Published on: April 8, 2023
ಬಂಡೀಪುರ ಹುಲಿ ಯೋಜನೆ 50 ನೇ ವರ್ಷಾಚರಣೆ
ಬಂಡೀಪುರ ಹುಲಿ ಯೋಜನೆ 50 ನೇ ವರ್ಷಾಚರಣೆ
ಸುದ್ದಿಯಲ್ಲಿ ಏಕಿದೆ? ಬಂಡೀಪುರ ಹುಲಿ ಯೋಜನೆ 50 ನೇ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.
ಮುಖ್ಯಾಂಶಗಳು
- ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 2022 ರ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
- ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿರುವ ನಿರೀಕ್ಷೆ ಮೂಡಿಸಿದೆ.
- ಇನ್ನು ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿರುವ ತಮಿಳುನಾಡಿನ ಮಧುಮಲೈ ಅರಣ್ಯಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರಸಿದ್ಧ ಸಾಕ್ಷ್ಯಚಿತ್ರ “ದಿ ಎಲಿಫೆಂಟ್ ವಿಸ್ಪರರ್ಸ್” ಖ್ಯಾತಿಯ ಚಿತ್ರದಲ್ಲಿ ಪಾತ್ರಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಬಂಡೀಪುರ ಸಫಾರಿ
- ಕರ್ನಾಟಕದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಇದು ಅನೇಕ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿದೆ.
- ಈ ಉದ್ಯಾನವನ ದಕ್ಷಿಣ ಏಷ್ಯಾದಲ್ಲಿ ಅತಿ ಹೆಚ್ಚು ಕಾಡು ಆನೆಗಳ ಆವಾಸಸ್ಥಾನವಾಗಿದೆ ಮತ್ತು ಇದನ್ನು ಎರಡು ಪ್ರಮುಖ ರಾಜ್ಯಗಳು, ಅಂದರೆ ತಮಿಳುನಾಡು ಮತ್ತು ಕರ್ನಾಟಕವು ನಿಯಂತ್ರಿಸುತ್ತದೆ ಮತ್ತು ಹಂಚಿಕೊಳ್ಳುತ್ತದೆ.
- ಬೆಂಗಾಲ ಟೈಗರ್ ಸಂತತಿ ಉಳಿಸಿ ಬೆಳೆಸಲು ಮತ್ತು ಸಮತೋಲಿತ ಪರಿಸರ ಕಾಪಾಡುವ ಉದ್ದೇಶದಿಂದ 1973 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ 9 ಕಡೆಗಳಲ್ಲಿಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು.
- ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರು 1973ರ ನವೆಂಬರ್ 17ರಂದು ಯೋಜನೆಗೆ ಚಾಲನೆ ನೀಡಿದ್ದರು. ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯಯಾಗಿ ಬಂಡೀಪುರವನ್ನ ಘೋಷಣೆ ಮಾಡಲಾಯಿತು ಚಾಮರಾಜನಗರ ಜಿಲ್ಲೆಗುಂಡ್ಲುಪೇಟೆ ತಾಲೂಕಿನಲ್ಲಿದೆ.
ಬಂಡೀಪುರ ಸಫಾರಿ ವಲಯಗಳು
- ಪೂರ್ವ ವಲಯ : ಬಂಡೀಪುರ ಸಫಾರಿಯ ಪೂರ್ವ ವಲಯವು ಪಕ್ಷಿವೀಕ್ಷಣೆ ಮತ್ತು ಮಾಂಸಾಹಾರಿ ಪ್ರಾಣಿಗಳನ್ನು ಗುರುತಿಸಲು ಅತ್ಯುತ್ತಮ ಸ್ಥಳವಾಗಿದೆ.
- ಕೇಂದ್ರ ವಲಯ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮಧ್ಯ ಪ್ರದೇಶದಲ್ಲಿ ಸುಂದರವಾದ ಮತ್ತು ಬೆರಗುಗೊಳಿಸುವ ನುಗು ನದಿ ಇದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಈ ಉದ್ಯಾನವನದಲ್ಲಿರುವ ಅತಿ ಎತ್ತರದ ಶಿಖರವಾಗಿದೆ. ಹೆಚ್ಚಾಗಿ ಈ ಉದ್ಯಾನವನವು ಚಾರಣಿಗರು ಮತ್ತು ಯಾತ್ರಾರ್ಥಿಗಳಿಗೆ ಹೆಸರುವಾಸಿಯಾಗಿದೆ. ಹಿಂದೂ ದೇವಾಲಯ ಮತ್ತು ಶ್ರೀಗಂಧದ ಮರಗಳು ಈ ವಲಯದ ಪ್ರಮುಖ ಆಕರ್ಷಣೆಗಳಾಗಿವೆ.
- ವಾಯುವ್ಯ ವಲಯ : ಇಲ್ಲಿ ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಬೋಟಿಂಗ್ ಮತ್ತು ವಿವಿಧ ವನ್ಯಜೀವಿಗಳಿಗೆ ವೀಕ್ಷಿಸಬಹುದು. ಒಣ ಪತನಶೀಲ ಅರಣ್ಯ ಮತ್ತು ಉಷ್ಣವಲಯದ ಕಾಡುಗಳು ಈ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿವೆ.
