Published on: November 19, 2023

ಚುಟುಕು ಸಮಾಚಾರ:17-18 ನವೆಂಬರ್ 2023

ಚುಟುಕು ಸಮಾಚಾರ:17-18 ನವೆಂಬರ್ 2023

  • ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ -2ರಡಿ ಹೆಚ್ಚುವರಿ 5 ಯೋಜನೆಗಳನ್ನು 5 ತಾಲೂಕುಗಳಲ್ಲಿಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಸಂಪುಟ ನಿರ್ಧಾರ ಕೈಗೊಂಡಿತು. ಬಾಗಲಕೋಟೆಯ ಬಾದಾಮಿ, ಬೆಳಗಾವಿಯ ಚಿಕ್ಕೋಡಿ, ಮಂಡ್ಯ ಜಿಲ್ಲೆಯ ಮಂಡ್ಯ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕುಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ 5 ತಾಲೂಕುಗಳಲ್ಲಿ ಪರ್ಯಾಯ ಬೆಳೆ ವ್ಯವಸ್ಥೆ ಹಾಗೂ ಪಶು ಸಂಗೋಪನೆ ಮೂಲಕ ರೈತರ ಆದಾಯವನ್ನು ದೃಢಪಡಿಸುವುದು, ಸಮರ್ಥ ನೀರು ಕೊಯ್ಲು, ಮಣ್ಣಿನ ತೇವಾಂಶ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ ವೈ) ಅನ್ನು 2015-16 ರಲ್ಲಿ ಆರಂಭಿಸಲಾಯಿತು.
  • ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ, ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆ–ರೈಡ್) ಅಧಿಕಾರಿಗಳು ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು. 2018ರಲ್ಲಿ ರಾಷ್ಟ್ರೀಯ ಉಪನಗರ ರೈಲು ನೀತಿ ಜಾರಿಗೊಳಿಸಿದ ಬಳಿಕ ದೇಶದ ಮೊದಲ ಯೋಜನೆಯಾಗಿ ಬಿಎಸ್ಆರ್ಪಿಯನ್ನು ರೂಪಿಸಲಾಗಿತ್ತು. 2022ರಲ್ಲಿ ಪ್ರಧಾನಿ ಅವರು  ಶಂಕುಸ್ಥಾಪನೆ ನೆರವೇರಿಸಿದ್ದರು.
  • ಮಳೆಯಾಶ್ರಿತ ಪ್ರದೇಶದಲ್ಲಿ ಸುಸ್ಥಿರ ಕೃಷಿಗೆ ಒತ್ತು ನೀಡುವ ‘ಕೃಷಿ ಭಾಗ್ಯ’ ಯೋಜನೆಯನ್ನು ಮರು ಜಾರಿ ಮಾಡುವ ಮಹತ್ವದ ತೀರ್ಮಾನವನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. ನಿರ್ಧರಿಸಲಾಗಿದೆ. ಮಳೆಯಾಶ್ರಿತ ಕೃಷಿ ನೀತಿ -2014 ರನ್ವಯ 24 ಜಿಲ್ಲೆಗಳಲ್ಲಿನ ಒಟ್ಟು 106 ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಯೋಜನೆಯನ್ನು ಜಾರಿ ಮಾಡಲು 100 ಕೋಟಿ ರೂ. ಒದಗಿಸಲಾಗುವುದು.
  • ಅಖಿಲ ಭಾರತ, ಸುಸಂಘಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನ ಸಹಕಾರದೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಧರ್ತಿಮಿತ್ರ ಎಂಬ ವೆಬ್ಸೈಟ್ ಮತ್ತು ಮೊಬೈಲ್ ಆಪ್ನ್ನು ಅಭಿವೃದ್ಧಿ ಪಡಿಸಿದೆ. ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರು ಈ ಆಪ್ ಅನ್ನು ಲೋಕಾರ್ಪಣೆಗೊಳಿಸಿದರು. ಧರ್ತಿಮಿತ್ರ ಅಪ್ ಅನ್ನು – ಬೆಂಗಳೂರು ಗ್ರಾಮಾಂತರ, ಕೋಲಾರ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅಭಿವೃದ್ಧಿಪಡಿಸಲಾಗಿದೆ.
