Published on: September 6, 2021

ನಿಫಾ ವೈರಸ್

ನಿಫಾ ವೈರಸ್

ಸುದ್ಧಿಯಲ್ಲಿ ಏಕಿದೆ? ಎರಡು ವರ್ಷಗಳ ಹಿಂದೆ ಕೇರಳ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಫಾ ವೈರಸ್‌ ಇದೀಗ ಮತ್ತೆ ಕೇರಳದಲ್ಲಿ ಪ್ರತ್ಯಕ್ಷವಾಗಿದೆ

ನಿಫಾ ವೈರಸ್‌

  • ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ರೋಗ (ಎನ್ಐವಿ) ಮೇ 19, 2018 ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿತ್ತು.
  • ಮಾನವರಲ್ಲಿ ನಿಫಾ ವೈರಸ್‌ ಮೊದಲು ಮಲೇಷ್ಯಾ (1998) ಮತ್ತು ಸಿಂಗಾಪುರ (1999) ದಿಂದ ವರದಿಯಾಗಿದೆ. ಮಲೇಷ್ಯಾದ ಹಳ್ಳಿಯಿಂದ ವೈರಸ್ ಈ ಹೆಸರು ಪಡೆದುಕೊಂಡಿದ್ದು, ಆ ಗ್ರಾಮದ ಸೋಂಕಿತ ಈ ವೈರಸ್‌ನಿಂದ ರೋಗಕ್ಕೊಳಗಾಗಿ ಮೃತಪಟ್ಟಿದ್ದರು. 1998-99ರಲ್ಲಿ ಇದನ್ನು ಮೊದಲು ಗುರುತಿಸಿದಾಗಿನಿಂದ, ನಿಫಾ ವೈರಸ್‌ ಅನೇಕ ಬಾರಿ ಕಾಣಿಸಿಕೊಂಡಿದೆ. ಮತ್ತು, ಈ ಎಲ್ಲ ಪ್ರಕರಣಗಳೂ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಪತ್ತೆಯಾಗಿವೆ. ಬಾಂಗ್ಲಾದೇಶದಲ್ಲಿ, 2001ರಿಂದ ಕನಿಷ್ಠ 10 ಬಾರಿ ಈ ವೈರಸ್‌ ಕಂಡುಬಂದಿದೆ. ಇನ್ನು, ಭಾರತದಲ್ಲಿ ಪಶ್ಚಿಮ ಬಂಗಾಳದಲ್ಲಿ 2001 ಮತ್ತು 2007ರಲ್ಲಿ ಕಂಡುಬಂದಿದ್ದರೆ, ಕೇರಳದಲ್ಲಿ 2018ರಲ್ಲಿ ಹಲವಾರು ಪ್ರಕರಣಗಳು ವರದಿಯಾಗಿದ್ದವು.

ನಿಫಾ ವೈರಸ್‌ ಹೇಗೆ ಹರಡುತ್ತದೆ..?

  • ಇದು ಝೂನೋಟಿಕ್‌ ವೈರಸ್, ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಪ್ರಸರಣವು ಮುಖ್ಯವಾಗಿ ಕಲುಷಿತ ಆಹಾರ ಸೇವನೆಯ ಮೂಲಕ ಸಂಭವಿಸುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಹರಡುವಿಕೆ ಕೂಡ ಸಾಧ್ಯವೆಂದು ಪರಿಗಣಿಸಲಾಗಿದೆ. ಈ ವೈರಸ್‌ ಫ್ರೂಟ್‌ ಬ್ಯಾಟ್‌ ಅಥವಾ ಬಾವಲಿಯಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ ಹಾರುವ ನರಿ ಎಂದೂ ಕರೆಯಲಾಗುತ್ತದೆ. ಹಣ್ಣಿನ ಬಾವಲಿಗಳು ಈ ವೈರಸ್ ಅನ್ನು ಹಂದಿಗಳಂತಹ ಇತರ ಪ್ರಾಣಿಗಳಿಗೆ ಮತ್ತು ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕುರಿಗಳಿಗೆ ಹರಡುತ್ತವೆ.

ಲಕ್ಷಣಗಳೇನು?

  • ಸಾಮಾನ್ಯವಾಗಿ ಜ್ವರ, ತಲೆನೋವು, ಗಂಟಲು ಕೆರೆತ, ಉಸರಾಟದ ತೊಂದರೆ, ವಾಂತಿ ಈ ರೀತಿಯಾದ ಲಕ್ಷಣಗಳು ಕಂಡು ಬರುತ್ತದೆ. ಜತೆಗೆ ಅರೆನಿದ್ರಾವಸ್ಥೆ, ಗೊಂದಲ, ಕೋಮಾ ಸ್ಥಿತಿಗಳಿಗೂ ಇದರ ಲಕ್ಷಣ ತಲುಪಬಹುದು. ಬದುಕುಳಿದವರಲ್ಲಿ ದೀರ್ಘಕಾಲದವರೆಗೆ ಅಡ್ಡ ಪರಿಣಾಮಗಳು ಜತೆಗೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ ಎಂಬುದು ವರದಿಯಾಗಿದೆ.