Published on: April 23, 2024
ಚುಟುಕು ಸಮಾಚಾರ : 22 ಏಪ್ರಿಲ್ 2024
ಚುಟುಕು ಸಮಾಚಾರ : 22 ಏಪ್ರಿಲ್ 2024
- ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಸಿರು ಅಭಿಯಾನ: ನೀರಿನ ಬವಣೆ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು ಮರು ಅಭಿವೃದ್ಧಿಗೊಳಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಕ್ರಿಕೆಟ್ ಫ್ರ್ಯಾಂಚೈಸಿ ಮುಂದಾಗಿದೆ. ತಂಡದ ಹಸಿರು ಅಭಿಯಾನ ಯೋಜನೆಯಲ್ಲಿ ಕಾರ್ಯವನ್ನೂ ಫ್ರ್ಯಾಂಚೈಸಿಯು ಕೈಗೆತ್ತಿಕೊಂಡಿದೆ. ಇಟ್ಟಗಾಲಪುರ ಕೆರೆ ಮತ್ತು ಸದೇನಹಳ್ಳಿ ಕೆರೆ ಪುನರಾಭಿವೃದ್ಧಿ ಕಾರ್ಯವು ಮುಕ್ತಾಯ ಹಂತ ತಲುಪಿದೆ. ಕಣ್ಣೂರು ಕೆರೆಯಲ್ಲಿ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಆರ್ ಸಿಬಿಯು ಇಎಸ ಜಿ ಬದ್ಧತೆಯಡಿಯಲ್ಲಿ ಕೆರೆ ಸುಧಾರಣೆ ಕಾರ್ಯಯೋಜನೆಯನ್ನು ಆರಂಭಿಸಿದೆ. ಕಾವೇರಿ ನೀರಿನಿಂದ ವಂಚಿತವಾಗಿರುವ ಹಾಗೂ ಅಂತರ್ಜಲ ಮತ್ತು ಮಳೆ ನೀರಿನ ಮೂಲದ ಮೇಲೆಯೇ ಅವಲಂಬಿತವಾಗಿರುವ ಪ್ರದೇಶಗಳ ಜಲಮೂಲಗಳನ್ನು ಅಭಿವೃದ್ಧಿ ಪಡಿಸುವ ಗುರಿಹೊಂದಿದೆ. ಬೆಂಗಳೂರಿನ ಪ್ರಮುಖ ಕೆರೆಗಳನ್ನು ಮರಳಿ ಅಭಿವೃದ್ಧಿ ಪಡಿಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೇ ಅಕ್ಕ ಪಕ್ಕದ ಗ್ರಾಮಗಳಿಗೆ ಕೃಷಿ ಮತ್ತಿತರ ಕಾರ್ಯಗಳಿಗೂ ನೀರಿನ ಸೌಲಭ್ಯ ಒದಗಿಸಲಿದೆ.
- ದಿಗಂತರ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ ಅಪ್: ಬಾಹ್ಯಾಕಾಶ ಕಣ್ಗಾವಲು ಉಪಗ್ರಹವನ್ನು ಉಡಾಯಿಸಲು ಬೆಂಗಳೂರಿನಲ್ಲಿ ಸಜ್ಜುಗೊಂಡಿರುವ ಬಾಹ್ಯಾಕಾಶ ವಲಯದ ಸ್ಟಾರ್ಟ್ ಅಪ್ ‘ದಿಗಂತರ’ದ ಜಾಗತಿಕ ಪ್ರಧಾನ ಕಚೇರಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಉದ್ಘಾಟಿಸಿದರು. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಧಾನ ಕಚೇರಿಯು ಉಪಗ್ರಹ ಜೋಡಣೆ, ಸಮಗ್ರೀಕರಣ ಮತ್ತು ಪರೀಕ್ಷೆ (ಎಐಟಿ) ಸೌಲಭ್ಯ ಹಾಗೂ ಸಮಗ್ರ ಬಾಹ್ಯಾಕಾಶದ ಅಧಿಪತ್ಯದ ಕುರಿತು ಜಾಗೃತಿ ಮೂಡಿಸುವ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಒಳಗೊಂಡಿದೆ. ಈ ಸೌಲಭ್ಯ ವು ಬಾಹ್ಯಾಕಾಶದಲ್ಲಿ ಉಪಗ್ರಹಗಳ ಸಂಚಾರದ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು, ಜಗತ್ತಿನಾದ್ಯಂತ ಉಪಗ್ರಹ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಖಾತ್ರಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ದಿಗಂತರ
ಸ್ಥಾಪಕರು: ಅನಿರುದ್ಧ ಶರ್ಮ, ರಾಹುಲ್ ರಾವತ್ ಮತ್ತು ತನವೀರ ಅಹ್ಮದ್
ಸುರಕ್ಷಿತ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ನಿಖರವಾದ ಮತ್ತು ನೈಜ-ಸಮಯದ ಕಕ್ಷೆಯ ಒಳನೋಟಗಳನ್ನು ತಲುಪಿಸುವತ್ತ ಗಮನಹರಿಸುತ್ತದೆ.
