Published on: September 30, 2022
‘ಮೈಸೂರು ದಸರಾ ಮಹೋತ್ಸವ 2022’
‘ಮೈಸೂರು ದಸರಾ ಮಹೋತ್ಸವ 2022’
ಸುದ್ದಿಯಲ್ಲಿ ಏಕಿದೆ?
412ನೇ ಮೈಸೂರು ದಸರಾ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು. ನಂತರ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು 7ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು.
ಮುಖ್ಯಾಂಶಗಳು
- ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ನಾಡ ಹಬ್ಬ ಉದ್ಘಾಟಿಸಿದ್ದು ವಿಶೇಷವಾಗಿತ್ತು ಈ ಹಿಂದೆ 1988 ಮತ್ತು 1990ರಲ್ಲಿ ಅಂದಿನ ಉಪರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಹಾಗೂ ರಾಷ್ಟ್ರಪತಿ ಆರ್.ವೆಂಕಟರಮಣ ಅವರು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದರು
ದಸರಾ ಆಚರಣೆ ಕುರಿತು
- ದಸರಾ ಉನ್ನತಾಧಿಕಾರ ಸಮಿತಿಯು ಸಂಪ್ರದಾಯ ಮತ್ತು ಸಂಸ್ಕೃತಿಗೆ ಧಕ್ಕೆಯಾಗದಂತೆ ಉತ್ಸವವನ್ನು ಆಚರಿಸಲು ನಿರ್ಧರಿಸಿದೆ ಮತ್ತು ಮೈಸೂರು ಅರಮನೆ ಮತ್ತು ಇತರ ಸ್ಥಳಗಳಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
- ಯುವ ದಸರಾದಲ್ಲಿ ಖ್ಯಾತ ಗಾಯಕರು ಮತ್ತು ನಟರನ್ನೂ ಆಹ್ವಾನಿಸಲಾಗಿದೆ. ಇದೇ ವೇಳೆ ಕುಸ್ತಿ, ಆಹಾರ ಮೇಳ, ರೈತ ದಸರಾ, ಮಹಿಳಾ ದಸರಾದಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
- ಈ ಬಾರಿ ದಸರಾ ಹಬ್ಬದ ವಿಶೇಷತೆ ಮೊಟ್ಟಮೊದಲ ಬಾರಿಗೆ ದಸರಾ ಕವಿಗೋಷ್ಠಿಯು ಈ ವರ್ಷ ಉರ್ದು( ಮುಶೈರಾ)ಕವಿಗೋಷ್ಠಿ ಆಯೋಜಿಸಲಾಗಿದೆ.
- ದೇಶದ ವಿವಿಧ ಭಾಗಗಳಿಂದ ಪ್ರಸಿದ್ಧ ಉರ್ದು ಕವಿಗಳು ತಮ್ಮ ಗಜಲ್‌ಗಳು ಮತ್ತು ಶಾಯರಿ (ಕವಿತೆ) ಪ್ರಸ್ತುತ ಪಡಿಸಲಿದ್ದಾರೆ. ಹಾಸ್ಯ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ ಮತ್ತು ಪ್ರಧಾನ ಕವಿಗೋಷ್ಠಿಯ ನಡೆಯಲಿದೆ.
ಈ ಬಾರಿ ದಸರಾ ಹಬ್ಬದ ಆಕರ್ಷಣೆ
- ಮೈಸೂರು ದಸರಾ ಪ್ರಯುಕ್ತ ಯುವ ದಸರದಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಫಲ ಪುಷ್ಪ ಪ್ರದರ್ಶನ
- ರಾಷ್ಟ್ರಪತಿ ಭವನದ ತದ್ರೂಪವನ್ನು ಕುಪ್ಪಣ್ಣ ಪಾರ್ಕ್ ಗ್ಲಾಸ್ ಹೌಸ್ ಒಳಗೆ ರಚಿಸಿರುವುದು
ದಸರಾ ಹಬ್ಬದ ಹಿನ್ನೆಲೆ
- ಕರ್ನಾಟಕ ಇತಿಹಾಸದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿ ವಿಜಯ ನಗರ ಸಾಮ್ರಾಜ್ಯವನ್ನು ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು. ಇವರ ಕಾಲದಿಂದ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಹೆಚ್ಚಿನ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀಕೃಷ್ಣದೇವರಾಯ. ಆ ಕಾಲದಲ್ಲಿ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ದಸರಾ ಮಹೋತ್ಸವದ ಕೇಂದ್ರಗಳಾಗಿದ್ದವು.
- ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.
- 11ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ವಿದೇಶೀ ಪ್ರವಾಸಿಗರಾದ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಬಂದಿದ್ದ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ಈ ಮಹೋತ್ಸವವನ್ನು ಕೊಂಡಾಡಿ, ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
-
ವಿಜಯದಶಮಿ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದು ವಂಶದ ಮೈಸೂರು ಒಡೆಯರು. ಯದುವಂಶದ ಆಳ್ವಿಕೆಯ 9ನೇ ಅರಸರಾದ ರಾಜ ಒಡೆಯರು(1578-1617) ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದಂದು ದಸರಾ ಮಹೋತ್ಸವವನ್ನು ಆರಂಭಿಸಿದರು.