Published on: April 22, 2023

ಭಾರತ ಮತ್ತು ಅಮೆರಿಕದ ಮಧ್ಯೆ ದ್ವಿಪಕ್ಷೀಯ ವ್ಯಾಪಾರ

ಭಾರತ ಮತ್ತು ಅಮೆರಿಕದ ಮಧ್ಯೆ ದ್ವಿಪಕ್ಷೀಯ ವ್ಯಾಪಾರ

ಸುದ್ದಿಯಲ್ಲಿ ಏಕಿದೆ? ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಸಾಲಿನಲ್ಲಿ 2022–23ರಲ್ಲಿಯೂ ಅಮೆರಿಕ ಮೊದಲ ಸ್ಥಾನ ಪಡೆದುಕೊಂಡಿದೆ.

ಮುಖ್ಯಾಂಶಗಳು

  • 2021–22ರಲ್ಲಿ ಮೊದಲ ಬಾರಿಗೆ ಅಮೆರಿಕವು ಚೀನಾವನ್ನು ಹಿಂದಕ್ಕಿ ಮೊದಲ ಸ್ಥಾನಕ್ಕೇರಿತ್ತು.
  • ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ, 2022–23ರಲ್ಲಿ ಭಾರತ ಮತ್ತು ಅಮೆರಿಕದ ಮಧ್ಯೆ ರೂ.10.54 ಲಕ್ಷ ಕೋಟಿ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ.
  • 2021–22ರಲ್ಲಿ ಆಗಿದ್ದ ವ್ಯಾಪಾರಕ್ಕೆ ಹೋಲಿಸಿದರೆ ಶೇ 7.65ರಷ್ಟು ಹೆಚ್ಚಾಗಿದೆ.
  • ಯುಎಇ, ಸೌದಿ ಅರೇಬಿಯಾ ಮತ್ತು ಸಿಂಗಪುರ ದೇಶಗಳು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
  • ಭಾರತ ಮತ್ತು ಅಮೆರಿಕವು ಆರ್ಥಿಕ ಒಪ್ಪಂದಗಳನ್ನು ಇನ್ನಷ್ಟು ಬಲಪಡಿಸಿಕೊಳ್ಳುತ್ತಿವೆ. ಹೀಗಾಗಿ ಭಾರತ ಮತ್ತು ಅಮೆರಿಕ ಮಧ್ಯೆ ದ್ವಿಪಕ್ಷೀಯ ವ್ಯಾಪಾರವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ತಜ್ಞರು ಹೊಂದಿದ್ದಾರೆ.
  • ರಫ್ತು : ಭಾರತದಿಂದ ಅಮೆರಿಕಕ್ಕೆ 2021–22ರಲ್ಲಿ ರೂ.6.24 ಲಕ್ಷ ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳ ರಫ್ತು ಆಗಿತ್ತು. ಇದು 2022–23ರಲ್ಲಿ ರೂ.6.42 ಲಕ್ಷ ಕೋಟಿಗೆ ಅಂದರೆ ಶೇ 2.81ರಷ್ಟು ಹೆಚ್ಚಾಗಿದೆ. ಅಮೆರಿಕಕ್ಕೆ ಔಷಧ, ಎಂಜಿನಿಯರಿಂಗ್, ಹರಳು ಮತ್ತು ಚಿನ್ನಾಭರಣ ರಫ್ತು ಹೆಚ್ಚಾಗುತ್ತಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್ಐಇಒ) ತಿಳಿಸಿದೆ.
  • ಆಮದು:ಆಮದು ವಹಿವಾಟು ಸಹ ಶೇ 16ರಷ್ಟು ಹೆಚ್ಚಾಗಿದ್ದು ರೂ.4.11 ಲಕ್ಷ ಕೋಟಿಗೆ ತಲುಪಿದೆ. 2022–23ರಲ್ಲಿ ಭಾರತ ಮತ್ತು ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರವು ಶೇ 1.5ರಷ್ಟು ಇಳಿಕೆ ಕಂಡು ರೂ.9.33 ಲಕ್ಷ ಕೋಟಿಯಷ್ಟಾಗಿದೆ.
  • ನಿಮಗಿದು ತಿಳಿದಿರಲಿ :ಚೀನಾಕ್ಕೆ ರಫ್ತು ಶೇ 28ರಷ್ಟು ಇಳಿಕೆ ಆಗಿದ್ದು, ಚೀನಾದಿಂದ ಆಮದು ಪ್ರಮಾಣವು ಶೇ 4.16ರಷ್ಟು ಹೆಚ್ಚಾಗಿದೆ. ವ್ಯಾಪಾರ ಕೊರತೆ ಅಂತರವು ರೂ.5.97 ಲಕ್ಷ ಕೋಟಿಯಿಂದ ರೂ.6.82 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಇತರ ದೇಶಗಳೊಡನೆ  ವಹಿವಾಟು ಹೆಚ್ಚಲು ಕಾರಣ

  • ಜಾಗತಿಕ ಕಂಪನಿಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದು ಭಾರತವನ್ನೂ ಒಳಗೊಂಡು ಅನ್ಯ ದೇಶಗಳೊಂದಿಗೂ ವಹಿವಾಟು ನಡೆಸುತ್ತಿವೆ.