Published on: December 6, 2021
ಡಾ.ಬಿಆರ್ ಅಂಬೇಡ್ಕರ್ ಪರಿನಿರ್ವಾಣ ದಿನ
ಡಾ.ಬಿಆರ್ ಅಂಬೇಡ್ಕರ್ ಪರಿನಿರ್ವಾಣ ದಿನ
ಸುದ್ಧಿಯಲ್ಲಿ ಏಕಿದೆ? ಡಿಸೆಂಬರ್ 06 ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪುಣ್ಯತಿಥಿ. ಬಾಬಾ ಸಾಹೇಬರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ.
ಡಾ ಬಿ ಆರ್ ಅಂಬೇಡ್ಕರ್ ಬಗ್ಗೆ
- ಭಾರತರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
- 1891ರ ಏಪ್ರಿಲ್ 14ರಂದು ಜನಿಸಿದ ಬಾಬಾ ಸಾಹೇಬರು ಅಸಮಾನತೆಯೇ ಮೇಳೈಸುತ್ತಿದ್ದ ಕಾಲದಲ್ಲಿ ತಾನು ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಸಿಗಬಾರದು ಅನ್ನುವ ದೃಷ್ಟಿಯಿಂದ ನಿರಂತರವಾಗಿ ಅಧ್ಯಯನ ಮಾಡಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ನ್ಯಾಯ ಮಂಡನೆ ಮಾಡಿದವರು. ಈ ನೆಲದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಸ್ಪಷ್ಟವಾದ ಅರಿವಿದ್ದ ಪರಿಣಾಮ ದೇಶಕ್ಕೆ ಬಲಿಷ್ಟ ಮತ್ತು ಶ್ರೇಷ್ಟ ಸಂವಿಧಾನವನ್ನು ನೀಡಿದರು. ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಬಾಬಾ ಸಾಹೇಬರು ಡಿಸೆಂಬರ್ 6, 1956ರಂದು ದೇಹತ್ಯಾಗ ಮಾಡಿದರು.
ಮಹಾಪರಿನಿರ್ವಾಣ ಎಂದರೇನು?
- ಮಹಾಪರಿನಿರ್ವಾಣವು ಬೌದ್ಧಧರ್ಮದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಇದರ ಅರ್ಥ ”ಸಾವಿನ ನಂತರ ನಿರ್ವಾಣ”. ಪರಿನಿರ್ವಾಣ ಅನ್ನು ಪಾಲಿಯಲ್ಲಿ ಪರಿನಿಬ್ಬನ ಎಂದು ಬರೆಯಲಾಗಿದೆ. ಪಾಲಿ ಭಾಷೆಯು ಭಾರತೀಯ ಖಂಡಕ್ಕೆ ಸ್ಥಳೀಯವಾಗಿದೆ. ಬೌದ್ಧ ಗ್ರಂಥ “ಮಹಾಪರಿನಿಬ್ಬನ ಸುತ್ತ ” 80 ನೇ ವಯಸ್ಸಿನಲ್ಲಿ ಭಗವಾನ್ ಬುದ್ಧನ ಮರಣವನ್ನು ಮೂಲ ಮಹಾಪರಿನಿರ್ವಾಣವೆಂದು ಪರಿಗಣಿಸುತ್ತದೆ.
ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಏಕೆ ಆಚರಿಸಲಾಗುತ್ತದೆ?
- “ಬುದ್ಧ ಮತ್ತು ಅವನ ಧಮ್ಮ” ಕೃತಿಯನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ಅಂಬೇಡ್ಕರ್ ನಿಧನರಾದರು. ಅಲ್ಲದೆ, ಅವರು ಹಲವಾರು ವರ್ಷಗಳ ಕಾಲ ಧರ್ಮವನ್ನು ಅಧ್ಯಯನ ಮಾಡಿದ ನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಅವರು ಐದು ಲಕ್ಷ ಬೆಂಬಲಿಗರೊಂದಿಗೆ ನಾಗಪುರದಲ್ಲಿ ಅಕ್ಟೋಬರ್ 14, 1956 ರಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
- ಈ ಬೆಂಬಲಿಗರು ಡಾ ಅಂಬೇಡ್ಕರ್ ಅವರನ್ನು ತಮ್ಮ ಬೌದ್ಧ ನಾಯಕ ಎಂದು ಪರಿಗಣಿಸಿದ್ದಾರೆ. ಅಲ್ಲದೆ, ಅಸ್ಪೃಶ್ಯತೆ ನಿವಾರಣೆಗೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಬೌದ್ಧ ಗುರು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಗುರುತಿಸಲಾಗಿದೆ.