Published on: June 28, 2023
ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24 ಯೋಜನೆ
ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24 ಯೋಜನೆ
ಸುದ್ದಿಯಲ್ಲಿ ಏಕಿದೆ? ಬಜೆಟ್‌ನಲ್ಲಿ ಘೋಷಿಸಲಾದ ವಿಶೇಷ ನೆರವು ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ 16 ರಾಜ್ಯಗಳಿಗೆ 56,415 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- ರಾಜ್ಯಗಳಿಂದ ಬಂಡವಾಳ ವೆಚ್ಚವನ್ನು ಹೆಚ್ಚಿಸಲು 2023-24 ರ ಕೇಂದ್ರ ಬಜೆಟ್‌ನಲ್ಲಿ ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24’ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯಡಿ ಕರ್ನಾಟಕಕ್ಕೆ 3647 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.
- ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ನೆರವು ಘೋಷಿಸಲಾಗಿದೆ. ಈ ರಾಜ್ಯಗಳಿಗೆ ಕ್ರಮವಾಗಿ 7,523 ಕೋಟಿ ರೂ, 7,850 ರೂ, ಹಾಗೂ 9,640 ಕೋಟಿ ರೂ. ಘೋಷಣೆ ಮಾಡಲಾಗಿದೆ.
ಉದ್ದೇಶ:
- ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವ ಇಂಧನ, ರಸ್ತೆ, ಸೇತುವೆ, ಶಿಕ್ಷಣ, ನೀರಾವರಿ, ನೀರು ಸರಬರಾಜು, ಆರೋಗ್ಯ ಹಾಗೂ ರೈಲ್ವೆ ಇಲಾಖೆಯ ಯೋಜನೆ ಪೂರ್ಣಗೊಳಿಸಲು ವಿಶೇಷ ನೆರವಿನ ಅನುದಾನ ರೂಪದಲ್ಲಿ ಬಂಡವಾಳ ವೆಚ್ಚವಾಗಿ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ಇದೇ ವೇಳೆ ಜಲಜೀವನ್ ಮಿಷನ್, ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಗೂ ಬಂಡವಾಳ ನೀಡಲು ಸರಕಾರ ಮುಂದಾಗಿದೆ.
ಏನಿದು ಯೋಜನೆ?
- ಬಂಡವಾಳ ಹೂಡಿಕೆ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರಗಳಿಗೆ ವಿಶೇಷ ಸಹಾಯವನ್ನು 50 ವರ್ಷಗಳ ಬಡ್ಡಿ ರಹಿತ ಸಾಲದ ರೂಪದಲ್ಲಿ ನೀಡಲಾಗುತ್ತದೆ. 2023-24ರ ಹಣಕಾಸು ವರ್ಷದಲ್ಲಿ 1.3 ಲಕ್ಷ ಕೋಟಿ ರೂ. ನೀಡಲು ಘೋಷಣೆ ಮಾಡಲಾಗಿದೆ. ರಾಜ್ಯಗಳು ನೀಡುವ ಕೇಂದ್ರೀಯ ತೆರಿಗೆ ಹಾಗೂ ಇತರ ಸುಂಕಗಳ ಆಧಾರದ ಮೇಲೆ 15ನೇ ಹಣಕಾಸು ಆಯೋಗ ಪ್ರತಿ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲಿದೆ.
ಯೋಜನೆಯ ಹಂತಗಳು
- ಕೇಂದ್ರ ನೆರವಿನ ಯೋಜನೆಯ ಎರಡನೇ ಹಂತದಲ್ಲಿ ಹಳೆ ವಾಹನಗಳನ್ನು ಗುಜರಿಗೆ ಕಳುಹಿಸುವ ಯೋಜನೆಗೆ 3 ಸಾವಿರ ಕೋಟಿ ರೂ. ನೆರವು ಸಿಗಲಿದೆ. ಈ ಯೋಜನೆಯಲ್ಲಿ ಸರಕಾರಿ ವಾಹನಗಳು, ಆಂಬ್ಯುಲೆನ್ಸ್‌ಗಳನ್ನು ಬದಲಿಸಿಕೊಳ್ಳಲು ಬಂಡವಾಳವಾಗಿ ನೀಡಲಾಗುತ್ತದೆ.
- ಮೂರನೇ ಹಂತದಲ್ಲಿ ನಗರ ಯೋಜನೆಗಳಿಗೆ 15 ಸಾವಿರ ಕೋಟಿ ರೂ. ಬಂಡವಾಳ ನೀಡಲಾಗುತ್ತಿದೆ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ 5 ಸಾವಿರ ಕೋಟಿ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಜತೆಗೆ ನಗರ ಪ್ರದೇಶದ ಪೊಲೀಸ್ ವಸತಿ ಗೃಹಗಳ ಆಧುನೀಕರಣ, ನಗರ ಪೊಲೀಸ್ ಠಾಣೆಗಳ ಬಲಪಡಿಸಲು 2 ಸಾವಿರ ಕೋಟಿ ರೂ. ಹೆಚ್ಚುವರಿ ನೆರವು ನೀಡಲಾಗುತ್ತದೆ.
- ಜತೆಗೆ ಒಂದು ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ನೀಡಲು ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳ ಮಾರಾಟಕ್ಕೆ ‘ಒಂದು ಜಿಲ್ಲೆಒಂದು ವಸ್ತು’ ಯೋಜನೆಯಡಿ ಪ್ರತಿ ರಾಜ್ಯದಲ್ಲಿ ಯುನಿಟಿ ಮಾಲ್ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ಬಂಡವಾಳ ನೀಡಲಾಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ವಿಶ್ವದರ್ಜೆಯ ಗ್ರಂಥಾಲಯ ತೆರೆಯಲು 5 ಸಾವಿರ ಕೋಟಿ ರೂ.ಗಳ ಸಹಾಯ ಧನ ನೀಡಲು ಕೇಂದ್ರ ನಿರ್ಧರಿಸಿದೆ.