Published on: December 30, 2022
ಚುಟುಕು ಸಮಾಚಾರ – 30 ಡಿಸೆಂಬರ್ 2022
ಚುಟುಕು ಸಮಾಚಾರ – 30 ಡಿಸೆಂಬರ್ 2022
- ರಾಮನಗರದಲ್ಲಿರುವ ಪ್ರಸಿದ್ಧ ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆಯ ರಾಮ ಮಂದಿರದ ಮಾದರಿ ದೇವಾಲಯ ನಿರ್ಮಾಣ, ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಸೂಚನೆ ನೀಡಿದ್ದಾರೆ.
- ಇದೇ ಮೊದಲ ಬಾರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಕರ್ನಾಟಕದ ಜಲಮೂಲಗಳು ಮತ್ತು ಕರಾವಳಿಗಳ ಪರಿಸರ ಮತ್ತು ಆರ್ಥಿಕ ಮೌಲ್ಯವನ್ನು ಅಧ್ಯಯನ ಮಾಡಲು ಮುಂದಾಗಿದ್ದಾರೆ. ಬ್ಲ್ಯೂ ಎಕಾನಮಿ ಉಪಕ್ರಮ: ಅಧ್ಯಯನವು ಕೇಂದ್ರ ಸರ್ಕಾರ ಮತ್ತು ವಿಶ್ವಬ್ಯಾಂಕ್ನ ಜಂಟಿ ಉಪಕ್ರಮದ ಭಾಗವಾಗಿದೆ. ಅಧ್ಯಯನ ಕೈಗೊಳ್ಳುತ್ತಿರುವವರು : ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಅಧ್ಯಯನವನ್ನು ಕೈಗೊಳ್ಳುತ್ತಿದೆ. ಅಧ್ಯಯನದಲ್ಲಿ ಭಾಗಿಯಾಗುವವರು: ತಜ್ಞರು, ಪರಿಸರ ತಜ್ಞರು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧಿಕಾರಿಗಳು ಕೂಡ ಯೋಜನೆಯ ಭಾಗವಾಗಿರುತ್ತಾರೆ.
- ಗಿಗ್ ವರ್ಕರ್ಸ್ ವ್ಯಾಪ್ತಿಗೆ ಬರುವ ಡೆಲಿವರಿ ಬಾಯ್ಗಳು, ಕ್ಯಾಬ್ ಓಡಿಸುವ ಚಾಲಕರು, ಗುತ್ತಿಗೆ ಆಧಾರದ ಮೇಲೆ ಅಥವಾ ಬೇಡಿಕೆ ಆಧಾರದ ಮೇಲೆ ಕೆಲಸಕ್ಕೆ ಸೇರಿದವರನ್ನು ಪಿಂಚಣಿ ವ್ಯಾಪ್ತಿಗೆ ತರಲು ಭಾರತೀಯ ಪಿಂಚಣಿ ನಿಧಿ ನಿರ್ವಾಹಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
- ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ಅಧಿಕೃತ ಖಾತೆಗೆ ನೀಡುತ್ತಿದ್ದ ಟಿಕ್ ಮಾರ್ಕ್ ನೀತಿಯಲ್ಲಿ ಬದಲಾವಣೆ ಮಾಡಿದೆ. ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಿಗೆ ಗ್ರೇ ಟಿಕ್ ವೆರಿಫಿಕೇಶನ್ ಮಾರ್ಕ್ ಮತ್ತು ಖಾಸಗಿ ಕಂಪನಿಗಳಿಗೆ ಗೋಲ್ಡನ್ ಟಿಕ್ ಮಾರ್ಕ್ ಅನ್ನು ನೀಡಲು ಟ್ವಿಟರ್ ಪ್ರಾರಂಭಿಸಿದೆ. ಆದರೆ ಉಳಿದ ಪರಿಶೀಲಿಸಿದ ಖಾತೆಗಳಿಗೆ ನೀಲಿ ಟಿಕ್ ಮಾರ್ಕ್ ಮುಂದುವರೆಯಲಿದೆ. ಟ್ವಿಟರ್ ಕೇಂದ್ರ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಇದ್ದ ಬ್ಲೂ ಟಿಕ್ ಮಾರ್ಕ್ ಅನ್ನು ಗ್ರೇ ಟಿಕ್ ಗೆ ಬದಲಾಯಿಸಿದೆ.
- ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಅವರು ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ‘ಪ್ರಚಂಡ’ ಅವರು ಮೂರನೇ ಬಾರಿ ನೇಪಾಳ ಪ್ರಧಾನಿ ಗದ್ದುಗೆ ಏರಿದರು.
- ವಿಧಾನಸಭೆಯಿಂದ ನೀಡಲಾಗುವ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಕಾಂಗ್ರೆಸ್ನ ಆರ್.ವಿ.ದೇಶಪಾಂಡೆ ಅವರು ಆಯ್ಕೆಯಾಗಿದ್ದಾರೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯು ಅವರನ್ನು ಆಯ್ಕೆ ಮಾಡಿದೆ. ಎಂಟು ಬಾರಿ ಶಾಸಕರಾಗುವ ಅನುಭವ ಹೊಂದಿರುವ ದೇಶಪಾಂಡೆ., ಹಲವು ಇಲಾಖೆಗಳಲ್ಲಿ ಸಚಿವರಾಗಿ ಅನುಭವ ಹೊಂದಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದ ಶಾಸಕರಾಗಿದ್ದ್ದಾರೆ. ಅತ್ಯುತ್ತಮ ಶಾಸಕ ಪ್ರಶಸ್ತಿ 2021 ರಿಂದ ಆರಂಭಗೊಂಡಿದೆ. ಸದನದ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವ ಶಾಸಕರಿಗೆ ನೀಡುವ ಗೌರವ ಇದಾಗಿದೆ. ಕಳೆದ ಬಾರಿ ಈ ಪ್ರಶಸ್ತಿಯನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನೀಡಲಾಗಿತ್ತು.