Published on: August 17, 2022
ತೆರಿಗೆದಾರರಿಗೆ ಅಟಲ್ ಪಿಂಚಣಿ ಇಲ್ಲ
ತೆರಿಗೆದಾರರಿಗೆ ಅಟಲ್ ಪಿಂಚಣಿ ಇಲ್ಲ
ಸುದ್ದಿಯಲ್ಲಿ ಏಕಿದೆ?
ಆದಾಯ ತೆರಿಗೆ ಪಾವತಿ ಮಾಡುವವರು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ‘ಅಟಲ್ ಪಿಂಚಣಿ ಯೋಜನೆ’ಯ (ಎಪಿವೈ) ಅಡಿ ಹೆಸರು ನೋಂದಾಯಿಸಿಕೊಳ್ಳಲು ಅಕ್ಟೋಬರ್ 1ರಿಂದ ಅವಕಾಶ ಇಲ್ಲ. ಕೇಂದ್ರ ಸರ್ಕಾರವು 2015ರ ಜೂನ್ 1ರಂದು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.
ಮುಖ್ಯಾಂಶಗಳು·
- ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವು ಈ ಯೋಜನೆಗೆ ಇದೆ. ಈ ಯೋಜನೆಯ ಅಡಿ ನೋಂದಾಯಿತ ಆದವರು 60 ವರ್ಷ ವಯಸ್ಸಾದ ನಂತರದಲ್ಲಿ ತಿಂಗಳಿಗೆ ಕನಿಷ್ಠ ರೂ. 1 ಸಾವಿರದಿಂದ ಗರಿಷ್ಠ ರೂ.5 ಸಾವಿರದವರೆಗೆ ಪಿಂಚಣಿ ಪಡೆಯುತ್ತಾರೆ. ಹೆಸರು ನೋಂದಾಯಿಸಿಕೊಂಡವರು ಕಟ್ಟುವ ಮೊತ್ತಕ್ಕೆ ಅನುಗುಣವಾಗಿ ಪಿಂಚಣಿ ಸಿಗುತ್ತದೆ. ·
- ‘ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು ಅಥವಾ ಹಿಂದೆ ಪಾವತಿ ಮಾಡಿದ್ದವರು ಈ ಯೋಜನೆಗೆ ಸೇರ್ಪಡೆಗೊಳ್ಳಲು ಅಕ್ಟೋಬರ್ 1ರಿಂದ ಅವಕಾಶ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ·
- ಈಗಾಗಲೇ ಯೋಜನೆಯ ಅಡಿ ನೋಂದಾಯಿಸಿಕೊಂಡವರಿಗೆ ಅಥವಾ ಅಕ್ಟೋಬರ್ 1ಕ್ಕೆ ಮೊದಲು ನೋಂದಣಿ ಮಾಡಿಸಿಕೊಳ್ಳುವವರಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ.·
- ಅಕ್ಟೋಬರ್ 1 ಅಥವಾ ಅದರ ನಂತರ ಯೋಜನೆಯ ಅಡಿ ಹೆಸರು ನೋಂದಾಯಿಸಿಕೊಂಡ ವ್ಯಕ್ತಿಯು ಈ ಹಿಂದೆ ಆದಾಯ ತೆರಿಗೆ ಪಾವತಿ ಮಾಡಿದ್ದು ಕಂಡುಬಂದಲ್ಲಿ ಆ ವ್ಯಕ್ತಿಯ ಎಪಿವೈ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ·
- ಅದುವರೆಗೆ ಆ ವ್ಯಕ್ತಿ ಎಪಿವೈ ಅಡಿ ಜಮಾ ಮಾಡಿದ್ದ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಈಗಿರುವ ನಿಯಮಗಳ ಪ್ರಕಾರ 18 ವರ್ಷ ಮೇಲ್ಪಟ್ಟ ಹಾಗೂ 40 ವರ್ಷ ವಯಸ್ಸಿನ ಒಳಗಿನ ಭಾರತೀಯ ಪ್ರಜೆ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿ ಮೂಲಕ ಎಪಿವೈ ಅಡಿ ಹೆಸರು ನೋಂದಾಯಿಸಿಕೊಳ್ಳಬಹುದು. ·
- ಅದಕ್ಕೂ ಮೊದಲು ಆ ವ್ಯಕ್ತಿ ಆ ಶಾಖೆಯಲ್ಲಿ ಉಳಿತಾಯ ಖಾತೆ ತೆರೆಯಬೇಕು. ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 99 ಲಕ್ಷಕ್ಕೂ ಹೆಚ್ಚು ಮಂದಿ ಎಪಿವೈ ಅಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಯೋಜನೆಯ ಅಡಿ ನೋಂದಾಯಿಸಿಕೊಂಡವರ ಒಟ್ಟು ಸಂಖ್ಯೆ 4.01 ಕೋಟಿ ಆಗಿದೆ.
