Published on: July 11, 2024

ಮಿದುಳು ತಿನ್ನುವ ಅಮೀಬಾ ಸೋಂಕು

ಮಿದುಳು ತಿನ್ನುವ ಅಮೀಬಾ ಸೋಂಕು

ಸುದ್ದಿಯಲ್ಲಿ ಏಕಿದೆ? ಮಿದುಳು ತಿನ್ನುವ ಅಮೀಬಾ ಸೋಂಕು ಎಂದು ಕರೆಯಲಾಗುವ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್(ಈ ಕಾಯಿಲೆಯ ವೈಜ್ಞಾನಿಕ ಹೆಸರು) ಎಂಬ ಕಾಯಿಲೆ ನೆರೆಯ ಕೇರಳ ರಾಜ್ಯದಲ್ಲಿ ಕಂಡುಬಂದಿದೆ.

ಮುಖ್ಯಾಂಶಗಳು

  • ಕೇರಳದಲ್ಲಿ ಹೆಚ್ಚು ಕಂಡುಬರಲು ಕಾರಣ: ಕೇರಳದ ಪರಿಸರ ಮತ್ತು ವಾತಾವರಣವು ನೆಗ್ಲೇರಿಯಾ ಫೌಲೆರಿಯ ಬೆಳವಣಿಗೆಗೆ ಪೂರಕವಾಗಿರುವುದರಿಂದ ಈ ಕಾಯಿಲೆ ಹೆಚ್ಚು ವರದಿಯಾಗುತ್ತದೆ. ರಾಜ್ಯದಲ್ಲಿರುವ ಹೆಚ್ಚು ಉಷ್ಣಾಂಶ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಅಮೀಬಾದ ಬೆಳವಣಿಗೆಗೆ ಪೂರಕವಾಗಿದೆ.
  • ಕೇರಳ ಬಿಟ್ಟರೆ, ಭಾರತದಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ಕಾಯಿಲೆ ಹೆಚ್ಚು ವರದಿಯಾಗಿದೆ.

ಏನಿದು ವಿವರ

  • ಮಿದುಳಿಗೆ ಹಾನಿಮಾಡುವಂತಹ ನೆಗ್ಲೇರಿಯಾ ಫೌಲೆರಿ ಎನ್ನುವ ಹೆಸರಿನ ಪರಾವಲಂಬಿ ಏಕಕೋಶ ಜೀವಿಯಿಂದ ಬರುವ ಸೋಂಕು.
  • ಇದು ಸಾಮಾನ್ಯವಾಗಿ ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಅಭಿವೃದ್ಧಿ ಹೊಂದುತ್ತದೆ. ನಿರ್ವಹಣೆಯ ಕೊರತೆ ಇರುವ ಈಜುಕೊಳಗಳಲ್ಲಿಯೂ ಕಂಡುಬರುತ್ತದೆ.
  • ಈಜಾಡುವಾಗ, ಮೇಲಿನಿಂದ ನೀರಿನೊಳಗೆ ಧುಮುಕಿದಾಗ ಮತ್ತು ಇತರ ಸಂದರ್ಭ ಗಳಲ್ಲಿ ಮೂಗಿನ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತದೆ
  • ಈ ಜೀವಿ ಮಿದುಳಿನ ಜೀವಕೋಶಗಳಿಗೆ ಹಾನಿ ಮಾಡಿ, ಮಿದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳಲ್ಲಿನ ಉರಿಯೂತ ಮತ್ತು ಮಿದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ. ಸೋಂಕಿತರಾದವರ ಪೈಕಿ ಶೇ 97 ಮಂದಿ ಜೀವ ಕಳೆದುಕೊಂಡಿದ್ದಾರೆ.
  • ಸಾಮಾನ್ಯವಾಗಿ, ಸೋಂಕು ಕಾಣಿಸಿಕೊಂಡ ನಂತರದ 18 ದಿನಗಳ ಒಳಗೆ ಸಾವು ಸಂಭವಿಸುತ್ತಿರುವುದು ಇದುವರೆಗಿನ ಪ್ರಕರಣಗಳ ಸಾಮಾನ್ಯ ಲಕ್ಷಣವಾಗಿದೆ.
  • ಈ ಸೋಂಕು ಮೊದಲು ಪತ್ತೆಯಾಗಿದ್ದು ಆಸ್ಟ್ರೇಲಿಯಾದಲ್ಲಿ. ಅಡಿಲೇಡ್ನಲ್ಲಿ 1961–65ರ ಅವಧಿಯಲ್ಲಿ ನಾಲ್ವರು ಈ ಕಾಯಿಲೆಯಿಂದ ಮೃತಪಟ್ಟಿದ್ದರು. ಫೌಲರ್ ಮತ್ತು ಕಾರ್ಟರ್ ಎಂಬುವವರು ಈ ಕಾಯಿಲೆಗೆ ಕಾರಣವಾಗುವ ನೆಗ್ಲೇರಿಯಾ ಫೌಲೆರಿ ಅಮೀಬಾವನ್ನು ಗುರುತಿಸಿದ್ದರು.
  • ಈ ಅಮೀಬಾ ಬೆಳವಣಿಗೆಗೆ ತಾಪಮಾನದ ಏರಿಕೆ, ನಿಂತ ಹಾಗೂ ಕಲುಷಿತ ನೀರು, ಜಲಮೂಲಗಳು ಕಲುಷಿತಗೊಳ್ಳುತ್ತಿರುವುದು ಅದಕ್ಕೆ ಮುಖ್ಯ ಕಾರಣ.
  • ಈ ಅಮೀಬಾ ಬೆಚ್ಚಗಿನ ನೀರಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. 40ರಿಂದ 45 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿ ಇರುವ ನೀರಿನಲ್ಲೂ ಇದು ಬದುಕಬಲ್ಲದು. ಉಪ್ಪು ನೀರಿನಲ್ಲಿ ಇದು ಬದುಕುವುದಿಲ್ಲ.
  • ಈ ಸೋಂಕು ಸಾಂಕ್ರಾಮಿಕವಲ್ಲ.
  • ಅಂಟಾರ್ಕ್ಟಿಕಾ ಬಿಟ್ಟು ಉಳಿದ ಖಂಡಗಳ 33 ರಾಷ್ಟ್ರಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.

ರೋಗ ಲಕ್ಷಣಗಳು ವೈರಲ್ ಜ್ವರದ ಲಕ್ಷಣಗಳು:

ಜ್ವರ, ತಲೆ ನೋವು, ವಾಂತಿ, ಸುಸ್ತು, ಕುತ್ತಿಗೆ ನೋವು ನರಸಂಬಂಧಿ ಲಕ್ಷಣಗಳು: ತೀವ್ರ ತಲೆನೋವು, ಏಕಾಗ್ರತೆಯ ಕೊರತೆ,ಮಾನಸಿಕ ಅಸ್ಥಿರತೆ, ಗೊಂದಲ, ಭ್ರಮಾಧೀನ ಮನಸ್ಥಿತಿ, ಕೋಮಾಗೆ ಜಾರುವುದು

ರೋಗ ಪತ್ತೆ ಹೇಗೆ?

ರೋಗವು 3ರಿಂದ 7 ದಿನಗಳಲ್ಲಿ ಪಕ್ವ ಸ್ಥಿತಿ ಮುಟ್ಟುತ್ತದೆ ಸೋಂಕಿತನ ಸೂಕ್ಷ್ಮ ಪರಿಶೀಲನೆ, ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅನಾಲಿಸಿಸ್ (ಸಿಎಸ್ಎಫ್) (ಬೆನ್ನುಹುರಿಯಲ್ಲಿನ ದ್ರವದ ಪರೀಕ್ಷೆ), ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಮುಂತಾದ ವಿಧಾನಗಳ ಮೂಲಕ ರೋಗ ಪತ್ತೆ ಮಾಡಲಾಗುತ್ತದೆ.