Published on: November 9, 2023
ಚುಟುಕು ಸಮಾಚಾರ : 7-8 ನವೆಂಬರ್ 2023
ಚುಟುಕು ಸಮಾಚಾರ : 7-8 ನವೆಂಬರ್ 2023
- ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡಲು ಬಯಸುವ ಅನಿವಾಸಿ ಭಾರತೀಯರಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ತೆರೆಯಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಅಥವಾ ಮಾನದಂಡಗಳಿಗೆ ಅನುಗುಣವಾಗಿ ಕೇರಳ ರಾಜ್ಯದಲ್ಲಿ ಸ್ಥಾಪನೆಯಾಗಿರುವಂತೆಯೇ ಇಲ್ಲಿಯೂ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಲಿದೆ.
- ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ನಗರಕ್ಕೆ ಪ್ರತ್ಯೇಕ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಸೂಚನೆ ನೀಡಿದ್ದಾರೆ. ಈ ಬಾರಿ ಮಳೆಯ ಅಭಾವ ಇರುವ ಹಿನ್ನೆಲೆಯಲ್ಲಿ ಆಹಾರ ಹುಡುಕಿಕೊಂಡು ವನ್ಯ ಮೃಗಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬೆಂಗಳೂರು ನಗರದ ಹೊರವಲಯದಲ್ಲಿ ಕಾಡು ಮತ್ತು ಬೆಟ್ಟಗುಡ್ಡ ಇರುವ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಕೂಡಲೇ ಬೆಂಗಳೂರಿನಲ್ಲಿ ಒಂದು ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸಿ, ವನ್ಯಮೃಗಗಳು ನಾಡಿಗೆ ಬಂದರೆಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚಿಸಲಾಗಿದೆ.
- ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಿಂದ ತನ್ನ ಕೋಬ್ರಾ ಪಡೆಯನ್ನು ಹಿಂಪಡೆಯಲು ನಿರ್ಧರಿಸಿದೆ. 2008 ರಲ್ಲಿ ಸ್ಥಾಪಿತವಾದ CoBRA(ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) CRPFನ ವಿಶೇಷ ಘಟಕವಾಗಿದೆ.
- ಇತ್ತೀಚೆಗೆ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ರಾಜ್ಯ ಡಿಜಿಪಿಗಳ ನೇಮಕಾತಿಗಾಗಿ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದೆ. ನಿವೃತ್ತಿಯ ಮೊದಲು ಕನಿಷ್ಠ ಆರು ತಿಂಗಳ ಸೇವೆಯನ್ನು ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಮಾತ್ರ ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲು ಪರಿಗಣಿಸಲಾಗುವುದು ಎಂದು ಕೇಂದ್ರ ಲೋಕಸೇವಾ ಆಯೋಗ (UPSC) ಇತ್ತೀಚೆಗೆ ಹೊರಡಿಸಿದ ತಿದ್ದುಪಡಿ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
- ಇತ್ತೀಚಿನ ಅಧ್ಯಯನಗಳ ಪ್ರಕಾರ ಚೆನ್ನೈ ಮತ್ತು ದೆಹಲಿಯಲ್ಲಿ ವಾಯು ಮಾಲಿನ್ಯವು ಟೈಪ್ 2 ಮಧುಮೇಹದ ಅಪಾಯವನ್ನುಂಟು ಮಾಡಿದೆ. ಪಿಎಂ(ಪರ್ಟಿಕ್ಯುಲೇಟ್ ಮ್ಯಾಟರ್) 2.5 ಗೆ ಒಂದು ತಿಂಗಳು ಒಡ್ಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ ಮತ್ತು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಧುಮೇಹದ ಮಟ್ಟವು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮಧುಮೇಹದ ಅಪಾಯವು 22% ರಷ್ಟು ಹೆಚ್ಚಾಗಿದೆ.