Published on: October 30, 2021
ರಾಜ್ಯಗಳ ಆಡಳಿತ ಕಾರ್ಯಕ್ಷಮತೆ ಶ್ರೇಯಾಂಕ
ರಾಜ್ಯಗಳ ಆಡಳಿತ ಕಾರ್ಯಕ್ಷಮತೆ ಶ್ರೇಯಾಂಕ
ಸುದ್ಧಿಯಲ್ಲಿ ಏಕಿದೆ? ರಾಜ್ಯಗಳ ಆಡಳಿತದ ಕಾರ್ಯಕ್ಷಮತೆಯ 6ನೇ ವರ್ಷದ ಶ್ರೇಯಾಂಕವು ಬಿಡುಗಡೆಗೊಂಡಿದ್ದು, ದಕ್ಷಿಣದ ರಾಜ್ಯಗಳು ಪ್ರಾಬಲ್ಯ ಸಾಧಿಸಿವೆ. ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ ಮೂರನೇ ಸ್ಥಾನ ಪಡೆದಿದೆ.
- ಈ ಮೂಲಕ ದಕ್ಷಿಣದ ರಾಜ್ಯಗಳು ಮೊದಲ ಮೂರು ಸ್ಥಾನವನ್ನು ಅಲಂಕರಿಸಿದಂತಾಗಿದೆ. ಛತ್ತೀಸ್ಗಡ, ಗುಜರಾತ್ ಹಾಗೂ ಪಂಜಾಬ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಕರ್ನಾಟಕ ಸೂಚ್ಯಂಕದೊಂದಿಗೆ 7ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿತ್ತು. ಈ ಬಾರಿ ಮೂರು ಸ್ಥಾನ ಕುಸಿತಕಂಡಿದೆ.
- ಅದಾಗ್ಯೂ ಸೂಚ್ಯಂಕವು ಧನಾತ್ಮಕವಾಗಿಯೇ ಇರುವುದು ಸಮಾಧಾನ ಮೂಡಿಸಿದೆ. ಕರ್ನಾಟಕದ ನಂತರದ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಆಂಧ್ರಪ್ರದೇಶ, ಜಾರ್ಖಂಡ್, , ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಇದೆ. ಬಿಹಾರವು ಹಾಗೂ ಉತ್ತರ ಪ್ರದೇಶ ಈ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ.
- ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕಿಂ ಮೊದಲ ಸ್ಥಾನ, ಗೋವಾ ಮಿಜೋರಾಂ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದೆ. ಸಣ್ಣ ರಾಜ್ಯಗಳಲ್ಲಿ ಉತ್ತರಾಖಂಡ್ ಹಾಗೂ ಮಣಿಪುರ ಕೊನೆಯ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಪುದುಚೇರಿ ಮೊದಲ ಸ್ಥಾನ ಪಡೆದಿದೆ. ಜಮ್ಮು ಮತ್ತು ಕಾಶ್ಮೀರ ಎರಡನೇ ಸ್ಥಾನದಲ್ಲಿದೆ. ದಾದ್ರಾ ಮತ್ತು ನಗರ್ ಹಾವೇಲಿ ಹಾಗೂ ದಾಮನ್ ಮತ್ತು ದಿಯು ಐದು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಆರನೇ ಸ್ಥಾನ ಪಡೆದಿವೆ.
ಸಾರ್ವಜನಿಕ ವ್ಯವಹಾರಗಳ ಕೇಂದ್ರ
- ಸಾರ್ವಜನಿಕ ವ್ಯವಹಾರಗಳ ಕೇಂದ್ರ (ಪಬ್ಲಿಕ್ ಅಫೇರ್ಸ್ ಸೆಂಟರ್- PAC) ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಕೇಂದ್ರೀಕರಿಸುವ ಸಂಶೋಧನೆಯಲ್ಲಿ ತೊಡಗಿದೆ. ಇದನ್ನು ಭಾರತದಲ್ಲಿ ಆಡಳಿತದ ಗುಣಮಟ್ಟವನ್ನು ಸುಧಾರಿಸುವ ಆದೇಶದೊಂದಿಗೆ 1994ರಲ್ಲಿ ಸ್ಥಾಪಿಸಲಾಗಿದೆ. ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕವು ಭಾರತದ ರಾಜ್ಯಗಳಲ್ಲಿ ಆಡಳಿತದ ಸಮರ್ಪಕತೆ ಮತ್ತು ಗುಣಮಟ್ಟದ ವಾರ್ಷಿಕ ಮೌಲ್ಯಮಾಪನವಾಗಿದೆ.