Published on: September 6, 2021

ಧಾರವಾಡಿ ಎಮ್ಮೆ ತಳಿ

ಧಾರವಾಡಿ ಎಮ್ಮೆ ತಳಿ

ಸುದ್ಧಿಯಲ್ಲಿ ಏಕಿದೆ? ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷಗಳ ನಂತರವೂ ತಳಿ ಶುದ್ಧತೆ ಕಾಪಾಡಿಕೊಂಡಿರುವ ‘ಧಾರವಾಡಿ ಎಮ್ಮೆ ತಳಿಗೆ ಕೊನೆಗೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ.

  • ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಪಶು ಸಂಗೋಪನೆ ವಿಭಾಗವು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ರಾಜ್ಯದ ‘ಧಾರವಾಡಿ ತಳಿ’ ಎಮ್ಮೆಗೆ ‘ಇಂಡಿಯಾ_ಬಫೆಲೊ_0800_ಧಾರವಾಡಿ_01018’ ಎಂದು ತಳಿ ಪ್ರವೇಶ ಸಂಖ್ಯೆ ನೀಡಿದೆ. ಈ ಮೂಲಕ ಎಮ್ಮೆಗಳಲ್ಲಿ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಇದಾಗಿದೆ.

ಹಿನ್ನಲೆ

  • ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗವು 1970ರಿಂದ ಈ ಎಮ್ಮೆ ತಳಿಗೆ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುತ್ತಿತ್ತು. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗ ಸಂಸ್ಥೆಯಾದ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಸಂಸ್ಥೆ (ಎನ್‌ಬಿಎಆರ್‌ಜಿ) ಹಾಗೂ ಕೃಷಿ ವಿ.ವಿಯ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಸಂಶೋಧನೆ ನಡೆದಿತ್ತು.
  • ತಳಿ ಶುದ್ಧತೆ ಕುರಿತು 2017ರಲ್ಲಿ ಸಂಶೋಧಕರು ಪರಿಷತ್‌ಗೆ ವರದಿ ಸಲ್ಲಿಸಿದ್ದರು. ಈ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಮಾನ್ಯತೆಯಿಂದಾಗಿ ಈವರೆಗೂ ಜಾಗತಿಕ ಮನ್ನಣೆ ದೊರೆತ ದೇಶದ 18 ಎಮ್ಮೆ ತಳಿಯ ಸಾಲಿಗೆ ‘ಧಾರವಾಡಿ’ ಹೊಸ ಸೇರ್ಪಡೆ ಆಗಿದೆ

ಧಾರವಾಡಿ ತಳಿ ಬಗ್ಗೆ

  • ಧಾರವಾಡಿ ತಳಿಯು ರಾಜ್ಯದ ಉತ್ತರ ಭಾಗದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಣಿಸುತ್ತಿವೆ. ಒಟ್ಟು 12.05 ಲಕ್ಷ ಧಾರವಾಡಿ ತಳಿಯ ಎಮ್ಮೆಗಳು ಇರಬಹುದು ಎಂದು ಅಂದಾಜಿಸಲಾಗಿದೆ.
  • ತಳಿ ಕುರಿತು ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಶೋಧನೆ ಕೈಗೊಳ್ಳಲಾಗಿತ್ತು. ಈ ಭಾಗದ 64 ಹಳ್ಳಿಗಳ 3,937 ಜನ ರೈತರ ಮನೆಯಲ್ಲಿನ 10,650 ಧಾರವಾಡಿ ಎಮ್ಮೆಗಳ ಕುರಿತು ಸತತ ಎರಡು ವರ್ಷ ಅಧ್ಯಯನ ನಡೆಸಲಾಗಿದೆ. ಇವುಗಳಲ್ಲಿ ಶೇ 80 ರಷ್ಟು ತಳಿ ಶುದ್ಧತೆ ಕಂಡು ಬಂದಿದೆ’
  • ಧಾರವಾಡಿ ಎಮ್ಮೆ’ ತನ್ನ ಜೀವಿತಾವಧಿಯಲ್ಲಿ ಐದು ಬಾರಿ ಕರು ಹಾಕುತ್ತದೆ. ಒಮ್ಮೆ ಕರುಹಾಕಿದರೆ 335 ದಿನ ಹಾಲು ನೀಡುತ್ತದೆ. ಇದರ ಹಾಲಿನಲ್ಲಿ ಶೇ 7ರಷ್ಟು ಕೊಬ್ಬಿನಾಂಶ ಇದೆ. ಹೀಗಾಗಿ ಈ ಭಾಗದ ಸುಪ್ರಸಿದ್ಧ ಸಿಹಿ ತಿನಿಸುಗಳಾದ ಧಾರವಾಡ ಪೇಢಾ, ಬೆಳಗಾವಿ ಕುಂದಾ, ಜಮಖಂಡಿ ಕಲ್ಲಿ ಪೇಢಾ, ಐನಾಪುರ ಪೇಢಾ, ಗೋಕಾಕ ಮತ್ತು ಅಮೀನಗಡ ಕರದಂಟು ಇತ್ಯಾದಿಗಳಲ್ಲಿ ಈ ಎಮ್ಮೆಯ ಹಾಲು ಬಳಸಲಾಗುತ್ತದೆ.