Published on: December 16, 2021
ಪಿಸಿಎ ನಿಯಮಾವಳಿ
ಪಿಸಿಎ ನಿಯಮಾವಳಿ
ಸುದ್ಧಿಯಲ್ಲಿ ಏಕಿದೆ ? ವಸೂಲಾಗದ ಸಾಲ (ಎನ್ಪಿಎ) ವಿಚಾರದಲ್ಲಿ ನಿರ್ದಿಷ್ಟ ಮಿತಿಯನ್ನು ಮೀರುವ ಅಥವಾ ಅವರ ಬಂಡವಾಳ ಅರ್ಹತಾ ಅನುಪಾತ ಕುಸಿತವಾದರೆ ಬ್ಯಾಂಕೇತರ ಸಾಲದಾರರನ್ನು ಕಠಿಣ ದಂಡನೆಗೆ ಒಳಪಡಿಸಲು ಬ್ಯಾಂಕೇತರ ಹಣಕಾಸು ಕಂಪೆನಿಗಳ (ಎನ್ಬಿಎಫ್ಸಿ) ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳ (ಪಿಸಿಎ) ಚೌಕಟ್ಟನ್ನು ಬಿಡುಗಡೆ ಮಾಡಿದೆ.
- ಎನ್ಬಿಎಫ್ಸಿಗಳಿಗಾಗಿ (NBFCs) ಮೊದಲ ಬಾರಿಗೆ ರೂಪಿಸಲಾಗಿರುವ ವಿನೂತನ ಚೌಕಟ್ಟು ಮುಂದಿನ ವರ್ಷದ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ
- ಆರ್ಬಿಐ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಅಧಿಸೂಚನೆ ಪ್ರಕಾರ, ಎನ್ಬಿಎಫ್ಸಿಗಳಿಗಾಗಿ ರೂಪಿಸಲಾದ PCA ಚೌಕಟ್ಟು ಮೇಲ್ವಿಚಾರಣಾ ಸಾಧನವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಜಾರಿಗೊಳಿಸಲಾಗುತ್ತಿದೆ. ಇದು ಹಣಕಾಸು ವ್ಯವಸ್ಥೆಯ ಇತರೆ ವಿಭಾಗಗಳ ಜತೆಗೆ ಗಣನೀಯವಾಗಿ ನಂಟು ಹೊಂದಿರುವ ಎನ್ಬಿಎಫ್ಸಿಗಳ ವಲಯಕ್ಕೆ ಅನ್ವಯವಾಗಲಿದೆ.
ಹೊಸ ನಿಯಮಾವಳಿಯಲ್ಲಿ ಏನಿದೆ ?
- ಠೇವಣಿ ಹಾಗೂ ಠೇವಣಿಯೇತರ NBFC ವಹಿವಾಟಿನಲ್ಲಿ ಬಂಡವಾಳ ಅರ್ಹತಾ ಅನುಪಾತ ಮತ್ತು ಸಾಲ ಗುಣಮಟ್ಟಗಳು ಮುಖ್ಯ ನಿಗಾವಣೆಯ ಅಂಶಗಳಾಗಿರಲಿವೆ. ಕೋರ್ ಇನ್ವೆಸ್ಟ್ಮೆಂಟ್ ಕಂಪೆನಿಗಳಲ್ಲಿ (CIC) ಬಂಡವಾಳ ಮತ್ತು ಆಸ್ತಿ ಗುಣಮಟ್ಟದ ಜತೆಗೆ ಆರ್ಬಿಐ, ಸಾಲದ ಬಗ್ಗೆಯೂ ಗಮನ ಹರಿಸಲಿದೆ.
- ಆರ್ಬಿಐ ನಡೆಸಿದ ಮೇಲ್ವಿಚಾರಣಾ ಮೌಲ್ಯಮಾಪನ ಅಥವಾ ವಾರ್ಷಿಕ ಹಣಕಾಸು ಫಲಿತಾಂಶಗಳ ಲೆಕ್ಕಾಚಾರದ ಆಧಾರದಲ್ಲಿ ಪಿಸಿಎ ಅಡಿಯಲ್ಲಿ ಎನ್ಬಿಎಫ್ಸಿ ಅನ್ನು ಇರಿಸಲಾಗುವುದು.
- ಎನ್ಬಿಎಫ್ಸಿಗಳನ್ನು ಮೂರು ಅಪಾಯಕಾರಿ ಮಿತಿಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಎನ್ಬಿಎಫ್ಸಿಗಳಲ್ಲಿ ಠೇವಣಿ ಅಥವಾ ಠೇವಣಿಯೇತರ ಬಂಡವಾಳ ಅರ್ಹತೆಯು ಕನಿಷ್ಠ ಅಗತ್ಯವಾದ ಶೇ 15ಕ್ಕಿಂತ ಕಡಿಮೆ 300 ಪಾಯಿಂಟ್ಗಳಿಗಿಂತ ಹೆಚ್ಚು ಕುಸಿತವಾದರೆ ಅಥವಾ ಟೈರ್ 1 ಬಂಡವಾಳ ಅನುಪಾತವು ಕನಿಷ್ಠ ಅಗತ್ಯದ ಶೇ 8ಕ್ಕಿಂತ 200 ಮೂಲ ಪಾಯಿಂಟ್ಗಳಿಗಿಂತ ಕಡಿಮೆಯಾದರೆ ಅಥವಾ ನಿವ್ವಳ ಎನ್ಪಿಎ ಅನುಪಾತ ಶೇ 6ಕ್ಕಿಂತ ಹೆಚ್ಚಳವಾದರೆ, ಆರ್ಬಿಐ ಡಿವಿಡೆಂಟ್ ವಿತರಣೆಯನ್ನು ಅಥವಾ ಲಾಭದ ರವಾನೆಯನ್ನು ನಿರ್ಬಂಧಿಸಬಹುದು.
- ಈಕ್ವಿಟಿಯನ್ನು ಸೇರ್ಪಡೆ ಮಾಡಲು ಮತ್ತು ಸಾಲವನ್ನು ತಗ್ಗಿಸಲು ಪ್ರವರ್ತಕರು ಮತ್ತು ಷೇರುದಾರರಿಗೆ ಸೂಚನೆ ನೀಡುತ್ತದೆ.
- ಬಂಡವಾಳ ಅರ್ಹತೆಯು 300 ಮೂಲ ಪಾಯಿಂಟ್ಗಳಿಗಿಂತ ಕಡಿಮೆ ಕುಸಿದರೆ, ಟೈರ್ 1 ಬಂಡವಾಳ ಅನುಪಾತ ಕನಿಷ್ಠ ಅಗತ್ಯಕ್ಕಿಂತ ಇನ್ನೂ 200 ಮೂಲ ಪಾಯಿಂಟ್ಗಳಷ್ಟು ಇಳಿಕೆಯಾದರೆ ಮತ್ತು ನಿವ್ವಳ ಎನ್ಪಿಎ ಶೇ 9ಕ್ಕಿಂತ ಅಧಿಕವಾದರೆ ಆರ್ಬಿಐ ಈ ಮೇಲಿನ ಕ್ರಮಗಳ ಜತೆಗೆ ಶಾಖೆಯ ವಿಸ್ತರಣೆಯನ್ನು ನಿರ್ಬಂಧಿಸುತ್ತದೆ.
- ಬಂಡವಾಳ ಸಮರ್ಪಕತೆಯಲ್ಲಿ ಶೇ 9ಕ್ಕಿಂತಲೂ ಕುಸಿದರೆ ಮತ್ತು ಟೈರ್ 1 ಬಂಡವಾಳ ಶೇ 6ಕ್ಕಿಂತ ಕಡಿಮೆಯಾದರೆ ಹಾಗೂ ಎನ್ಪಿಎ ಶೇ 12ಕ್ಕಿಂತ ಹೆಚ್ಚಳವಾದರೆ ಅದು ತಾಂತ್ರಿಕ ಉನ್ನತೀಕರಣ ಮತ್ತು ವ್ಯತ್ಯಯ ಕಾರ್ಯಾಚರಣಾ ವೆಚ್ಚಗಳ ಜತೆಗೆ ಬಂಡವಾಳ ವೆಚ್ಚದ ಮೇಲಿನ ನಿರ್ಬಂಧಗಳಿಗೆ ಎಡೆಮಾಡಿಕೊಡಲಿದೆ ಎಂದು ಆರ್ಬಿಐ ತಿಳಿಸಿದೆ.
- ವಿಶೇಷ ನಿಗಾವಣೆ ಸಭೆಗಳನ್ನು ಕರೆಯುವ ಅಥವಾ ತಪಾಸಣೆಗಳ ಮೂಲಕ ಆರ್ಬಿಐ ಇತರೆ ಕಠಿಣ ಕ್ರಮಗಳನ್ನು ಕೂಡ ತೆಗೆದುಕೊಳ್ಳಬಹುದು. ಬಾಹ್ಯ ಲೆಕ್ಕಪರಿಶೋಧಕರಿಂದ ವಿಶೇಷ ಲೆಕ್ಕ ಪರಿಶೋಧನೆ ನಡೆಸಬಹುದು ಅಥವಾ ಎನ್ಬಿಎಫ್ಸಿ ವಿರುದ್ಧ ದಿವಾಳಿತನ ಅರ್ಜಿ ದಾಖಲಿಸಬಹುದು ಅಥವಾ ಎನ್ಬಿಎಫ್ಸಿಯನ್ನು ವಿಸರ್ಜಿಸುವ ಶೋಕಾಸ್ ನೋಟಿಸ್ ಕೂಡ ನೀಡಬಹುದು.
- ಇದಲ್ಲದೆ ಸಂಸ್ಥೆಯ ಆಡಳಿತ ವ್ಯವಸ್ಥೆಯನ್ನು ಬದಲಿಸಲು, ನಿರ್ದೇಶಕರನ್ನು ವಜಾಗೊಳಿಸಲು ಶಿಫಾರಸು ಮಾಡಬಹುದು. ಪಿಸಿಎ ನಿಯಮದಡಿ ಎನ್ಬಿಎಫ್ಸಿ ಮಂಡಳಿಯನ್ನು ಸೂಪರ್ಸೀಡ್ ಮಾಡಬಹುದು. ಅಲ್ಲದೆ, ಸಾಲ ಮಾರುಕಟ್ಟೆಯಿಂದ ಎರವಲು ಪಡೆಯುವುದನ್ನು ನಿರ್ಬಂಧಿಸಬಹುದು. ಹೊಸ ಠೇವಣಿಗಳನ್ನು ಸ್ವೀಕರಿಸುವುದನ್ನು ಮತ್ತು ಎನ್ಬಿಎಫ್ಸಿಯು ಹೊಸ ಹೂಡಿಕೆ ಮಾಡುವುದನ್ನು ತಡೆಯಬಹುದು.