- ಜನಪ್ರಿಯ ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಕೆನಡಾದ ಟೊರೆಂಟೊದ ರಿಚ್ಮಂಡ್ ಗ್ಯಾಬ್ರಿಯಲ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ. ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ವಿಜಯ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ವಿಜಯ್ ಪ್ರಕಾಶ್ ಜತೆಗೆ ತಮಿಳು ಗಾಯಕ ಶ್ರೀ ನಿವಾಸ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗಿದೆ. ವಿಜಯ್ ಪ್ರಕಾಶ್ ಅವರಿಗೆ ಸಂಗೀತ ಕ್ಷೇತ್ರದ ಅವರ ಸಾಧನೆಗೆ ದೊರೆತ ಮೊದಲ ಗೌರವ ಡಾಕ್ಟರೇಟ್ ಇದಾಗಿದೆ.
- ಹಿರಿಯ ಐಪಿಎಸ್ ಅಧಿಕಾರಿ ನಳಿನ್ ಪ್ರಭಾತ್ ಅವರನ್ನು ದೇಶದ ಭದ್ರತಾ ನಿಗ್ರಹ ಸಂಸ್ಥೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್ಎಸಜಿ) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಎನ್ಎಸಜಿಯ ಪ್ರಧಾನ ನಿರ್ದೇಶಕರಾಗಿ ಅವರ ನೇಮಕವನ್ನು ಸಂಪುಟದ ನೇಮಕಾತಿ ಸಮಿತಿಯು (ಎಸಿಸಿ) ಅನುಮೋದನೆಗೊಳಿಸಿದೆ. ಅವರು 2028ರ ಆಗಸ್ಟ್ 31ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ.
- ಭಾರತೀಯ ವಿಜ್ಞಾನ ಸಂಸ್ಥೆ(IISC)ಯು ‘ದೀರ್ಘಾಯು ಭಾರತ ಉಪಕ್ರಮ’ ಯೋಜನೆಯನ್ನು ಘೋಷಿಸಿದೆ. ಇದರಡಿ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಅಧ್ಯಯನ ಕೈಗೊಳ್ಳಲಾಗುತ್ತದೆ. ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಯ ಮೂಲಕ ವಯಸ್ಸಾಗುವಿಕೆಯನ್ನು ಅರ್ಥೈಸಿಕೊಳ್ಳಲಾಗುವುದು. ವ್ಯಕ್ತಿಯ ಜೀವನದ ಗುಣಮಟ್ಟ ಹೆಚ್ಚಿಸಲು ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗೆ ಪ್ರಶಾಂತ್ ಪ್ರಕಾಶ್ ಸಹ ಸ್ಥಾಪಕತ್ವದ ಏಸೆಲ್ ಇಂಡಿಯಾ ಆರಂಭಿಕ ದೇಣಿಗೆ ನೀಡಿದೆ.
- ಭಾರತದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಆರಂಭಿಸಲು ಇಂಡಿಗೊ ಕಂಪನಿಯ ಮಾತೃಸಂಸ್ಥೆಯಾದ ಇಂಟರ್ ಗ್ಲೋಬಲ್ ಎಂಟರ್ಪ್ರೈಸಸ್ ಮತ್ತು ಅಮೆರಿಕದ ಆರ್ಚರ್ ಏವಿಯೇಷನ್ ಜಂಟಿಯಾಗಿ ಸಿದ್ಧತೆ ನಡೆಸಿವೆ.
- ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯವು ‘ರಾಷ್ಟ್ರೀಯ ಮಿದುಳು ಆರೋಗ್ಯ ಕಾರ್ಯಪಡೆ‘ಯನ್ನು ರಚಿಸಿದೆ. ಮಿದುಳಿಗೆ ಸಂಬಂಧಿಸಿದ ತೊಂದರೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಎಲ್ಲ ಹಂತದವರೆಗೆ ಲಭ್ಯವಿರುವ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶ, ಸಂಭಾವ್ಯ ತೊಂದರೆಯನ್ನು ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಚಾರ ನಡೆಸುವುದು ಹಾಗೂ ಮಿದುಳಿನ ತೊಂದರೆಯಿಂದ ಗುಣಮುಖರಾದವರ ಪುನರ್ವಸತಿಗೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಲಾಗಿದೆ.
- ಪೂರ್ವಿ ಲೆಹರ್ ಸಮರಾಭ್ಯಾಸ: ಭಾರತದ ನೌಕಾಪಡೆಯು ಸವಾಲುಗಳನ್ನು ಎದುರಿಸಲು ತಾನು ಎಷ್ಟರಮಟ್ಟಿಗೆ ಸಜ್ಜಾಗಿದ್ದೇನೆ ಎಂಬುದನ್ನು ಅರಿಯುವ ಯತ್ನದ ಭಾಗವಾಗಿ ಪೂರ್ವ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಸಮರಾಭ್ಯಾಸ ನಡೆಸಲಾಗಿದೆ. ಈ ಸಮರಾಭ್ಯಾಸವನ್ನು ಪೂರ್ವ ನೌಕಾದಳದ ಕಮಾಂಡಿಂಗ್-ಇನ್-ಚೀಫ್, ಫ್ಲಾಗ್ ಆಫೀಸರ್ ಅವರ ಕಾರ್ಯಾಚರಣೆಯ ನಿಯಂತ್ರಣದಲ್ಲಿ ನಡೆಸಿತು. ‘ಪೂರ್ವಿ ಲೆಹರ್’ ಹೆಸರಿನ ಈ ಸಮರಾಭ್ಯಾಸದಲ್ಲಿ ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ವಿಮಾನಗಳು ಮತ್ತು ನೌಕಾಪಡೆಯ ವಿಶೇಷ ತಂಡಗಳು ಪಾಲ್ಗೊಂಡಿದ್ದವು. ಹಲವು ಹಂತಗಳಲ್ಲಿ ಅಭ್ಯಾಸ ನಡೆಸಲಾಗಿದೆ. ವಾಸ್ತವಕ್ಕೆ ಹತ್ತಿರವಾದ ಸನ್ನಿವೇಶದಲ್ಲಿ ಎದುರಾಳಿಗಳ ಜೊತೆ ಸೆಣೆಸಾಟದ ತರಬೇತಿ, ಹಲವು ಬಗೆಯ ಶಸ್ತ್ರಾಸ್ತ್ರಗಳ ಬಳಕೆಯ ಅಭ್ಯಾಸ ನಡೆಸಲಾಗಿದೆ. ಪೂರ್ವ ಕಮಾಂಡ ಮಾತ್ರವೇ ಅಲ್ಲದೆ ಭಾರತೀಯ ವಾಯುಪಡೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕೂಡ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದರು. ಇದು ವಿವಿಧ ವಿಭಾಗಗಳ ಸಿಬ್ಬಂದಿಗಳ ನಡುವೆ ಹೆಚ್ಚಿನ ಪ್ರಮಾಣದ ಸಮನ್ವಯವನ್ನು ತೋರಿಸಿತು.
- ಪ್ರತಿ ವರ್ಷ ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತದೆ. 2024 ರ ಥೀಮ್: ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಎಂಬ ಥೀಮ್ ನಡಿಯಲ್ಲಿ 2040 ರ ವೇಳೆಗೆ ಪ್ಲಾಸ್ಟಿಕ್ ಬಳಕೆಯನ್ನು ಶೇ.60ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಧ್ವಜಾರೋಹಣ: ಭೂಮಿಯ ದಿನವನ್ನು ದ್ವಜಾರೋಹಣೆವನ್ನು ಮಾಡಿ ಆಚರಿಸಲಾಗುತ್ತದೆ. ಈ ದಿನದ ಧ್ವಜವು ಬಾರಿ ವಿಶೇಷತೆಗಳಿಂದ ಕೂಡಿದ್ದು, ಅಪೊಲೊ 17 ಸಿಬ್ಬಂದಿ 1972 ರಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಭೂಮಿಯ ಪ್ರಸಿದ್ಧ ಫೋಟೋವನ್ನು ಈ ಧ್ವಜದಲ್ಲಿ ಕಾಣಬಹುದು.