Published on: July 31, 2024

ನವೋದ್ಯಮ

ನವೋದ್ಯಮ

ಸುದ್ದಿಯಲ್ಲಿ ಏಕಿದೆ?ದೇಶದಲ್ಲಿ ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ (ಡಿಪಿಐಐಟಿ) ಮಾನ್ಯತೆ ಪಡೆದಿರುವ 1.40 ಲಕ್ಷ ನವೋದ್ಯಮಗಳಿವೆ. ಮಹಾರಾಷ್ಟ್ರವು ಮಾನ್ಯತೆ ಪಡೆದಿರುವ ಅತಿಹೆಚ್ಚು ನವೋದ್ಯಮಗಳನ್ನು ಹೊಂದಿರುವ ರಾಜ್ಯವೆಂದು ಹೆಗ್ಗಳಿಕೆ ಪಡೆದಿದೆ. ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.

ನವೋದ್ಯಮಗಳ ಕ್ರಿಯಾ ಯೋಜನೆ

2016ರ ಜನವರಿಯಲ್ಲಿ ನವೋದ್ಯಮಗಳ (ಸ್ಟಾ ರ್ಟ್ಅಪ್) ಅಭಿವೃದ್ಧಿಗೆ ಪೂರಕವಾದ ವಾತಾವರಣ ಕಲ್ಪಿಸಲು ಕೇಂದ್ರ ಸರ್ಕಾರವು ಹೊಸದಾಗಿ ಕ್ರಿಯಾ ಯೋಜನೆ ರೂಪಿಸಿತ್ತು. ಇದರಡಿ ಪ್ರೋತ್ಸಾಹಧನ ಮತ್ತು ಆದಾಯ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲು ಈ ನವೋದ್ಯಮಗಳು ಅರ್ಹತೆ ಪಡೆದಿವೆ.

ಉದ್ದೇಶ

ನವೋದ್ಯಮಗಳಿಗೆ ಪೂರಕವಾದ ಪರಿಸರ ವ್ಯವಸ್ಥೆ ರೂಪಿಸುವುದು ಹಾಗೂ ಆರ್ಥಿಕತೆ ಬೆಳವಣಿಗೆಗೆ ಉತ್ತೇಜನ ನೀಡುವುದೇ ಈ ಯೋಜನೆಯ ಉದ್ದೇಶವಾಗಿತ್ತು. ಜೊತೆಗೆ, ನವೊದ್ಯಮಗಳಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿತ್ತು.

ಹೂಡಿಕೆ ನಿಧಿ ಯೋಜನೆ (ಎಐಎಫ್): ನವೋದ್ಯಮಗಳಲ್ಲಿ ಹೂಡಿಕೆ ಹೆಚ್ಚಿಸಲು ಪರ್ಯಾಯ ಹೂಡಿಕೆ ನಿಧಿ ಯೋಜನೆ (ಎಐಎಫ್) ರೂಪಿಸಲಾಗಿದೆ. ಇದರಡಿ 2023ರಲ್ಲಿ 148 ನವೋದ್ಯಮಗಳಲ್ಲಿ ₹3,366 ಕೋಟಿ ಹೂಡಿಕೆಯಾಗಿದೆ. ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ 96 ನವೋದ್ಯಮಗಳಲ್ಲಿ ₹805 ಕೋಟಿ ಹೂಡಿಕೆಯಾಗಿದೆ.

ಸಾಲ ಎಷ್ಟು? ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ 2023ರಲ್ಲಿ 107 ನವೋದ್ಯಮಗಳಿಗೆ ಕೇಂದ್ರವು ₹271 ಕೋಟಿ ಸಾಲ ನೀಡಿದೆ. ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ 75 ನವೋದ್ಯಮಗಳಿಗೆ ₹154 ಕೋಟಿ ಸಾಲ ವಿತರಿಸಲಾಗಿದೆ.

ಏನಿದು ಸೀಡ್ ಫಂಡ್? ಮಾರುಕಟ್ಟೆ ಪ್ರವೇಶಿಸುವ ನವೋದ್ಯಮಗಳು ಸ್ಥಿರತೆ ಕಾಯ್ದುಕೊಳ್ಳಲು (ಇನ್‍ಕ್ಯು ಬೇಟರ್ ಹಂತ) 2ರಿಂದ 3 ವರ್ಷಗಳು ಬೇಕಿದೆ. ಈ ವೇಳೆ ಅವುಗಳಿಗೆ ಹೆಚ್ಚು ಆರ್ಥಿಕ ನೆರವು ಬೇಕಿದೆ. ಹಾಗಾಗಿ ಅವುಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಅನುವಾಗುವಂತೆ ಕೇಂದ್ರ ಸರ್ಕಾರವು 2021ರಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆಯನ್ನು ಜಾರಿಗೊಳಿಸಿದೆ.   ಇದರಡಿ ₹50 ಲಕ್ಷದ ತನಕ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ.

ಏಂಜೆಲ್ ತೆರಿಗೆ ರದ್ದು:

  • ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸುವ ಹೂಡಿಕೆದಾರರ ಮೇಲೆ ಶೇ 30.9ರಷ್ಟು ಏಂಜೆಲ್ ತೆರಿಗೆ ವಿಧಿಸಲಾಗುತ್ತಿತ್ತು.
  • ಷೇರು ಮಾರುಕಟ್ಟೆಗಳಲ್ಲಿ ನೋಂದಾಯಿತ ಆಗಿರದ ಕಂಪನಿಗಳು ಅಥವಾ ನವೋದ್ಯಮಗಳಲ್ಲಿ ಅವುಗಳ ನ್ಯಾಯಸಮ್ಮತ ಮಾರುಕಟ್ಟೆ ಮೌಲ್ಯಕ್ಕಿಂತ ಅಧಿಕ ಮಟ್ಟದಲ್ಲಿ ಮಾಡುವ ಹೂಡಿಕೆಗೆ ಈ ತೆರಿಗೆ ಅನ್ವಯವಾಗುತ್ತಿತ್ತು. ಆದರೆ 2016ರ ಏಪ್ರಿಲ್ ನಂತರ ಸ್ಥಾಪಿಸಲ್ಪಟ್ಟಿದ್ದು ಡಿಪಿಐಐಟಿಯಿಂದ ಮಾನ್ಯತೆ ಪಡೆದಿರುವ ನವೋದ್ಯಮಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 (ಐಎಸಿ) ಅಡಿ ಈ ತೆರಿಗೆಯಿಂದ ವಿನಾಯಿತಿ ದೊರೆಯಲಿದೆ.
  • 2024–25ನೇ ಆರ್ಥಿಕ ಸಾಲಿನ ಬಜೆಟ್ನಲ್ಲಿ ಈ ತೆರಿಗೆಯನ್ನು ರದ್ದು ಪಡಿಸಲಾಗಿದೆ. ದೇಶದಲ್ಲಿ ನವೋದ್ಯಮಗಳಿಗೆ ಪ್ರೋತ್ಸಾಹ ಹಾಗೂ ಹೂಡಿಕೆಗೆ ಉತ್ತೇಜನ ನೀಡಲು ಸರ್ಕಾರವು ಈ ಕ್ರಮವಹಿಸಿದೆ.
  • 2012 ರಲ್ಲಿ ಯುಪಿಎ ಸರ್ಕಾರವು ಮನಿ ಲಾಂಡರಿಂಗ್ ಅಭ್ಯಾಸಗಳನ್ನು ಪತ್ತೆಹಚ್ಚಲು ಮತ್ತು ಬೋಗಸ್ ಸ್ಟಾರ್ಟ್ಅಪ್ಗಳನ್ನು ಹಿಡಿಯಲು ಪರಿಚಯಿಸಿತು.

ಕರ್ನಾಟಕ ಸರ್ಕಾರವು 2022 – 2027 ರವರೆಗೆ ಕರ್ನಾಟಕ ಸ್ಟಾರ್ಟ್ಅಪ್ ನೀತಿ ಅನ್ನು ರೂಪಿಸಿದೆ