Published on: December 22, 2022
ಚುಟುಕು ಸಮಾಚಾರ – 22 ಡಿಸೆಂಬರ್ 2022
ಚುಟುಕು ಸಮಾಚಾರ – 22 ಡಿಸೆಂಬರ್ 2022
- ಕಾಡು ಕುರುಬರ ಜೊತೆಗೆ ಬೆಟ್ಟ ಕುರುಬರನ್ನೂ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರ್ಪಡೆ ಮಾಡುವ ಕುರಿತ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಕರ್ನಾಟಕದಲ್ಲಿ ನೆಲೆಸಿರುವ ಬೆಟ್ಟ ಕುರುಬರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ 2022ರ ದಿ ಕಾನ್ಸ್ಟಿಟ್ಯೂಷನ್ (ಶೆಡ್ಯೂಲ್ ಟ್ರೈಬ್) ಆರ್ಡರ್ (4ನೇ ತಿದ್ದುಪಡಿ) ಮಸೂದೆ ಅಂಗೀಕರಿಸಲಾಗಿದೆ. ಈ ಸಮುದಾಯದವರನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿಕೊಂಡಿತ್ತು’. ಹೆಸರೇ ಹೇಳುವ ಹಾಗೆ ಕಾಡುಕುರುಬರೆಂದರೆ ಕಾಡಿನಲ್ಲಿ ವಾಸಿಸುವ ಕುರುಬ ಜನಾಂಗದ ಜನರು. ಇವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕಾಡುಗಳಲ್ಲಿ ವಾಸಿಸುವ ಜನರು . ಇತಿಹಾಸದ ಪ್ರಕಾರ ಈ ಕುರುಬರು ಪಲ್ಲವ ಸಾಮ್ರಾಜ್ಯವನ್ನು ಕಟ್ಟಿ ಆಳಿದವರು, ಪಲ್ಲವ ಸಾಮ್ರಾಜ್ಯದ ಪತನದ ನಂತರ ಅವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡಿಗೆ ಬಂದು ನೆಲಸಿದರೆಂದು ಇತಿಹಾಸ ತಜ್ಞರು ಹೇಳುತ್ತಾರೆ.
- ದಿಲ್ಲಿ ಹಾತ್ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿಯೂ ಕರಕುಶಲ ಗ್ರಾಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
- ಚೀನಾದಲ್ಲಿ ಸದ್ಯ ಹೆಚ್ಚುತ್ತಿರುವ ಕೊರೊನಾ ವೈರಸ್ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಬಿಎಫ್.7 ವೈರಾಣು ಭಾರತದಲ್ಲೂ ಪತ್ತೆಯಾಗಿದೆ.
- ಗಡಿಯಲ್ಲಿ ಚೀನಾ ಹಾವಳಿ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಅರುಣಾಚಲ ಪ್ರದೇಶದಲ್ಲಿ ಸೇನಾ ವಾಹನಗಳ ಸುಲಭ ಸಂಚಾರಕ್ಕೆ 1,748 ಕಿ.ಮೀ ಉದ್ದದ ಹೊಸ ಹೆದ್ದಾರಿ ನಿರ್ಮಿಸಲು ಮುಂದಾಗಿದೆ. ಉದ್ದೇಶಿತ ‘ಫ್ರಾಂಟಿಯರ್ ಹೈವೆ’ಯು ಭಾರತ – ಟಿಬೆಟ್ – ಚೀನಾ – ಮ್ಯಾನ್ಮಾರ್ ಗಡಿಯ ಸಮೀಪದಲ್ಲೇ ಹಾದುಹೋಗಲಿದ್ದು, ಸೇನಾ ವ್ಯೂಹಾತ್ಮಕ ದೃಷ್ಟಿಯಿಂದ ಭಾರತದ ಪಾಲಿಗೆ ಮಹತ್ವದ್ದಾಗಿರಲಿದೆ.