ಅಟಲ್ ಪಿಂಚಣಿ ಯೋಜನೆ·
- ಕಡಿಮೆ ಹೂಡಿಕೆಯಲ್ಲಿ ಪಿಂಚಣಿಯನ್ನು ಖಾತರಿಪಡಿಸಲು ಅಟಲ್ ಯೋಜನೆಯು ಉತ್ತಮ ಆಯ್ಕೆ ಆಗಿದೆ. ಪ್ರಸ್ತುತ, ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, ಸರ್ಕಾರವು 60 ವರ್ಷಗಳ ನಂತರ ತಿಂಗಳಿಗೆ 1000 ರಿಂದ 5000 ರೂಪಾಯಿಗಳ ಪಿಂಚಣಿಯನ್ನು ಖಾತರಿಪಡಿಸುತ್ತದೆ. ಅಂದರೆ, ವಾರ್ಷಿಕ 60,000 ರೂಪಾಯಿ ಪಿಂಚಣಿ ಪಡೆಯುತ್ತೀರಿ.·
- ಪತಿ ಮತ್ತು ಪತ್ನಿ ಹೂಡಿಕೆ ಮಾಡುತ್ತಿದ್ದರೆ ಇಬ್ಬರೂ ಸಹ ಪಿಂಚಣಿ ಪಡೆಯಬಹುದು. ಅಂದರೆ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ 1,20,000 ಮತ್ತು ಮಾಸಿಕ 10,000 ಪಿಂಚಣಿ ಸಿಗುತ್ತದೆ. ಸರ್ಕಾರದ ಈ ಯೋಜನೆಯಲ್ಲಿ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.·
- 60ರ ನಂತರ ವಾರ್ಷಿಕ 60,000 ರೂಪಾಯಿ ಪಿಂಚಣಿ : ಅಟಲ್ ಪಿಂಚಣಿ ಯೋಜನೆಯ ಉದ್ದೇಶವು ಪ್ರತಿಯೊಂದು ವಿಭಾಗವನ್ನು ಪಿಂಚಣಿ ವ್ಯಾಪ್ತಿಗೆ ತರುವುದು. ಆದಾಗ್ಯೂ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಗರಿಷ್ಠ ವಯಸ್ಸನ್ನು ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.ಯೋಜನೆಯಡಿ, ನಿವೃತ್ತಿಯ ನಂತರ, ಪ್ರತಿ ತಿಂಗಳು ಖಾತೆಗೆ ನಿಗಧಿತ ಮೊತ್ತ ಪಾವತಿಸಿದ ನಂತರ, ಮಾಸಿಕ 1 ಸಾವಿರದಿಂದ 5 ಸಾವಿರ ಪಿಂಚಣಿ ಲಭ್ಯವಿರುತ್ತದೆ. ಪ್ರತಿ 6 ತಿಂಗಳಿಗೆ ಕೇವಲ 1,239 ರೂಪಾಯಿಗಳನ್ನು ಹೂಡಿಕೆ ಮಾಡಿದ ನಂತರ 60 ವರ್ಷಗಳ ನಂತರ ವಾರ್ಷಿಕವಾಗಿ 60,000 ರೂಪಾಯಿಗಳ ಜೀವಿತಾವಧಿಯ ಪಿಂಚಣಿ ತಿಂಗಳಿಗೆ 5000 ರೂಪಾಯಿಗಳ ಖಾತರಿಯನ್ನು ಸರ್ಕಾರ ನೀಡುತ್ತಿದೆ.ಅಟಲ್ ಪಿಂಟಚಣಿ ಯೋಜನೆಯ ಪ್ರಮುಖಾಂಶಗಳು
1.ನೀವು ಕಂತು ಅಥವಾ ಹಣ ಪಾವತಿಸಲು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಹೂಡಿಕೆಗಾಗಿ 3 ರೀತಿಯ ಯೋಜನೆಗಳನ್ನು ಆಯ್ಕೆ ಮಾಡಬಹುದು.
2.ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ, ತೆರಿಗೆ ವಿನಾಯಿತಿ ಕೂಡ ಸಿಗಲಿದೆ.
3. ಸದಸ್ಯರ ಹೆಸರಿನಲ್ಲಿ ಕೇವಲ 1 ಖಾತೆ ತೆರೆಯಲಾಗುತ್ತದೆ.
4. ಸದಸ್ಯನು 60 ವರ್ಷಕ್ಕಿಂತ ಮೊದಲು ಅಥವಾ ನಂತರ ಮರಣಹೊಂದಿದರೆ, ನಂತರ ಪಿಂಚಣಿ ಮೊತ್ತವನ್ನು ಹೆಂಡತಿಗೆ ಅಥವಾ ನಾಮಿನಿಗೆ ನೀಡಲಾಗುತ್ತದೆ.
5. ಸದಸ್ಯ ಮತ್ತು ಪತ್ನಿ ಇಬ್ಬರೂ ಮೃತಪಟ್ಟರೆ, ನಾಮಿನಿಗೆ ಸರ್ಕಾರ ಪಿಂಚಣಿ ನೀಡುತ್ತದೆ.
ಅಟಲ್ ಪಿಂಚಣಿ ಯೋಜನೆಗೆ ಅರ್ಹತೆ·
- ಭಾರತದ ಪ್ರಜೆಯಾಗಿರಬೇಕು.·
- 18-40 ವರ್ಷದೊಳಗಿನವರಾಗಿರಬೇಕು·
- ಕನಿಷ್ಠ 20 ವರ್ಷಗಳವರೆಗೆ ಕೊಡುಗೆ ನೀಡಬೇಕು.·
- ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಹೊಂದಿರಬೇಕು·
- ಮಾನ್ಯವಾದ ಮೊಬೈಲ್ ಸಂಖ್ಯೆ ಹೊಂದಿರಬೇಕು·
- ಸ್ವಾವಲಂಬನ್ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿರುವವರು ಸ್ವಯಂಚಾಲಿತವಾಗಿ ಅಟಲ್ ಪಿಂಚಣಿ ಯೋಜನೆಗೆ ಮೈಗ್ರೇಟ್ ಆಗುತ್ತಾರೆ.