Published on: September 9, 2021
‘ಮೆಟ್ರೋ ನಿಯೋ’
‘ಮೆಟ್ರೋ ನಿಯೋ’
ಸುದ್ಧಿಯಲ್ಲಿ ಏಕಿದೆ? ಬೆಂಗಳೂರಿನ ಅತ್ಯಂತ ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಮೆಟ್ರೋ ನಿಯೋ ಸ್ಥಾಪಿಸುವ ರೂಪುರೇಷೆ ತಯಾರಾಗಿದ್ದು, ಶೀಘ್ರವೇ ಬಸ್ ರೂಪದ ರೈಲುಗಳು ಕಾರ್ಯಾರಂಭ ಮಾಡಲಿವೆ.
- ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ (ಇಎಲ್ಸಿಐಟಿಎ) ಮೆಟ್ರೋ ನಿಯೋ ಯೋಜನೆಯ ಪ್ರಸ್ತಾಪ ತಯಾರು ಮಾಡಿದೆ.
ಮೆಟ್ರೋ ನಿಯೋ ಬಗ್ಗೆ
- ನಾಲ್ಕು ಕಿ.ಮಿ ಉದ್ದದ ಯೋಜನೆ ಇದಾಗಿದ್ದು, ಇದು ಉದ್ದೇಶಿತ ಹಳದಿ ಮಾರ್ಗದ ಎರಡು (ಆರ್.ವಿ ರಸ್ತೆ- ಬೊಮ್ಮಸಂದ್ರ) ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ ಮಧ್ಯೆ ಸಿಗುವ ಐಟಿ-ಕಂಪನಿಗಳಿಗೂ ಈ ಯೋಜನೆ ಸಂಪರ್ಕ ಕೊಂಡಿಯಾಗಲಿದೆ.
- ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಫೀಡರ್ ವ್ಯವಸ್ಥೆಯಾಗಿ ಈ ಮೆಟ್ರೋ ನಿಯೋ ಕೆಲಸ ಮಾಡಲಿದೆ. ಪ್ರಯಾಣಿಕ ಸ್ನೇಹಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ಜನರನ್ನು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.
- ಮೆಟ್ರೋ ನಿಯೋ, ಮೆಟ್ರೋ ರೈಲುಗಳಿಂದ ಅಗ್ಗವಾಗಿದ್ದು ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲಿದೆ ಎಂದು ನಂಬಲಾಗಿದೆ. ಒಂದು ವೇಳೆ ಈ ಯೋಜನೆ ಪೂರ್ತಿಯಾಗಿದ್ದೇ ಆದಲ್ಲಿ ದಿನಕ್ಕೆ 1.5 ಲಕ್ಷ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಲಿದ್ದಾರೆ.
- ಮೆಟ್ರೋ ರೈಲಿಗೆ ಹೋಲಿಕೆ ಮಾಡಿದರೆ ಇದರ ಮಾರ್ಗ ನಿರ್ಮಾಣ ವೆಚ್ಚ ಭಾರೀ ಕಡಿಮೆ ಇದೆ. ಮೆಟ್ರೋ ಟ್ರಾಕ್ನ ಒಂದು ಕಿಲೋ ಮೀಟರ್ ಟ್ರ್ಯಾಕ್ ನಿರ್ಮಾಣಕ್ಕೆ ಸುಮಾರು 250 ಕೋಟಿ ಖರ್ಚಾಗಲಿದೆ. ಆದರೆ ಮೆಟ್ರೋ ನಿಯೋದ ಒಂದು ಕಿಲೋ ಮೀಟರ್ ಮಾರ್ಗ ನಿರ್ಮಾಣಕ್ಕೆ 70-80 ಕೋಟಿ ರುಪಾಯಿ ವೆಚ್ಚವಾಗಲಿದೆ. ಎಲ್ಲಾ ದೃಷ್ಠಿ ಕೋನದಿಂದ ನೋಡಿದರೂ ಇದು ಅಗ್ಗದ ಯೋಜನೆ.
ಏನಿದು ಮೆಟ್ರೋ ನಿಯೋ..?
- ಬಸನ್ನು ಹೋಲುವ ರೈಲು ಇದು. ಆದರೆ ಇದು ಕಾಂಕ್ರಿಟ್ ಮಾರ್ಗದಲ್ಲಿ ಚಲಿಸುತ್ತದೆ. ವಿದ್ಯುತ್ ಚಾಲಿತ ರೈಲು ಇದಾಗಿದ್ದು, ಮೆಟ್ರೋ ರೈಲಿನಂತೆ ಪ್ರತ್ಯೇಕ ಸ್ಟೀಲ್ ಬೋಗಿಗಳು ಇರಲಿವೆ. ವಿದ್ಯುತ್ ರೈಲಿನಂತೆ ಇದಕ್ಕೂ ಮೇಲ್ಭಾಗದಿಂದ ವಿದ್ಯುತ್ ಪೂರೈಕೆಯಾಗಲಿದೆ. ಬಸ್ನಂತೆ ರಬ್ಬರ್ನಿಂದ ಮಾಡಿದ ಚಕ್ರ ಇರಲಿದೆ.
- ಇದರೊಳಗೆ ಅತ್ಯಾಧುನಿಕ ತಂತ್ರಜ್ಞಾನಗಳು ಇರಲಿದ್ದು, ಸಿಸಿಟಿವಿ, ಸ್ವಯಂ ಚಾಲಿತ ನಿಲ್ದಾಣ ಮಾಹಿತಿಗಳು ಇರಲಿವೆ. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ವಿಶೇಷ ಸೌಲಭ್ಯ ಕೂಡ ಇರಲಿದೆ. ಟಿಕೆಟ್ ಪಡೆಯಲು ಕ್ಯೂ ಆರ್ ಕೋಡ್ ಸ್ಕ್ಯಾನರ್ ವ್ಯವಸ್ಥೆ ಹಾಗೂ ಸ್ವಯಂ ಚಾಲಿತ ಟಿಕೆಟ್ ವೆಂಡಿಂಗ್ ಯಂತ್ರ ಇರಲಿದೆ.