Published on: July 14, 2023

ಪಂಚಾಯ್ತಿ ಪ್ರಗತಿಗೆ ರೇಟಿಂಗ್

ಪಂಚಾಯ್ತಿ ಪ್ರಗತಿಗೆ ರೇಟಿಂಗ್

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸುಧಾರಣೆಗೆ ನ್ಯಾಕ್ ಮಾದರಿಯಲ್ಲಿ ರೇಟಿಂಗ್ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವೈಜ್ಞಾನಿಕವಾಗಿ ಜವಾಬ್ದಾರಿ ಹೆಚ್ಚಿಸಿ ಇನ್ನಷ್ಟು ಸಶಕ್ತವನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ.

ಏನಿದು ರೇಟಿಂಗ್?

  • ಗ್ರಾಮ ಪಂಚಾಯಿತಿಗಳಿಗೆ ಜವಾಬ್ದಾರಿ ಸಹ ಹೆಚ್ಚಾಗಿದೆ. ಆದರೆ, ಕೆಲಸ ಆಗುತ್ತಿಲ್ಲ. ಅನೇಕ ವಿಷಯಗಳಲ್ಲಿ ಹಿಂದುಳಿದಿವೆ. ಅವುಗಳ ಸುಧಾರಣೆಗೆ 20 ಅಂಶಗಳ ರೇಟಿಂಗ್ ಮಾಡಲಾಗುತ್ತದೆ.
  • ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕುಡಿಯುವ ನೀರು, ಮಾನವ ಸಂಪನ್ಮೂಲ ಅಭಿವೃದ್ಧಿ ಹೀಗೆ 20 ವಿಷಯಗಳನ್ನು ಆಯ್ಕೆ ಮಾಡಿ 6,024 ಗ್ರಾಮ ಪಂಚಾಯಿತಿಗಳನ್ನು ರೇಟಿಂಗ್​ಗೆ ಒಳಪಡಿಸಲಾಗುತ್ತದೆ.
  • ಯಾವ ವಿಷಯದಲ್ಲಿ ಯಾವ ಪಂಚಾಯಿತಿ ಹಿಂದುಳಿದಿದೆ ಎಂಬುದನ್ನು ಲೆಕ್ಕ ಹಾಕುವ ಮೂಲಕ ಆ ಪಂಚಾಯಿತಿಗೆ ವಿಶೇಷ ಗಮನ ನೀಡುವ ಮೂಲಕ ಸುಧಾರಿಸಲು ಪ್ರಯತ್ನ ಮಾಡಲಾಗುತ್ತದೆ.

ಹೇಗೆ ವ್ಯವಸ್ಥೆ ರೂಪಿಸಲಾಗುತ್ತಿದೆ?

  • ರೇಟಿಂಗ್ ಮಾಡುವ 20 ಅಂಶಗಳ ಪೈಕಿ ಪ್ರತಿ ಅಂಶದಲ್ಲಿಯೂ ಎ, ಬಿ ಮತ್ತು ಸಿ ಎಂದು ವಿಂಗಡಿಸಲಾಗುತ್ತದೆ. ಎ ಅಂಕ ಪಡೆದಿರುವುದನ್ನು ಇನ್ನಷ್ಟು ಸುಧಾರಣೆ ಮಾಡುವ ಮೂಲಕ ಎ ಪ್ಲಸ್​ಗೆ ತರುವುದು, ಬಿ ಇರುವುದನ್ನು ಎ ಗೆ ಹಾಗೂ ಸಿ ಇರುವುದನ್ನು ಬಿ ಮಟ್ಟಕ್ಕೆ ತರುವುದು. ಮುಂದಿನ ದಿನಗಳಲ್ಲಿ ಎಲ್ಲವನ್ನು ಎ ಪ್ಲಸ್ ಮಟ್ಟಕ್ಕೆ ತರುವುದಾಗಿದೆ.

ಪ್ರತ್ಯೇಕ ಸಂಸ್ಥೆಯ ರಚನೆ: 

  • ರೇಟಿಂಗ್ ಕೊಡುವುದಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನೇ ರೂಪಿಸುವ ಉದ್ದೇಶವೂ ಸರ್ಕಾರಕ್ಕೆ ಇದೆ. ಪ್ರತಿ ವರ್ಷ ರೇಟಿಂಗ್ ಕೊಡುತ್ತ ಗ್ರಾಮ ಪಂಚಾಯಿತಿಗಳ ಆಡಳಿತವನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗುವುದು ಸರ್ಕಾರದ ನಿರ್ಧಾರವಾಗಿದೆ.

