Published on: January 15, 2022
ಜಲ್ಲಿಕಟ್ಟು ಸ್ಪರ್ಧೆ
ಜಲ್ಲಿಕಟ್ಟು ಸ್ಪರ್ಧೆ
ಸುದ್ಧಿಯಲ್ಲಿ ಏಕಿದೆ ? ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 300 ಗೂಳಿಗಳನ್ನು ಬೆದರಿಸಲು ಅಖಾಡಕ್ಕೆ ಬಿಡಲಾಯಿತು.
- ಪ್ರತಿ ವರ್ಷ ಪೊಂಗಲ್ ಸಂದರ್ಭದಲ್ಲಿ ತಮಿಳುನಾಡಿನ ಹಳ್ಳಿಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಜಲ್ಲಿಕಟ್ಟು ಸ್ಪರ್ಧೆ ಆಯೋಜಕರು ಚಿನ್ನದ ನಾಣ್ಯ, ವಾಷಿಂಗ್ ಮೆಷಿನ್, ಕಾರು, ಬೈಕ್ ಮತ್ತಿತರ ಕೊಡುಗೆಗಳನ್ನು ಘೋಷಿಸುತ್ತಾರೆ.
ಜಲ್ಲಿಕಟ್ಟು
- ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ.
- ಗೂಳಿಯನ್ನು ಹಗ್ಗ ಬಿಚ್ಚಿ ಬಿಟ್ಟ ತಕ್ಷಣ ನೆರೆದಿರುವ ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ. ಇದನ್ನು ಕಂಡ ಹೋರಿ ನಿಗದಿತ ಬಯಲಿನಲ್ಲಿ ಓಡಾಲಾರಂಭಿಸುತ್ತದೆ. ಅದರ ಮೇಲೆ ಎರಗುವ ಉತ್ಸಸಾಹಿ ತರುಣರು, ಯುವಕರು ಹೋರಿಯ ಭುಜ ಹಿಡಿದುಕೊಂಡು ಹೋರಿಯನ್ನು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಸಫಲರಾಗುತ್ತಾರೋ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅವರಿಗೆ ಇನ್ನಿಲ್ಲದ ಮನ್ನಣೆ, ಗೌರವ ಸಿಗುತ್ತದೆ.
- ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಾಗಿಯೇ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ವರ್ಷವಿಡೀ ಗೂಳಿಯನ್ನು ಉತ್ತಮವಾಗಿ ಆರೈಕೆ ಮಾಡಿ ದಷ್ಟ ಪುಷ್ಟ ದೇಹ ಹೊಂದುವಂತೆ ಸಲಹಲಾಗುತ್ತದೆ.ಬಹುತೇಕ ಗ್ರಾಮಗಳಲ್ಲಿ ದೇವಸ್ಥಾನದ ಗೂಳಿ ಎಂದೇ ಸಾಕಲಾಗಿರುತ್ತದೆ. ವಿಶೇಷ ವಿಧಿ ವಿಧಾನಗಳೊಂದಿಗೆ ಆ ಗೂಳಿಗಳನ್ನು ದೇವಸ್ಥಾನದ ವತಿಯಿಂದಲೇ ಸಾಕಲಾಗಿರುತ್ತದೆ. ಅದು ದೇವರಿಗೆ ಮುಡಿಪಾಗಿರುವ ಪ್ರಾಣಿಯೆಂದು ಗ್ರಾಮದ ಜನರು ಅದಕ್ಕೆ ವಿಶೇಷ ಗೌರವವನ್ನು ಕೊಡುತ್ತಾರೆ. ಹಬ್ಬ ಹರಿದಿನಗಳ ಸಂಧರ್ಭಗಳಲ್ಲಿ ಆ ಗೂಳಿಗಳಿಗೆ ಪೂಜೆಯನ್ನು ಏರ್ಪಾಟು ಮಾಡುತ್ತಾರೆ. ದೇವಸ್ಥಾನದ ಹಸುವು ಊರಿನ ಎಲ್ಲಾ ಸಾಕುಪ್ರಾಣಿಗಳಿಗೆ ಮುಖ್ಯಸ್ಥನಂತೆ ಗ್ರಾಮದ ಜನರು ಭಾವಿಸುತ್ತಾರೆ, ಇಂತಹ ಪೂಜನೀಯ ಗೂಳಿಗಳು ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಕಳೆ ತರುತ್ತದೆ. ಕಂಗಾಯಂ ತಳಿಯ ಗೂಳಿಗಳು ಇದರಲ್ಲಿ ಬಳಕೆಯಾಗುತ್ತವೆ.
ಹಿನ್ನೆಲೆ
- ಪುರಾತನ ತಮಿಳು ಸಂಗಮ ಕುಲದಲ್ಲಿ ಜಲ್ಲಿಕಟ್ಟನ್ನು ಎರುತಳುವಲ್ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿಟ್ಟಿದ್ದರು. ಎರು ತಳುವಲ್ ಎಂಬ ಹೆಸರಿನ ಅರ್ಥ ಗೂಳಿಯನ್ನು ನಿಯಂತ್ರಿಸುವುದು ಎಂದೇ ಆಗಿದೆ. ಇದೆ ಕ್ರೀಡೆಯನ್ನು ಜಲ್ಲಿಕಟ್ಟು ಎಂದು ಕರೆಯಲು ಮುಖ್ಯ ಕಾರಣ ಈ ಕ್ರೀಡೆಗಾಗಿ ಹಣ ಕಟ್ಟಿ ಆಡುತ್ತಿದ್ದುದು.
- ಜಲ್ಲಿಕಟ್ಟು ಎಂಬ ಪದ ಜನ್ಮ ತಳೆದಿರುವುದು ‘ಸಲ್ಲಿಕಟ್ಟು’ ಎಂಬ ಪದದಿಂದ ‘ಸಲ್ಲಿ’ ಎಂದರೆ ನಾಣ್ಯಗಳು ಹಾಗು ಕಟ್ಟು ಎಂದರೆ ಕನ್ನಡ ಭಾಷೆಯ ಕಟ್ಟು ಪದದ ಅರ್ಥವೇ ಬರುತ್ತದೆ. ಈ ಕ್ರೀಡೆಗಾಗಿ ನಾಣ್ಯಗಳನ್ನು ಪಣವಾಗಿ ಕಟ್ಟುತ್ತಿದ್ದ ಕಾರಣ ಜಲ್ಲಿ ಕಟ್ಟು ಎಂಬ ಹೆಸರು ಬಂದಿದೆ. ಪಣವಾಗಿ ಇಡುತ್ತಿದ್ದ ನಾಣ್ಯಗಳನ್ನು ಗೂಳಿಯ ಕೊಂಬಿಗೆ ಕಟ್ಟಿ ಬಿಡಲಾಗುತ್ತಿತ್ತು. ಆ ನಾಣ್ಯಗಳನ್ನು ಯಾರು ಕೊಂಬಿನಿಂದ ಬಿಡಿಸಿ ಕೊಳ್ಳುತ್ತಾರೋ ಹಣ ಅವರದೇ.