟ್ರೀಯ ಉದ್ಯಾನ ಮತ್ತು ಸತ್ಪುರ ಟೈಗರ್ ರಿಸರ್ವ್ ನಲ್ಲಿ ಈಗಾಗಲೇ ಗರುಡ ಕ್ಯಾಮರಾ ಅಳವಡಿಸಲಾಗಿದೆ.
- ರಾತ್ರಿಯ ಆಕಾಶದ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಲಡಾಖ್ನಲ್ಲಿರುವ ಹಾನ್ಲೆ ಮತ್ತು ಮೆರಾಕ್ ವೀಕ್ಷಣಾಲಯಗಳು ಭಾರತದಲ್ಲಿ ಪ್ರಕಾಶಮಾನವಾದ ದೀಪಗಳ ಕೆಂಪು ಅರೋರಾ ಅನ್ನು ಗುರುತಿಸಿವೆ. ಇದು ಈ ವರ್ಷ ಹ್ಯಾನ್ಲೆ ವೀಕ್ಷಣಾಲಯದಿಂದ ಸೆರೆಹಿಡಿಯಲಾದ ಎರಡನೇ ಅರೋರಾ ಘಟನೆಯಾಗಿದೆ, ಹಿಂದಿನದನ್ನು ಏಪ್ರಿಲ್ 23 ರಂದು ದಾಖಲಿಸಲಾಗಿದೆ. ಇದು ಅಪರೂಪದ ವಾತಾವರಣದ ವಿದ್ಯಮಾನವಾಗಿದ್ದು, ಇದು ಆಕಾಶದಲ್ಲಿ ಕೆಂಪು ಬಣ್ಣದ ಛಾಯೆಗೆ ಕಾರಣವಾಗುತ್ತದೆ. ಇದು ಹೆಚ್ಚು ಸಾಮಾನ್ಯವಾದ ಹಸಿರು ಮತ್ತು ನೀಲಿ ಬಣ್ಣಗಳಿಂದ ಭಿನ್ನವಾಗಿರುತ್ತವೆ.
- ದೇಶದ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಉಕ್ಕಿನ ತಡೆ ಗೋಡೆಗಳು ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಲಿವೆ. ಉಕ್ಕಿನ ತಡೆಗೋಡೆಗಳ ಬದಲಾಗಿ ಪೇಟೆಂಟ್ ಪಡೆದ ಬಿದಿರಿನ ತಡೆಗೋಡೆಗಳನ್ನು ಅಳವಡಿಸಲು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆ ಹೆಚ್ಚುವುದರ ಜೊತೆಗೆ ಹೆದ್ದಾರಿ ನಿರ್ಮಾಣದ ವೆಚ್ಚದಲ್ಲಿ ಶೇ 20 ಪ್ರತಿಶತ ಉಳಿತಾಯವಾಗಲಿದೆ. ಈ ವಿನೂತನ ತಂತ್ರಜ್ಞಾನಕ್ಕೆ ಭಾರತ ಪೇಟೆಂಟ್ ಪಡೆದಿದ್ದು, ಯುರೋಪಿಯನ್ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ. ಹಸಿರು ಆರ್ಥಿಕತೆಗೆ ಗಮನಾರ್ಹ ಶಕ್ತಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಪಂಚದಲ್ಲಿಅತಿ ಹೆಚ್ಚು ಬಿದಿರು ಬೆಳೆಯುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಚೀನಾದ್ದು. ಸರಕಾರದ ಈ ನೂತನ ಯೋಜನೆಯಿಂದ ಬಿದಿರಿಗೆ ಬೇಡಿಕೆ ಹೆಚ್ಚುವುದರಿಂದ ದೇಶದ ಬಿದಿರು ಬೆಳೆಗಾರರಿಗೆ ಪ್ರಯೋಜನವಾಗಲಿದೆ. ಉತ್ಪಾದನಾ ಪ್ರಮಾಣ ಹೆಚ್ಚಿದಂತೆ ಅಪಘಾತ ತಡೆ ವಿಭಜಕಗಳ ನಿರ್ಮಾಣದ ವೆಚ್ಚವು ಶೇ 10- 20ರಷ್ಟು ಕುಸಿತಗೊಳ್ಳುವ ಸಾಧ್ಯತೆ ಇದೆ.
- ಯುವಕರಿಗೆ ಉದ್ಯೋಗ ಅವಕಾಶಕ್ಕೆ ಅಗತ್ಯವಾದ ಸ್ವವಿವರಗಳನ್ನು (ಬಯೊಡೇಟಾ) ಆಕರ್ಷಕವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮಹಾರಾಷ್ಟ್ರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನಿರ್ಧರಿಸಿದೆ. ಇದರಿಂದ ರಾಜ್ಯದಲ್ಲಿನ ಒಂದು ಲಕ್ಷ ಯುವಕರಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಯುವಕರು ಉತ್ತಮವಾದ ಉದ್ಯೋಗ ಅವಕಾಶಗಳನ್ನು ಹೊಂದಿದ್ದರೂ, ಹಲವು ಬಾರಿ ಸ್ವವಿವರ ಸರಿ ಇಲ್ಲದ ಕಾರಣ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಯುವಕರಿಗೆ ಡಿಜಿಟಲ್ ಸ್ವವಿವರದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
- ರಾಜ್ಯದ ನಿವಾಸಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 75 ರಷ್ಟು ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ 2020ರಲ್ಲಿ ಹರಿಯಾಣ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದು ಮಾಡಿದೆ. ಸಂಪೂರ್ಣ ಕಾಯ್ದೆಯನ್ನು ಪೀಠ ರದ್ದುಪಡಿಸಿದೆ. ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆಯು ಸಂವಿಧಾನದ 14 ಮತ್ತು 19ನೇ ವಿಧಿಗಳನ್ನು ಉಲ್ಲಂಘಿಸಿದೆ ಎಂದು ವಾದಿಸಲಾಗಿತ್ತು. ರಾಜ್ಯದ ಅಭ್ಯರ್ಥಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 75ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆಯ ಅನುಷ್ಠಾನದ ವಿರುದ್ಧ ನ್ಯಾಯಾಲಯಕ್ಕೆ ಹಲವು ಅರ್ಜಿಗಳು ಬಂದಿದ್ದವು. ಗರಿಷ್ಠ ಮಾಸಿಕ ವೇತನ 30,000ವರೆಗಿನ ಉದ್ಯೋಗಗಳಿಗೆ ಈ ಕಾನೂನು ಅನ್ವಯಿಸಲಾಗಿತ್ತು.
- ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ- 3 ಯೋಜನೆಯ ನೌಕೆಯನ್ನು ಹೊತ್ತು ಸಾಗಿಸಿದ ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಭಾಗವೊಂದು ನಿಯಂತ್ರಣಕ್ಕೆ ಸಿಗದೆ ಭೂಮಿಯ ವಾತಾವರಣಕ್ಕೆ ಮರು ಪ್ರವೇಶ ನೀಡಿದೆ ಎಂದು ಇಸ್ರೋ ತಿಳಿಸಿದೆ. ಸಂಭಾವ್ಯ ಪರಿಣಾಮ ಸ್ಥಳವು ಉತ್ತರ ಪೆಸಿಫಿಕ್ ಸಮುದ್ರ ಪ್ರದೇಶದ ಮೇಲ್ಭಾಗದಲ್ಲಿದೆ ಎಂದು ಅಂದಾಜಿಸಲಾಗಿದೆ. ಈ ಭಾಗವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ.
- ಕೀನ್ಯಾ ಸರ್ಕಾರವು 2032ರ ವೇಳೆಗೆ 150 ಕೋಟಿ ಮರಗಳನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ರಾಷ್ಟ್ರವ್ಯಾಪಿ ಸಸಿ ನೆಡಲು ನ.13ರಂದು ಸಾರ್ವಜನಿಕ ರಜೆ ಘೋಷಿಸಿತ್ತು. ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ತಮ್ಮ ದೇಶವನ್ನು ಉಳಿಸುವ ಪ್ರಯತ್ನ ಬೆಂಬಲಿಸಿ ದೇಶಾದ್ಯಂತ ನಾಗರಿಕರು ಸಸಿ ನೆಡಲು ರಜೆಯನ್ನು ಘೋಷಿಸಲಾಗಿತ್ತು. ಕೀನ್ಯಾದ ಭೂಪ್ರದೇಶದಲ್ಲಿ ಶೇ.7ರಷ್ಟಿರುವ ಅರಣ್ಯಪ್ರದೇಶವನ್ನು ಶೇ.10ಕ್ಕೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ 80 ಮಿಲಿಯನ್ ಡಾಲರ್ ಮೀಸಲಿಟ್ಟಿದೆ. ಈಗಾಗಲೇ ಹವಾಮಾನ ಬಿಕ್ಕಟ್ಟು ಕೀನ್ಯಾ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ಬರಗಾಲ ಸೃಷ್ಟಿಸಿದೆ. ಸತತವಾಗಿ ಐದು 5 ವರ್ಷದಿಂದ ಇಲ್ಲಿ ಮಳೆ ಕೊರತೆ ಉಂಟಾಗಿದೆ.
- ಪಾಕಿಸ್ತಾನದಲ್ಲಿ ಅಕ್ರಮವಾಗಿ ತಂಗಿರುವ ವಿದೇಶಿ ಪ್ರಜೆಗಳನ್ನು ಹೊರಹಾಕುವ ಅಭಿಯಾನದ ಭಾಗವಾಗಿ 6,500ಕ್ಕೂ ಹೆಚ್ಚು ಅಫ್ಘಾನಿಸ್ತಾನ ನಾಗರಿಕರು ಎರಡು ಪ್ರಮುಖ ಗಡಿಗಳಾದ ಟೋರ್ಕಮ್ ಮತ್ತು ಚಮನ್ ಮೂಲಕ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ. ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಪಾಕಿಸ್ತಾನವನ್ನು ತೊರೆಯುವಂತೆ ಅಲ್ಲಿನ ಸರ್ಕಾರ ಆದೇಶಿಸಿತ್ತು. 4 ಮಿಲಿಯನ್‌ಗಿಂತಲೂ ಹೆಚ್ಚು ಆಫ್ಘನ್ನರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಮತ್ತು ಇದರಲ್ಲಿ 1.7 ಮಿಲಿಯನ್ ವಲಸಿಗರು ದಾಖಲೆಗಳನ್ನು ಹೊಂದಿಲ್ಲ ಎಂದು ಪಾಕ್ ಸರ್ಕಾರ ತಿಳಿಸಿದೆ. ಪಾಕಿಸ್ತಾನದ ಆರ್ಥಿಕತೆಯು ತೊಂದರೆಯಲ್ಲಿದೆ ಮತ್ತು ತೆರಿಗೆಯನ್ನು ಪಾವತಿಸದ, ದಾಖಲೆಗಳಿಲ್ಲದ ವಲಸಿಗರು ಅದರ ವಿರಳ ಸಂಪನ್ಮೂಲಗಳನ್ನು ಬರಿದು ಮಾಡುತ್ತಿದ್ದಾರೆ ಎಂದು ಪಾಕ್ ದೇಶ ಹೇಳಿಕೆಯನ್ನು ನೀಡಿದೆ.
- ಉದ್ಯೋಗಿಗಳ ಯೋಗಕ್ಷೇಮದ ಜಾಗತಿಕ ಶ್ರೇಯಾಂಕದಲ್ಲಿ ಜಪಾನ್ ಕೊನೆಯ ಸ್ಥಾನದಲ್ಲಿದೆ. ಭಾರತ 2 ನೇ ಸ್ಥಾನದಲ್ಲಿದ್ದು, ಟರ್ಕಿ ಮೊದಲ ಸ್ಥಾನದಲ್ಲಿದೆ. ಮೆಕಿನ್ಸೆ ಹೆಲ್ತ್ ಇನ್ಸ್ಟಿಟ್ಯೂಟ್ 30 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ದ್ವೀಪ ರಾಷ್ಟ್ರ ಜಪಾನ್ ಉದ್ಯೋಗ ಮತ್ತು ಉದ್ಯೋಗ ಭದ್ರತೆ ನೀಡುವಲ್ಲಿ ಖ್ಯಾತಿಗಳಿಸಿದೆಯಾದರೂ, ಉದ್ಯೋಗಿಗಳು ಸಂತುಷ್ಟರಾಗಿಲ್ಲ. ಇದರರ್ಥ ಕಠಿಣ ದುಡಿಮೆ, ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಸರ್ವೇಯಲ್ಲಿ ಉದ್ಯೋಗಿಗಳು ಜಪಾನ್ಗೆ ಶೇ.25 ಅಂಕ ನೀಡಿದ್ದಾರೆ. ಟರ್ಕಿ ಅತ್ಯಧಿಕ ಶೇ.78, ಭಾರತಕ್ಕೆ ಶೇ 76 ಮತ್ತು ಚೀನಾಕ್ಕೆ ಶೇ.75 ಅಂಕ ನೀಡಿದ್ದಾರೆ. ಜಾಗತಿಕ ಸರಾಸರಿ 57 ಆಗಿದೆ. ಅಂತಾರಾಷ್ಟ್ರೀಯ ಸಮೀಕ್ಷೆಗಳಲ್ಲಿ ಜಪಾನ್ ಸತತವಾಗಿ ಕಡಿಮೆ ರೇಟಿಂಗ್ ಹೊಂದಿದೆ. ಜಪಾನ್‌ನಲ್ಲಿ ಕೆಲಸದ ಸ್ಥಳದಲ್ಲಿ ತೃಪ್ತಿಯ ಕೊರತೆ ಇದೆ. ಒತ್ತಡದೊಂದಿಗೆ ಗಮನಾರ್ಹ ಸಮಸ್ಯೆಗಳಿವೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಅಲ್ಪಾವಧಿಯ ಒಪ್ಪಂದಗಳಲ್ಲಿದ್ದಾರೆ, ಇದು ಅವರಲ್ಲಿ ಅನಿಶ್ಚಿತತೆ ಕಾಡುವಂತೆ ಮಾಡಿದೆ.
- ಸ್ಯಾನ್ ಸಾಲ್ವಡಾರ್ನಲ್ಲಿ ನಡೆದ ’72ನೇ ಮಿಸ್ ಯೂನಿವರ್ಸ್ 2023′ ಸ್ಪರ್ಧೆಯಲ್ಲಿ ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ಈ ವರ್ಷದ ‘ಮಿಸ್ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಸ್ಪರ್ಧೆಯಲ್ಲಿ 84 ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಬಾರಿ ಭಾರತವನ್ನು ಪ್ರತಿನಿಧಿಸಿದ ಶ್ವೇತಾ ಶಾರದಾ ಅಗ್ರ 20 ಫೈನಲಿಸ್ಟ್ಗಳಲ್ಲಿ ಸ್ಥಾನ ಪಡೆದರು. ಭಾರತವನ್ನು ಪ್ರತಿನಿಧಿಸಿರುವ ಶ್ವೇತಾ ಶಾರದಾ (23) ಚಂಡೀಗಢದ ಮೂಲದವರು. ಅವರು ‘ಮಿಸ್ ದಿವಾ ಯುನಿವರ್ಸ್ 2023’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.