ಉದ್ದೇಶ

  • ಗ್ರಾಮ ಪಂಚಾಯಿತಿಗಳಿಗೆ ಪ್ರತಿ ವರ್ಷ ಕೋಟ್ಯಂತರ ರೂ.ಗಳ ಅನುದಾನ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುತ್ತಿದೆ. ಹಾಗಿದ್ದರೂ ಮೂಲಸೌಕರ್ಯದಲ್ಲಿ ಸಾಕಷ್ಟು ಹಿಂದುಳಿದಿವೆ. ಖರ್ಚಾಗುವ ಹಣಕ್ಕೆ ತಕ್ಕಂತೆ ಗ್ರಾಮೀಣ ಜನರ ಬದುಕು ಹಸನಾಗಬೇಕು ಹಾಗೂ ಪಂಚಾಯಿತಿಗಳಿಗೆ ಇನ್ನಷ್ಟು ಅಧಿಕಾರ ಸಿಗುವಂತಾಗಬೇಕು.
  • ಜವಾಬ್ದಾರಿ ನಕ್ಷೆಯನ್ನು ವೈಜ್ಞಾನಿಕವಾಗಿ ರೂಪಿಸುವ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾದ ಜವಾಬ್ದಾರಿಗಳನ್ನು ವರ್ಗಾವಣೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
  • ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡುವ ಕಾರ್ಯಕ್ಕೂ ಸರ್ಕಾರ ಮುಂದಾಗಿದೆ. ಈ ಹಿಂದೆ ಗ್ರಾಪಂಗಳಿಗೆ ಇದ್ದ ಅಧಿಕಾರಗಳನ್ನು ವಾಪಸ್ ಪಡೆಯಲಾಗಿತ್ತು. ಇದರಿಂದಾಗಿ ಹಣ ಬಂದರೂ ಅಧಿಕಾರ ಚಲಾಯಿಸುವ ಹಕ್ಕು ಗ್ರಾಪಂಗಳಿಗೆ ಇಲ್ಲದಂತಾಗಿತ್ತು. ಆದ್ದರಿಂದಲೇ ಸರ್ಕಾರ ಸ್ಥಳೀಯಾಡಳಿತಗಳಿಗೆ ಬಲ ತುಂಬುವ ಕೆಲಸ ಮಾಡಲಿದೆ.

ಗ್ರಾಮ ಪಂಚಾಯಿತಿಗಳ ಹೊಣೆಗಳು: 

  • ವೈಯಕ್ತಿಕ ಹಾಗೂ ಸಾಮೂಹಿಕ ಶೌಚಗೃಹಗಳ ನಿರ್ವಣ, ಶುಚಿತ್ವಕ್ಕೆ ಆದ್ಯತೆ, ನೀರು ಸರಬರಾಜು, ತೆರಿಗೆಗಳ ಸಂಗ್ರಹ, ಶಿಕ್ಷಣ ಹಾಗೂ ಶಾಲೆಗಳಿಗೆ ಮಕ್ಕಳ ನೋಂದಣಿ, ಮಕ್ಕಳಿಗೆ ಚುಚ್ಚುಮದ್ದು ಹಾಕುವುದು, ನರೇಗಾ ಕಾಮಗಾರಿಗಳು, ಜಲಾನಯನ ಯೋಜನೆಗಳು, ಜಲಜೀವನ ಮಿಷನ್ ಕಾಮಗಾರಿಗಳ ಜಾರಿ, ಜನನ ಮತ್ತು ಮರಣ ನೋಂದಣಿ, ಒಳಚರಂಡಿ ವ್ಯವಸ್ಥೆ ನಿರ್ವಹಣೆ, ರಸ್ತೆಗಳ ನಿರ್ಮಾಣ ಮತ್ತು ರಿಪೇರಿ, ಬೀದಿ ದೀಪಗಳ ನಿರ್ವಹಣೆ, ಬಾಪೂಜಿ ಸೇವಾ ಕೇಂದ್ರಗಳನ್ನು ನಡೆಸುವುದು, ಇ-ಸ್ವತ್ತು ಹೀಗೆ ವಿವಿಧ ಜವಾಬ್ದಾರಿಗಳು ಗ್ರಾಪಂಗಳದ್ದು.
  • ಅನುದಾನ: ಗ್ರಾಮ ಪಂಚಾಯಿತಿಗಳಿಗೆ ನಿಯಮಾನುಸಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕನಿಷ್ಠ 4 ಕೋಟಿ ರೂ.ಗಳಿಂದ ಗರಿಷ್ಠ 12 ಕೋಟಿ ರೂ. ತನಕ ಅನುದಾನ ಲಭ್ಯವಾಗುತ್ತದೆ. ನಗರಗಳಿಗೆ ಹೊಂದಿಕೊಂಡಂತೆ ಇರುವ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾಗಿರುತ್ತದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಪಂಚಾಯಿತಿಗಳಿಗೆ ಕನಿಷ್ಠ 50 ಕೋಟಿ ರೂ.ಗಳು ತೆರಿಗೆಯಲ್ಲಿಯೇ ಲಭ್ಯವಾಗುತ್ತದೆ.

ಅನುದಾನದ ಮಾನದಂಡಗಳು:

  • ನರೇಗಾ, ಇಂದಿರಾ ಆವಾಸ್, ಜಲಾನಯನ ಹೀಗೆ ವಿವಿಧ ಅನುದಾನಗಳು ಜನಸಂಖ್ಯೆ, ಹಿಂದುಳಿದಿರುವಿಕೆ ಹೀಗೆ ವಿವಿಧ ಮಾನದಂಡಗಳಡಿಯಲ್ಲಿ ಲಭ್ಯವಾಗುತ್ತವೆ.

ಅನುಕೂಲಗಳು

  • ಗ್ರಾಪಂಗಳು ನಿರ್ವಹಿಸುವ ವಿವಿಧ ಜವಾಬ್ದಾರಿಗಳ ಆಧಾರದಲ್ಲಿ ರೇಟಿಂಗ್ ಕೊಡುವ ಮೂಲಕ ಅವುಗಳ ಸೇವೆಯನ್ನು ಸುಧಾರಣೆ ಮಾಡುವುದು.
  • ಸ್ಥಳೀಯ ಮಟ್ಟದಲ್ಲಿ ಮತ್ತು ಸಮಗ್ರ ಆಡಳಿತವನ್ನು ಉತ್ತಮ ಪಡಿಸುವುದು
  • ಸಮಗ್ರ ಅಭಿವೃದ್ಧಿ ಸಾಧಿಸುವುದು
  • ಜನರ ಅಗತ್ಯಕ್ಕೆ ತಕ್ಕಂತೆ ಯೋಜನೆಗಳಗಳನ್ನು ಜಾರಿಮಾಡಲು ಸಹಾಯಕವಾಗಿದೆ
  • ಅಭಿವೃದ್ಧಿ ಯೋಜನೆಗಳಲ್ಲಿ ಹಣದ ದುರ್ಬಳಕೆ ತಪ್ಪಿಸುವುದು
  • ಅನುದಾನದ ಬಳಕೆಗೆ ಉತ್ತರದಾಯಿತ್ವ
  • ಮಾನವ ಹಕ್ಕುಗಳನ್ನು ಕಾಪಾಡುವುದು

ನಿಮಗಿದು ತಿಳಿದಿರಲಿ

  • ಕೇರಳದಲ್ಲಿದೆ ಐಎಸ್​ಓ: ಕೇರಳ ಸರ್ಕಾರ ತನ್ನ ಗ್ರಾಮ ಪಂಚಾಯಿತಿಗಳಿಗೆ ಐಎಸ್​ಓ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಾಕಷ್ಟು ಸುಧಾರಣೆಯಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ಸಂಸ್ಥೆಯನ್ನೇ ರೂಪಿಸಿದೆ. ಜಾರ್ಖಂಡ್ ಸರ್ಕಾರ ಕೇರಳ ಸಂಸ್ಥೆಯ ಮೂಲಕವೇ ತನ್ನ ರಾಜ್ಯದ ಪಂಚಾಯಿತಿಗಳಿಗೆ ಐಎಸ್​ಓ ಪ್ರಮಾಣಪತ್ರ ಕೊಡಿಸಲಿದೆ. ರಾಜ್ಯದಲ್ಲಿಯೂ ಹಿಂದೆ ಒಂದೆರಡು ಪಂಚಾಯಿತಿಗಳಿಗೆ ಐಎಸ್​ಓ ಪ್ರಮಾಣಪತ್ರ ಕೊಡಿಸುವ ಕೆಲಸ ಮಾಡಲಾಗಿತ್ತು. ಆದರೆ, ಉಪಯೋಗವಾಗಲಿಲ್ಲವೆಂದು ಕೈಬಿಡಲಾಗಿತ್ತು.