- ಸ್ಕಾರ್ಪೀನ್ ಸರಣಿಯ 5ನೇ ಜಲಾಂತರ್ಗಾಮಿ ನೌಕೆ ‘ಐಎನ್ಎಸ್ ವಾಗೀರ್’ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಅಕ್ಟೋಬರ್ 2005 ರಲ್ಲಿ ಫ್ರಾನ್ಸ್ ನ ನೇವಲ್ ಗ್ರೂಪನೊಂದಿಗೆ 3.75 ಶತಕೋಟಿ ಡಾಲರ್ ಒಪ್ಪಂದದಡಿ ಆರು ಸ್ಕ್ಯಾರ್ಪಿನ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಜಲಾಂತರ್ಗಾಮಿ ಐಎನ್ಎಸ ಕಲ್ವರಿಯನ್ನು ಡಿಸೆಂಬರ್ 2017, ಎರಡನೆಯ ಐಎನ್ಎಸ ಖಂಡೇರಿ ಸೆಪ್ಟೆಂಬರ್ 2019 , ಮೂರನೆಯದು ಐಎನ್ಎಸ ಕಾರಂಜ್ ಮಾರ್ಚ್ 2021 ರಲ್ಲಿ ಮತ್ತು ನಾಲ್ಕನೆಯದು ಐಎನ್ಎಸ ವೇಲಾ ನವೆಂಬರ್ 2021 ರಲ್ಲಿ ಸೇವೆ ಗೆ ಸೇರ್ಪಡೆಗೊಂಡಿತ್ತು
- ನೌಕರರು ತಮಗೆ ನೌಕರಿ ನೀಡಿದವರ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಯಾವುದೇ ಕೆಲಸ ಮಾಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಯಾವುದೇ ಕಂಪನಿಯ ಪೂರ್ಣಾವಧಿ ನೌಕರನು ತನಗೆ ನೌಕರಿ ನೀಡಿದ ಕಂಪನಿಗೆ ತಿಳಿಸದೆಯೇ ಹೆಚ್ಚುವರಿ ಉದ್ಯೋಗ ಕೈಗೊಂಡರೆ ಅದನ್ನು ಮೂನ್ಲೈಟಿಂಗ್ ಎನ್ನಲಾಗುತ್ತದೆ. ‘ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ 1946ರ ಅನ್ವಯ, ನೌಕರನು ತಾನು ಕೆಲಸ ಮಾಡುವ ಕಂಪನಿಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ ಮತ್ತು ಕಂಪನಿಯಲ್ಲಿ ತಾನು ಹೊಂದಿರುವ ಉದ್ಯೋಗಕ್ಕೆ ಹೆಚ್ಚುವರಿಯಾಗಿ, ಆ ಕಂಪನಿಯ ಹಿತಾಸಕ್ತಿಗಳ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲ ಇನ್ನೊಂದು ಉದ್ಯೋಗ ಮಾಡುವಂತಿಲ್ಲ’
- ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಆಕೃತಿ ತೋಳ ಚೌಕಿ ಮತ್ತು ಭಿಷನ್ಪುರ್ ನಡುವೆ ಹರಿಯುವ ಬುಧಿ ಗಂಡಕ್ ನದಿಗೆ ಅಡ್ಡಲಾಗಿ ಸುಮಾರು 206 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಉದ್ಘಾಟನೆಗೂ ಮುನ್ನವೇ ಕುಸಿದಿದೆ. ಮುಖ್ಯಮಂತ್ರಿ ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್) ಯೋಜನೆಯಡಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ, ಸಂಪರ್ಕಿಸುವ ರಸ್ತೆಯ ಕೊರತೆಯಿಂದ ಸೇತುವೆಯ ಉದ್ಘಾಟನೆಯಾಗಿದ್ದಿಲ್ಲ.. ವರದಿಗಳ ಪ್ರಕಾರ ಈ ಸೇತುವೆಯ ಕಾಮಗಾರಿ 2016ರಲ್ಲಿ ಆರಂಭಿಸಲಾಗಿತ್ತು. 2017ರಲ್ಲಿ ಸೇತುವೆ ಕಾಮಗಾರಿ ಮುಕ್ತಾಯ ಆಗಿತ್ತು.
- ವಿಶ್ವಸಂಸ್ಥೆ 2023ರ ವರ್ಷವನ್ನು ‘ರಾಗಿ ವರ್ಷ’ ಎಂದು ಘೋಷಣೆ ಮಾಡಿದೆ. ಪೌಷ್ಟಿಕಾಂಶ ಅಭಿಯಾನದ ಭಾಗವಾಗಿ ರಾಗಿ ಒಳಗೊಂಡ ಸಿರಿಧಾನ್ಯ ಬಳಕೆಗೆ ಹೆಚ್ಚು ಪ್ರೋತ್ಸಾಹ ಹಾಗೂ ಪ್ರಚಾರ ನೀಡುವಂತೆ ಸೂಚಿಸಿದ್ದರು. ಸಿರಿಧಾನ್ಯಗಳನ್ನು ಪೌಷ್ಟಿಕಾಂಶದ ಕಣಜ ಎಂದು ಗುರುತಿಸಿದ ಪ್ರಧಾನಿ ಮೋದಿ ಮನವಿಯಂತೆ 2023ರ ವರ್ಷವನ್ನು ರಾಗಿ ವರ್ಷವಾಗಿ ಆಚರಣೆಗೆ ವಿಶ್ವಸಂಸ್ಥೆ ಕರೆ ನೀಡಿದೆ.
- ಭಾರತದ ಸರ್ಗಂ ಕೌಶಲ್ ಅವರು 2022ನೇ ಸಾಲಿನ ಮಿಸೆಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಭಾರತದ ನಟಿ ಹಾಗೂ ರೂಪದರ್ಶಿ ಅದಿತಿ ಗೋವಿತ್ರಿಕರ್ ಅವರು 2001ರಲ್ಲಿ ಮಿಸೆಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು.
- ಪರೀಕ್ಷಾ ಕೊಠಡಿಗಳಲ್ಲಿ ಹೆಣ್ಣು ಮಕ್ಕಳು ಅಬಯಾ (ಬುರ್ಖಾ ಮಾದರಿಯ ನಿಲುವಂಗಿ) ವಸ್ತ್ರ ಧರಿಸುವುದಕ್ಕೆ ಸೌದಿ ಅರೇಬಿಯಾ ನಿಷೇಧ ಹೇರಿದೆ. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಬೇಕು. ವಸ್ತ್ರ ರಾಜಪ್ರಭುತ್ವದ ಸಾರ್ವಜನಿಕ ಸಭ್ಯತೆಯ ನಿಯಮಾವಳಿಗೆ ಬದ್ಧವಾಗಿರಬೇಕು ಎಂದು ಎಂದು ಅದು ಹೇಳಿದೆ. ಭಾರತೀಯ ಮುಸಲ್ಮಾನ ಮಹಿಳೆಯರು ಬುರ್ಖಾ ಧರಿಸುವಂತೆ, ಮಧ್ಯಪ್ರಾಚ್ಯದ ಬಹುತೇಕ ಕಡೆ, ಉತ್ತರ ಆಫ್ರಿಕಾದಲ್ಲಿ ಹಾಗೂ ಅರೆಬಿಯನ್ ಪರ್ಯಾಯ ದ್ವೀಪದಲ್ಲಿ ‘ಅಬಯಾ‘ ಎನ್ನುವ ನಿಲುವಂಗಿಯನ್ನು ಧರಿಸುತ್ತಾರೆ. 2018ರಲ್ಲಿ ‘ಅಬಯಾ‘ ವಸ್ತ್ರ ಕಡ್ಡಾಯವಲ್ಲ ಎಂದು ಸೌದಿ ಆರೇಬಿಯಾ ಘೋಷಣೆ ಮಾಡಿತ್ತು. ಖಟ್ಟರ್ ಇಸ್ಲಾಮಿಕ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿ, ಮೊಹಮ್ಮದ್ ಬಿನ್ ಸಲ್ಮಾನ್ ಅಧಿಕಾರ ವಹಿಸಿಕೊಂಡ ಬಳಿಕ, ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವುದು ಸಹಿತ ಹಲವು ಸುಧಾರಣೆಗಳನ್ನು ತಂದಿದ್ದರು.
- ಅಫ್ಗಾನಿಸ್ತಾನದ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿಷೇಧಿಸಿ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದೆ. ಕೆಲದಿನಗಳ ಹಿಂದಷ್ಟೇ ಮಹಿಳೆಯರಿಗೆ ಪಾರ್ಕ್, ಜಿಮ್, ಶಾಲೆ, ಉದ್ಯೋಗ ಕ್ಷೇತ್ರಕ್ಕೆ ನಿಷೇಧ ಹೇರಿತ್ತು. ಅಲ್ಲದೇ ಸಂಪೂರ್ಣವಾಗಿ ಇಸ್ಲಾಮಿಕ್ ಕಾನೂನು ಅಥವಾ ಷರಿಯಾವನ್ನು ಜಾರಿಗೊಳಿಸುವ ಮೂಲಕ ಮಹಿಳೆಯರು ಕಡ್ಡಾಯವಾಗಿ ಅಡಿಯಿಂದ ಮುಡಿಯವರೆಗೆ ವಸ್ತ್ರಧರಿಸುವಂತೆ ಆದೇಶಿಸಿತ್ತು. ಶಾಲೆಗಳನ್ನು ಮತ್ತೆ ತೆರೆಯಲು ಮತ್ತು ಮಹಿಳೆಯರಿಗೆ ಸಾರ್ವಜನಿಕ ಸ್ಥಳದ ಹಕ್ಕನ್ನು ನೀಡುವಂತೆ ಅಂತರರಾಷ್ಟ್ರೀಯ ಸಮುದಾಯವು ತಾಲಿಬಾನ್ ನಾಯಕರನ್ನು ಒತ್ತಾಯಿಸಿದೆ.