Published on: January 17, 2022

ಜೋಳದ ತಳಿ ಅಭಿವೃದ್ಧಿಗೆ ವಿಶೇಷ ಕೇಂದ್ರ

ಜೋಳದ ತಳಿ ಅಭಿವೃದ್ಧಿಗೆ ವಿಶೇಷ ಕೇಂದ್ರ

ಸುದ್ಧಿಯಲ್ಲಿ ಏಕಿದೆ ? ಡಬಲ್ಡ್‌ ಹ್ಯಾಪ್ಲಾಯ್ಡ್‌’ ವಿಧಾನದ ಮೂಲಕ ಮೆಕ್ಕೆ ಜೋಳದ ಹೈಬ್ರಿಡ್‌ ತಳಿಗಳ ಅಭಿವೃದ್ಧಿಗೆ ಅಗತ್ಯ ಪೋಷಕ ಸಾಲುಗಳನ್ನು (ಪೇರೆಂಟಲ್ ಲೈನ್ಸ್‌) ಕೃತಕವಾಗಿ ಉತ್ಪಾದಿಸುವ ಕೇಂದ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕುಣಿಗಲ್‌ನಲ್ಲಿ ಆರಂಭಿಸಲಾಗಿದೆ.

ಮುಖ್ಯಾಂಶಗಳು

  • ಕುಣಿಗಲ್‌ನ ರಂಗಸ್ವಾಮಿಗುಡ್ಡದ ಕಾವಲ್ ಬಳಿ ಇರುವ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಕೇಂದ್ರದ ವಿಶಾಲ ಪ್ರದೇಶದಲ್ಲಿ ಈ ಕೇಂದ್ರ ತೆರೆಯಲು ಮೆಕ್ಸಿಕೋದ ಅಂತರರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ (ಸಿಐಎಂಎಂವೈಟಿ) ಹಾಗೂ ಬೆಂಗಳೂರು ಕೃಷಿ ಸಂಶೋಧನಾ ವಿಶ್ವವಿದ್ಯಾಲಯ (ಯುಎಎಸ್–ಬಿ) ನಡುವೆ ಒಪ್ಪಂದ ಆಗಿತ್ತು.
  • ಅದರಂತೆ ಈ ಕೇಂದ್ರ ನಿರ್ಮಾಣಕ್ಕೆ ಸಿಐಎಂಎಂವೈಟಿ ಆರ್ಥಿಕ ನೆರವು ನೀಡಿತ್ತು. ಮೂರು ವರ್ಷಗಳಲ್ಲಿ ಈ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕಳೆದ ಡಿಸೆಂಬರ್‌ ನಿಂದ ಕಾರ್ಯಾರಂಭಗೊಂಡಿದೆ.

ಕೇಂದ್ರದ ಬಗ್ಗೆ

  • ‘ಹಸಿರುಮನೆಯಲ್ಲಿ (ಪಾಲಿಹೌಸ್‌) ಮೊದಲು ಪೋಷಕ ಸಾಲುಗಳ ಉತ್ಪಾದನೆ ನಡೆಯುತ್ತದೆ. ನಂತರ ಅದನ್ನು ಬಯಲು ಪ್ರದೇಶದ ಸಂಶೋಧನಾ ತಾಕುಗಳಲ್ಲಿ ಬೆಳೆಸುತ್ತೇವೆ. ತಳಿಗಳಿಗೆ ಬೇಕಿರುವ ಪೋಷಕ ಸಾಲುಗಳನ್ನು ತ್ವರಿತಗತಿಯಲ್ಲಿ ಉತ್ಪಾದಿಸಿ ಅವುಗಳನ್ನು ರಾಜ್ಯ ಹಾಗೂ ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಬೀಜೋತ್ಪಾದನಾ ಸಂಸ್ಥೆಗಳಿಗೆ ತಲುಪಿಸುವ ಕೆಲಸವನ್ನು ಈ ಕೇಂದ್ರ ಮಾಡಲಿದೆ.
  • ಕೇಂದ್ರದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿದ್ದು, ರೈತರಿಗೂ ವರದಾನವಾಗಲಿದೆ
  • ಕೀನ್ಯಾ ಹಾಗೂ ಮೆಕ್ಸಿಕೋಗಳಲ್ಲಿ ಮಾತ್ರ ಇಂತಹ ಉತ್ಪಾದನಾ ಕೇಂದ್ರಗಳಿದ್ದವು. ಕುಣಿಗಲ್‌ನ ಈ ಕೇಂದ್ರವು ಏಷ್ಯಾದಲ್ಲೇ ಮೊದಲ ಡಬಲ್ಡ್‌ ಹ್ಯಾಪ್ಲಾಯ್ಡ್‌ ಉತ್ಪಾದನಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಸರ್ಕಾರಿ ವಲಯದಲ್ಲೂ ಇಂತಹ ಪ್ರಯತ್ನ ನಡೆದಿದ್ದು ಇದೇ ಮೊದಲು’

ಏನಿದು ಡಬಲ್ಡ್ ಹ್ಯಾಪ್ಲಾಯ್ಡ್’ ವಿಧಾನ ?

  • ಹ್ಯಾಪ್ಲಾಯ್ಡ್ ಕೋಶಗಳು ವರ್ಣತಂತು (ಕ್ರೋಮೊಸೋಮ್) ದ್ವಿಗುಣಗೊಂಡಾಗ ರೂಪುಗೊಂಡ ಜೀನೋಟೈಪ್. ಈ ದ್ವಿಗುಣಗೊಂಡ ಹ್ಯಾಪ್ಲಾಯ್ಡ್‌ಗಳ ಕೃತಕ ಉತ್ಪಾದನೆಯು ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ ಪೂರಕವಾದ ತಾಂತ್ರಿಕತೆ ಈ ಕೇಂದ್ರದಲ್ಲಿದೆ.
  • ‘ಮೆಕ್ಕೆಜೋಳದ ಬೆಳೆಯಲ್ಲಿ ಹ್ಯಾಪ್ಲಾಯ್ಡ್‌ ಸಂತತಿಯನ್ನು ಉತ್ಪಾದಿಸಿ, ನಂತರ ‘ಕಾಲ್ಚಿಸಿನ್‌’ ರಾಸಾಯನಿಕದ ಸಹಾಯದಿಂದ ದ್ವಿಗುಣಗೊಂಡ ಪೋಷಕ ಸಾಲುಗಳನ್ನು ಈ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತದೆ. ಇವುಗಳ ಉತ್ಪಾದನೆಗೆ ಮೊದಲು 6 ವರ್ಷಗಳಷ್ಟು ಸಮಯ ಬೇಕಾಗಿತ್ತು. ಹ್ಯಾಪ್ಲಾಯ್ಡ್‌ ವಿಧಾನದ ಮೂಲಕ ಕೇವಲ ಎರಡೇ ವರ್ಷಗಳಲ್ಲಿ ಪೋಷಕ ಸಾಲುಗಳನ್ನು ಉತ್ಪಾದಿಸಬಹುದು