  • ಮುಂಬೈ , ಚೆನ್ನೈ ನಂತರ ಬೆಂಗಳೂರು ಸಿಎಪಿ ಕರಡು ಸಿದ್ಧಪಡಿಸಲಿದ್ದು, 2050ರ ವೇಳೆಗೆ ‘ತಟಸ್ಥ ಇಂಗಾಲ(ಕಾರ್ಬನ್ ನ್ಯೂಟ್ರಲ್)’ ಸಾಧಿಸುವ ನಗರವಾಗಿಸುವ ನೀಲನಕ್ಷೆ ತಯಾರಿಸಲಾಗುತ್ತಿದೆ. 269 ಕ್ರಿಯೆಗಳನ್ನು ಒಳಗೊಂಡಿರುವ ಯೋಜನೆಯನ್ನು  ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಹವಾಮಾನ ವೈಪರೀತ್ಯ ಎದುರಿಸುವ ‘ಸಿ40 ನಗರಗಳ ಜಾಗತಿಕ ಸಂಪರ್ಕ ಜಾಲ’ದಲ್ಲಿ ಬೆಂಗಳೂರು ಸಹನಾಯಕತ್ವವನ್ನು ಹೊಂದಿದೆ. ಈ ನಗರಗಳ ಪಟ್ಟಿಯಲ್ಲಿ ಮುಂಬೈ , ದೆಹಲಿ, ಕೊಲ್ಕತ್ತ, ಚೆನ್ನೈ, ಅಹಮದಾಬಾದ್ ನಗರಗಳೂ ಇವೆ.
  • ಭಾರತ-ಶ್ರೀಲಂಕಾ ದೇಶಗಳ ನಡುವಿನ ಜಂಟಿ ಮಿಲಿಟರಿ ವ್ಯಾಯಾಮ ಮಿತ್ರ ಶಕ್ತಿ-2023 ರ ಒಂಬತ್ತನೇ ಆವೃತ್ತಿ ಇಂದು ಔಂಧ್ (ಪುಣೆ) ನಲ್ಲಿ ಪ್ರಾರಂಭವಾಯಿತು. ಈ ವ್ಯಾಯಾಮವನ್ನು 16 ರಿಂದ 29 ನವೆಂಬರ್ 2023 ರವರೆಗೆ ನಡೆಸಲಾಗುತ್ತಿದೆ.
  • ದೀಪಾವಳಿ ಪ್ರಯುಕ್ತ ಸಿಡಿಸಿದ ಪಟಾಕಿಯಿಂದ ಸೃಷ್ಟಿಯಾದ ಭಾರಿ ಪ್ರಮಾಣದ ಹೊಗೆಯಿಂದಾಗಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತ ವಿಶ್ವದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಸ್ವಿಸ್ ಗ್ರೂಪ್ ಐಕ್ಯೂಏರ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಾಯುಗುಣಮಟ್ಟ ಸೂಚ್ಯಂಕವು (ಎಕ್ಯೂಐ) 420 ರಷ್ಟಿದ್ದು, ‘ಅಪಾಯಕಾರಿ’ ಮಟ್ಟದಲ್ಲಿದೆ. ಕೋಲ್ಕತ್ತದಲ್ಲಿ ಎಕ್ಯೂಐ ಪ್ರಮಾಣ 196ರಷ್ಟು ಹಾಗೂ ಮುಂಬೈನಲ್ಲಿ 163ರಷ್ಟಿದೆ. ಈ ನಗರಗಳು ಕ್ರಮವಾಗಿ 4 ಮತ್ತು 8ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ. ತಣ್ಣನೆಯ ಗಾಳಿಯು ವಾಹನಗಳು, ಕೈಗಾರಿಕೆಗಳು, ನಿರ್ಮಾಣ ಕಾಮಗಾರಿ ಮತ್ತು ಕೃಷಿ ತ್ಯಾಜ್ಯ ಸುಡುವುದರಿಂದ ಸೃಷ್ಟಿಯಾಗುವ ಹೊಗೆ, ಧೂಳಿನಿಂದಾಗಿ ಪ್ರತಿ ಚಳಿಗಾಲಕ್ಕೂ ಮುನ್ನ ದೇಶದಲ್ಲಿನ ಗಾಳಿಯ ಗುಣಮಟ್ಟ ಕುಸಿಯುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
  • ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮವು (ಒಎನ್ಜಿಸಿ) ಬಂಗಾಳ ಕೊಲ್ಲಿಯ ಕೃಷ್ಣಾ
  • ಗೋದಾವರಿ ಜಲಾನಯನ ಪ್ರದೇಶದ ಆಳ ಸಮುದ್ರದಲ್ಲಿ ಕಚ್ಚಾ ತೈಲ ಉತ್ಪಾದನಾ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದೆ. ಕೆಲವು ವರ್ಷಗಳಿಂದ ತೈಲೋತ್ಪಾದನೆಯಲ್ಲಿ ಆಗಿರುವ ಕುಸಿತ ಸರಿದೂಗಿಸಲು ಇದರಿಂದ ನೆರವಾಗಲಿದೆ’. ಕಚ್ಚಾ ತೈಲ ಸಂಸ್ಕರಿಸಿ ಅದನ್ನು ಟ್ಯಾಂಕರ್ಗೆ ವರ್ಗಾಯಿಸಲು ಬಳಸುವ ತೇಲುವ (ಎಫ್ಸಿಎಸ್ಒ) ಘಟಕಗಳು ಬಹುಮುಖ್ಯ ಪಾತ್ರವಹಿಸುತ್ತವೆ. 2018ರಲ್ಲಿ ಆರಂಭಗೊಂಡ ಸಮುದ್ರದಾಳದ ಈ ಯೋಜನೆಯ ಒಟ್ಟು ಅಂದಾಜು ಮೊತ್ತ ₹22 ಲಕ್ಷ ಕೋಟಿ ಆಗಿದೆ. 2021ರ ನವೆಂಬರ್ನಿಂದ ಇಲ್ಲಿ ತೈಲ ಉತ್ಪಾದನೆ ಆರಂಭ ಆಗಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಳಂಬವಾಗಿತ್ತು.
  • ಇತ್ತೀಚೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಾಬಲ್ಯವಿರುವ ಯುಎಸ್ ನೇತೃತ್ವದ ಒಕ್ಕೂಟವಾದ ಖನಿಜ ಭದ್ರತಾ ಪಾಲುದಾರಿಕೆಗೆ (ಮಿನರಲ್ಸ್ ಸೆಕ್ಯುರಿಟಿ ಪಾರ್ಟ್ನರಶಿಪ್ –MSP) ಸೇರಿಕೊಂಡಿತು. ಆ ಮೂಲಕ ಭಾರತವು ಪಾಲುದಾರಿಕೆಯ ಭಾಗವಾಗುತ್ತಿರುವ ಏಕೈಕ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ.