Published on: September 30, 2022

ಮೂನ್ಲೈಟಿಂಗ್

ಮೂನ್ಲೈಟಿಂಗ್

ಸುದ್ದಿಯಲ್ಲಿ ಏಕಿದೆ?

ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 300 ಮಂದಿ ಪ್ರತಿಸ್ಪರ್ಧಿ ಕಂಪನಿಯೊಂದಕ್ಕೆ ಕೂಡ ಕೆಲಸ ಮಾಡುತ್ತಿದ್ದುದು ಪತ್ತೆಯಾಗಿದೆ ಎಂದು ವಿಪ್ರೊ ಅಧ್ಯಕ್ಷ ರಿಷದ್ ‍ಪ್ರೇಮ್‌ಜಿ ಹೇಳಿದ್ದಾರೆ. ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡುವವರಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ಇಲ್ಲ ಎಂದು ಹೇಳಿದ್ದಾರೆ.

ಮೂನ್‌ಲೈಟಿಂಗ್‌ಎಂದರೇನು?

  • ಮೂನ್‌ಲೈಟಿಂಗ್‌ ಅಂದರೆ ಇನ್ನೊಂದು ಉದ್ಯೋಗವನ್ನು ಗೋಪ್ಯವಾಗಿ ಮಾಡುವುದು ಎಂದು ಅರ್ಥ.
  • ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತಾರದೇ, ಮತ್ತೊಂದು ಕಂಪನಿಯಲ್ಲಿ ಉದ್ಯೋಗ ಮಾಡುವುದನ್ನು ‘ಮೂನ್‌ಲೈಟಿಂಗ್‌’ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಮಾಡುವುದು.
  • ವ್ಯಕ್ತಿಯೊಬ್ಬ ಹಗಲಿನ ವೇಳೆ(ಕಚೇರಿ ಸಮಯದಲ್ಲಿ) ಮೂಲ ಕಂಪನಿಯಲ್ಲಿ ಕೆಲಸ ಮಾಡುತ್ತಾ, ರಾತ್ರಿ ವೇಳೆ ಅಥವಾ ವಾರಾಂತ್ಯದಲ್ಲಿ ಮತ್ತೊಂದು ಕಡೆ ಕೆಲಸ ಮಾಡುತ್ತಾನೆ. ಇದಕ್ಕೆ ‘ಮೂನ್‌ಲೈಟಿಂಗ್’ ಎಂದು ಕರೆಯಲಾಗುತ್ತದೆ.
  • ಪರಿಭಾಷೆ :ಅಮೆರಿಕನ್ನರು ಹೆಚ್ಚುವರಿ ಆದಾಯಕ್ಕಾಗಿ ತಮ್ಮ ನಿಯಮಿತ ವಾದ (ಬೆಳಿಗ್ಗೆ 9 ರಿಂದ ಸಂಜೆ 5ರವರೆಗಿನ) ಉದ್ಯೋಗದ ಜೊತೆಗೆ, ಹೆಚ್ಚುವರಿಯಾಗಿ ಎರಡನೇ ಉದ್ಯೋಗವನ್ನು ಆಶ್ರಯಿಸುವ ಹಿನ್ನೆಲೆಯಲ್ಲಿ ಈ  ಪರಿಭಾಷೆಯು ಬೆಳಕಿಗೆ ಬಂದಿದೆ.

ಮೂನ್‌ಲೈಟಿಂಗ್‌ ಹೆಚ್ಚಾಗಲು ಕಾರಣ

  • ಕೋವಿಡ್ ನಂತರ ವರ್ಕ್ ಫ್ರಮ್ ಹೋಂ ಹೆಚ್ಚಾಗಿದೆ. ಅದರಲ್ಲೂ ಐಟಿ ಕಂಪನಿಯ ಉದ್ಯೋಗಿಗಳಲ್ಲಿ ಇದು ಸಾಮಾನ್ಯವಾಗಿದೆ. ಹಾಗೆ ಒಂದು ವಾರದಲ್ಲಿ ಒಂದು ಅಥವಾ ಎರಡು ದಿನ ಕಚೇರಿಗೆ ಬಂದು ಕೆಲಸ ಮಾಡಲು ಇನ್ನುಳಿದ ದಿನ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರಿಂದಲೆ ಮೂನ್‌ಲೈಟಿಂಗ್‌ ಹೆಚ್ಚಾಗಿದೆ

ಭಾರತದಲ್ಲಿ ಮೂನ್‌ಲೈಟಿಂಗ್ ಕಾನೂನುಬಾಹಿರವೇ ?

  • ಕೈಗಾರಿಕಾ ಕಾಯ್ದೆ ಪ್ರಕಾರ ಮೂನ್‌ಲೈಟಿಂಗ್ ಅಥವಾ ಏಕಕಾಲಕ್ಕೆ ಎರಡು ಕಂಪನಿಗಳಲ್ಲಿ ಉದ್ಯೋಗ ಮಾಡುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
  • ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಐಟಿ ಕಂಪನಿಗಳು ಆ ನಿಯಮದಿಂದ ವಿನಾಯಿತಿ ಪಡೆದಿವೆ. ಭಾರತದಲ್ಲಿ ಮೂನ್‌ಲೈಟಿಂಗ್‌ ಎನ್ನವುದು ಉದ್ಯೋಗದಾತರ ಇಚ್ಛೆಯನ್ನು ಅವಲಂಬಿಸಿದೆ.
  • ಈ ನೀತಿಗೆ ಸಂಬಂಧಿಸಿದಂತೆ ಯಾವುದೇ ನಿಖರ ಕಾನೂನು ಇಲ್ಲ. ಆದರೂ, ವ್ಯಕ್ತಿಯೊಬ್ಬ ಏಕಕಾಲಕ್ಕೆ ಎರಡು ಕೆಲಸಗಳನ್ನು ಮಾಡುತ್ತಿದ್ದರೆ, ಕಂಪನಿಯು, ‘ಉದ್ಯೋಗದ ಒಪ್ಪಂದ’ದಲ್ಲಿ ಮಾಡಿಕೊಂಡ ಗೌಪ್ಯತೆಯ ಉಲ್ಲಂಘನೆಯ ಕಾರಣ ನೀಡಿ, ಆತನಿಗೆ ಇತರೆಡೆ ಕೆಲಸ ನಿರ್ವಹಿಸದಂತೆ ತಡೆ ಹಿಡಿಯಬಹುದು.

 ಮೂನ್‌ಲೈಟಿಂಗ್  ಉಪಯೋಗಗಳು ಅಥವಾ ಪರ ವಾದಗಳು

  • ವಿಭಿನ್ನ ರೀತಿಯ ಪ್ರತಿಭೆ ಅಥವಾ ಕೌಶಲಗಳನ್ನು ಹೊಂದಿರುವವರಿಗೆ ಹೆಚ್ಚಿನ‌ ಆದಾಯಗಳಿಕೆಗೆ ಮೂನ್‌ಲೈಟಿಂಗ್ ಅವಕಾಶ ನೀಡುತ್ತದೆ.
  • ಕಚೇರಿ ಸಮಯದ ಬಳಿಕ ವಿರಾಮದ ಸಮಯದಲ್ಲಿ ಮತ್ತು ವಾರಾಂತ್ಯದಲ್ಲಿ ಬೇರೆ ಬೇರೆ ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳುವುದರಿಂದ ಇದು ಪೂರ್ಣ ಸಮಯದ ಉದ್ಯೋಗಿಗಳ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವುದಿಲ್ಲ.
  • ಮೂನ್‌ಲೈಟಿಂಗ್‌ನಿಂದ ಉದ್ಯೋಗಿಗಳು ಹೆಚ್ಚು ಆದಾಯ ಗಳಿಸಬಹುದು. ಸಾಲಗಳನ್ನು ತೀರಿಸಿಕೊಳ್ಳಬಹುದು.
  • ಉಳಿತಾಯ ಮತ್ತು ಹೂಡಿಕೆ ಹೆಚ್ಚಿಸಲು ನೆರವಾಗುತ್ತದೆ. ವಿಭಿನ್ನ ರೀತಿಯ ಕೆಲಸ ಅನುಭವ ಪಡೆಯಬಹುದು. ವ್ಯಕ್ತಿಯು ತನ್ನ ಉದ್ಯೋಗದ ಜೊತೆಗೆ ಸಾಂಸ್ಕೃತಿಕ ಹಾಗೂ ಕಲಾ ಕೌಶಲಗಳಂತಹ ‘ಪ್ರವೃ1ತ್ತಿ’ ಮುಂದುವರಿಸಬಹುದು.

ಮೂನ್ ಲೈಟಿಂಗ್ ವಿರುದ್ಧ ವಾದಗಳು

  • ಮೂನ್‌ಲೈಟಿಂಗ್‌ನಿಂದ ಉದ್ಯೋಗಿಯು ತಮ್ಮ ಮೂಲ ಸಂಸ್ಥೆಗೆ ಗುಣಮಟ್ಟದ ಸಮಯ ಕೊಡುವುದಿಲ್ಲ. ಮೂಲ ಕಂಪನಿಯಲ್ಲಿನ ಕೆಲಸದ ದಕ್ಷತೆ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮಬೀರುತ್ತದೆ.
  • ಅತಿಯಾದ ಕೆಲಸದಿಂದ ದಣಿದು ಉತ್ಸಾಹ ಹೀನರಾಗಬಹುದು. ಆಗ ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಲು ಸಹಜವಾಗಿಯೇ ಕಷ್ಟವಾಗುತ್ತದೆ.
  • ಉದ್ಯೋಗಿಗಳು ವಿಶ್ರಾಂತಿ ಪಡೆಯುವುದರಿಂದ ಅವರ ಶಕ್ತಿ ಮತ್ತು ಚೈತನ್ಯ ಹೆಚ್ಚುತ್ತದೆ. ಇದರಿಂದ ಕೆಲಸದ ದಕ್ಷತೆಯೂ ಹೆಚ್ಚಾಗುತ್ತದೆ.
  • ಕಂಪನಿಯಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ವಿಶ್ರಾಂತಿ ಅಗತ್ಯ. ಅದೇ ಕಾರಣಕ್ಕೆ ಉದ್ಯೋಗಿಗಳಿಗೆ ರಜಾ ದಿನಗಳನ್ನು ನೀಡಲಾಗುತ್ತದೆ. ಹಾಗಾಗಿ, ಇಂಥ ಬಿಡುವಿನ ವೇಳೆಯಲ್ಲಿ ತಮ್ಮ ಉದ್ಯೋಗಿಗಳು ಬೇರೆ ಕ್ಷೇತ್ರಗಳಲ್ಲಿ ಅಥವಾ ಉದ್ಯೋಗಗಳಲ್ಲಿ ಶಕ್ತಿ ವ್ಯಯಿಸುವುದನ್ನು ಕಂಪನಿಗಳು ಬಯಸುವುದಿಲ್ಲ.

ಪರಿಣಾಮ

  • ಈ ಮೂನ್‌ಲೈಟಿಂಗ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಐಟಿ ಕಂಪನಿಗಳು ನುರಿತ ಉದ್ಯೋಗಿಗಳನ್ನು ಸತತವಾಗಿ ಕಳೆದುಕೊಳ್ಳುತ್ತಿವೆ. ಏಕೆಂದರೆ ಒಮ್ಮೆ ಬಿಡುವಿನ‌ ನೌಕರಿ ಇಷ್ಟವಾದರೆ ನೌಕರನು‌ ಮತ್ತೆ ಅದನ್ನೇ ಪ್ರಧಾನ‌ ನೌಕರಿಯನ್ನಾಗಿ ಸ್ವೀಕರಿಸುವ ಸಾಧ್ಯತೆ ಹೆಚ್ಚು.
  • ಶೇ 78 ರಷ್ಟು ಕಾರ್ಪೊರೇಟ್‌ ಸಂಸ್ಥೆಗಳು, ಹೊಸ ಉದ್ಯೋಗಿಗಳನ್ನು ಕಂಪನಿಗೆ ನೇಮಿಸಿಕೊಳ್ಳಲು ಕಷ್ಟಪಡುತ್ತಿದ್ದರೆ, ಶೇ 64ರಷ್ಟು ಕಂಪನಿಗಳಿಗೆ ಇರುವ ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ ಎಂದು  ‘ರೀ ಇಮ್ಯಾಜಿನಿಂಗ್ ವರ್ಕ್ ಮತ್ತು ರಿವಾರ್ಡ್ಸ್ ಸಮೀಕ್ಷೆ’ ಯಿಂದ ತಿಳಿದುಬಂದಿದೆ.

ಮೂನ್‌ಲೈಟಿಂಗ್‌’ –  ಬೇರೆ ಬೇರೆ ಕಂಪನಿಗಳ ಅಭಿಪ್ರಾಯಗಳು

  • ವಿಪ್ರೊ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮೂನ್‌ಲೈಟಿಂಗ್ ಅನ್ನು ‘ಮೋಸದ ಕೆಲಸʼ ಎಂದು ಇತ್ತೀಚೆಗೆ ಟ್ವೀಟ್‌ ಮಾಡಿದ್ದಾರೆ.
  • ಇನ್ಫೋಸಿಸ್‌ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು ’ಮೂನ್‌ಲೈಟಿಂಗ್’ ಮೋಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕೆಲಸಗಾರನು ತನ್ನ ಅಧಿಕೃತ ಕೆಲಸದ ಸಮಯದ ನಂತರವೇ ತನ್ನ ಆಸಕ್ತಿಯ ಇತರ ಕೆಲಸವನ್ನು ಮಾಡುತ್ತಾನೆ. ಆತ ತಾನು ಬಯಸಿ ದ್ದನ್ನು ಮಾಡಲು ಅರ್ಹನಾಗಿದ್ದು. ಅದು ಆತನ ಸ್ವಾತಂತ್ರ್ಯ’ ಎಂದು ಹೇಳಿದ್ದಾರೆ.
  • ಟಾಟಾ ಕನ್ಸಲ್ಟೆನ್ಸಿ ಸಿಇಒ ಎನ್‌.ಗಣಪತಿ ಸುಬ್ರಹ್ಮಣ್ಯಂ ಇದನ್ನು ’ನೈತಿಕ ಸಮಸ್ಯೆ’ ಎಂದು ಪರಿಗಣಿಸಿದ್ದಾರೆ.
  • ಟೆಕ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಸಿಪಿ ಗುರ್ನಾನಿ ’ನಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ನೀತಿ ರೂಪಿಸಲಿದೆ‘ ಎಂದು ಹೇಳಿಕೊಂಡಿದ್ದಾರೆ. ‘ನೌಕರರಿಗೆ ಏಕಕಾಲದಲ್ಲಿ ಬಹು ಉದ್ಯೋಗಗಳನ್ನು ಮುಂದುವರಿಸಲು ಅವಕಾಶ ನೀಡಬೇಕು. ಆದರೆ ಆ ಉದ್ಯೋಗಿಗಳು ಮೂಲ ಕಂಪನಿಯೊಂದಿಗೆ  ತಾವು ಮಾಡುತ್ತಿರುವ ಎರಡನೇ ಉದ್ಯೋಗದ ಕುರಿತು ಮುಕ್ತವಾಗಿರಬೇಕು. ಹೆಚ್ಚುವರಿ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು‘ ಎಂಬ ಅಂಶವನ್ನು ನೀತಿಯಲ್ಲಿ ಅಳವಡಿಸಲಾಗುತ್ತದೆ‘ ಎಂದು ಹೇಳಿದ್ದಾರೆ.