- ದಕ್ಷಿಣ ವಲಯ: ಈ ಪ್ರದೇಶದಲ್ಲಿ ಮೋಯರ್ ನದಿ ಹರಿಯುತ್ತದೆ. ದಕ್ಷಿಣ ಪ್ರದೇಶವು ಅಳಿಲುಗಳು, ಕಾಡಿನ ಬೆಕ್ಕುಗಳು, ಆನೆಗಳು, ಕಾಡೆಮ್ಮೆ ಮತ್ತು ಇತರ ವನ್ಯಜೀವಿಗಳನ್ನು ಗುರುತಿಸಲು ಹೆಸರುವಾಸಿಯಾಗಿದೆ.
- ಉತ್ತರ ವಲಯ: ಕಬಿನಿ ನದಿಯು 2 ತೊರೆಗಳೊಂದಿಗೆ ಈ ಪ್ರದೇಶದ ಮೂಲಕ ಹರಿಯುತ್ತದೆ ಮತ್ತು ಆದ್ದರಿಂದ ಹಿನ್ನೀರಿನಲ್ಲಿ ದೋಣಿ ವಿಹಾರದಂತಹ ಸಾಹಸ ಚಟುವಟಿಕೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ನದಿಗಳು ಬತ್ತಿಹೋದ ಬೇಸಿಗೆ ಕಾಲದಲ್ಲಿ ಪಕ್ಷಿ ವೀಕ್ಷಣೆ ಮತ್ತು ಮೀನುಗಾರಿಕೆ ನಿಯಮಿತವಾಗಿರುತ್ತದೆ.
ಹುಲಿಗಳ ಸಂಖ್ಯೆ
- 2014ರಲ್ಲಿ ದೇಶದಲ್ಲಿ 2226, ಕರ್ನಾಟಕದಲ್ಲಿ 406 ಹಾಗೂ 2018ರಲ್ಲಿ ದೇಶದಲ್ಲಿ 2967, ಕರ್ನಾಟಕದಲ್ಲಿ 524 ಹುಲಿಗಳಿದ್ದವು.
- 2018ರ ಗಣತಿ ಪ್ರಕಾರ 526 ಹುಲಿಗಳನ್ನು ಹೊಂದಿರುವ ಮದ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022 ರ ಹುಲಿ ಸಮೀಕ್ಷೆ ಪ್ರಕಾರ ಕರ್ನಾಟಕ ಮೊದಲ ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ.
ಇತಿಹಾಸ
- 1931 ರಲ್ಲಿ ಅಂದಿನ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಬಂಡೀಪುರ ಅರಣ್ಯ ಪ್ರದೇಶದಲ್ಲಿ 90 ಚದುರ ಕಿಲೋ ಮೀಟರ್ ವಿಸ್ತೀರ್ಣದ ಅಭಯಾರಣ್ಯ ಪ್ರಾರಂಭಿಸಿದರು. ಈ ಅಭಯಾರಣ್ಯವನ್ನು 1941 ರಲ್ಲಿ 800 ಚದುರ ಕಿಲೋ ಮೀಟರ್ಗೆ ವಿಸ್ತರಿಸಿ ವೇಣುಗೋಪಾಲ ವನ್ಯಜೀವಿ ಉದ್ಯಾನವನ ಎಂದು ಘೋಷಿಸಿದ್ದರು.
- ಬಂಡೀಪುರವನ್ನು ಕೇಂದ್ರ ಸರ್ಕಾರ 1973 ರಲ್ಲಿ ಹುಲಿ ಮೀಸಲು ಅರಣ್ಯ ಎಂದು ಘೋಷಿಸಿದಾಗ ಇಲ್ಲಿ ಕೇವಲ 12 ಹುಲಿಗಳಿದ್ದವು. ಈ ಹುಲಿ ಮೀಸಲು ಅರಣ್ಯವನ್ನು 1985 ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಗಿತ್ತು. ಅದರ ವ್ಯಾಪ್ತಿಯನ್ನು 874.20 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. ಈಗ ಹುಲಿ ಮೀಸಲು ಅರಣ್ಯ 912.04 ಚದರ ಕಿ.ಮೀ. ಇದೆ.
ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ
- ಚಾಮರಾಜನಗರ ಹಾಗು ಮೈಸೂರು ಜಿಲ್ಲೆಗಳಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ 2018 ಹುಲಿಗಣತಿ ಪ್ರಕಾರ 173 ಹುಲಿಗಳನ್ನು ಹೊಂದಿದ್ದು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ.
- ಉತ್ತರಾಖಂಡ್ ರಾಜ್ಯದ ಜಿಮ್ ಕಾರ್ಬೆಟ್ ಅಭಯಾರಣ್ಯ 231 ಹುಲಿಗಳಿದ್ದು ಮೊದಲ ಸ್ಥಾನದಲ್ಲಿದೆ.
ನಿಮಗಿದು ತಿಳಿದಿರಲಿ
- ಗಡಿ ಜಿಲ್ಲೆಚಾಮರಾಜನಗರ ಹುಲಿಗಳ ನಾಡು ಎಂದೆ ಹೆಸರು ಗಳಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿವೆ.