Published on: January 8, 2022

ರಾಷ್ಟ್ರಪತಿ ಆಡಳಿತ

ರಾಷ್ಟ್ರಪತಿ ಆಡಳಿತ

ಸುದ್ಧಿಯಲ್ಲಿ ಏಕಿದೆ ?  ಪಂಜಾಬ್‌ನ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಆರ್ಟಿಕಲ್‌ 356 ಸುತ್ತ ಚರ್ಚೆ ಹುಟ್ಟುಹಾಕಿದೆ.

  • ಅಷ್ಟಕ್ಕೂ ‘ಭದ್ರತಾ ಲೋಪ’ಕ್ಕೆ ಪಂಜಾಬ್‌ನ ಸರಕಾರವನ್ನು ಕೇಂದ್ರ ವಜಾಗೊಳಿಸಬಹುದೇ? ರಾತೋ ರಾತ್ರಿ ರಾಷ್ಟ್ರಪತಿ ಆಡಳಿತ ಹೇರಬಹುದೇ? ಎಂಬುದು ಸದ್ಯದ ಪ್ರಶ್ನೆ.

ಆರ್ಟಿಕಲ್‌ 356

  • ರಾಷ್ಟ್ರಪತಿ ಆಳ್ವಿಕೆ ಎಂದರೆ ರಾಜ್ಯ ಸರ್ಕಾರವನ್ನು ಅಮಾನತುಗೊಳಿಸಿ, ಅದೇ ರಾಜ್ಯದಲ್ಲಿ ನೇರವಾಗಿ ಕೇಂದ್ರ ಸರ್ಕಾರದ ಆಡಳಿತವನ್ನು ಹೇರುವುದು. ಭಾರತದ ಸಂವಿಧಾನದ 356ನೇ ವಿಧಿಯಲ್ಲಿ ಇಂಥಹದ್ದೊಂದು ವಿಶೇಷ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ದಯಪಾಲಿಸಲಾಗಿದೆ.
  • ರಾಜ್ಯ ಸರ್ಕಾರವು ‘ಸಾಂವಿಧಾನಿಕ ನಿಬಂಧನೆ’ಗಳ ಪ್ರಕಾರ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ, ಈ ಕೆಲಸವನ್ನು ಕೇಂದ್ರ ಮಾಡಬಹುದು. ಅರ್ಥಾತ್ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಕೇಂದ್ರದಿಂದ ನೇಮಕಗೊಂಡಿರುವ ರಾಜ್ಯಪಾಲರು ಅಧಿಕಾರ ಚಲಾಯಿಸುತ್ತಾರೆ. ಅವರಿಗೆ ಸಹಾಯ ಮಾಡಲು ಅಧಿಕಾರಿಗಳ ನೇಮಕ ನಡೆಯುತ್ತದೆ.

ರಾಷ್ಟ್ರಪತಿ ಆಳ್ವಿಕೆ

ಹೆಚ್ಚು ಆಳಕ್ಕಿಳಿಯದೇ, ಸಾಮಾನ್ಯವಾಗಿ ಈ ಕೆಳಗಿನ ಸಂದರ್ಭಗಳಲ್ಲಿ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗುತ್ತದೆ.

  • ರಾಜ್ಯಪಾಲರು ಸೂಚಿಸಿದ ಅವಧಿಯೊಳಗೆ ರಾಜ್ಯ ಶಾಸಕಾಂಗಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಸಾಧ್ಯವಾಗದೇ ಇದ್ದಾಗ
  • ಸಮ್ಮಿಶ್ರ ಸರಕಾರಗಳ ಸಂದರ್ಭ ಮೈತ್ರಿ ಮುರಿದು ಬಿದ್ದು ಮುಖ್ಯಮಂತ್ರಿ ಬಹುಮತ ಕಳೆದುಕೊಂಡು, ನಿಗದಿತ ಅವಧಿಯೊಳಗೆ ಬಹುಮತ ಸಾಬೀತುಪಡಿಸಲು ಆಗದೇ ಇದ್ದಲ್ಲಿ
  • ಅವಿಶ್ವಾಸ ನಿರ್ಣಯದಿಂದ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಾಗ
  • ಯುದ್ಧ, ಸಾಂಕ್ರಾಮಿಕ ಅಥವಾ ನೈಸರ್ಗಿಕ ವಿಕೋಪಗಳಂತಹ ಅನಿವಾರ್ಯ ಕಾರಣಗಳಿಗಾಗಿ ಚುನಾವಣೆ ಮುಂದೂಡಲ್ಪಟ್ಟಾಗ
  • ರಾಜ್ಯದ ಸಾಂವಿಧಾನಿಕ ಸಂಸ್ಥೆಗಳು ಅಥವಾ ಶಾಸಕಾಂಗ ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸಲು ವಿಫಲವಾದಲ್ಲಿ, ರಾಜ್ಯದ ರಾಜ್ಯಪಾಲರ ವರದಿಯ ಮೇಲೆ ರಾಷ್ಟ್ರಪತಿ ಆಡಳಿತ ಹೇರಬಹುದು
  • ಎರಡೂ ಸದನಗಳು (ಲೋಕಸಭೆ, ರಾಜ್ಯಸಭೆ) ಇದಕ್ಕೆ ಅನುಮೋದನೆ ನೀಡಿದಾಗ 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಬಹುದು. ನಂತರ ಮತ್ತೊಮ್ಮೆ ಪ್ರಕ್ರಿಯೆ ಪುನರಾವರ್ತಿಸಿ ಗರಿಷ್ಠ 1 ವರ್ಷಗಳವರೆಗೆ ಹೀಗೆಯೇ ಮುಂದುವರಿಯಬಹುದು ಎನ್ನುತ್ತದೆ ನೆಲದ ಕಾನೂನು.

ಹಿಂದೆ ಹೇಗಿತ್ತು ಪರಿಸ್ಥಿತಿ?

  • ಸರಳವಾಗಿ ಹೇಳಬೇಕೆಂದರೆ ರಾಜ್ಯವೊಂದರಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ, ರಾಜ್ಯ ಸರಕಾರಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ರಾಷ್ಟ್ರಪತಿ ಆಳ್ವಿಕೆ ಹೆಸರಿನಲ್ಲಿ ಅಲ್ಲಿ ಅಧಿಕಾರ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸಂವಿಧಾನದ 356ನೇ ವಿಧಿ ಅವಕಾಶ ನೀಡುತ್ತದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡುವುದಷ್ಟೇ ಇದರ ಉದ್ದೇಶವಾಗಿತ್ತು. ಆದರೆ ಇಲ್ಲಿ ಉದ್ದೇಶ ಮೀರಿ ಆರ್ಟಿಕಲ್‌ 356ನ್ನು ದುರುಪಯೋಗಪಡಿಸಿಕೊಳ್ಳಲಾಯಿತು ಎಂಬುದು ವಾಸ್ತವ.
  • 1966-77ರ ನಡುವೆ 39 ಬಾರಿ ರಾಷ್ಟ್ರಪತಿ ಆಳ್ವಿಕೆ ಅಸ್ತ್ರವನ್ನು ಇಂದಿರಾ ಪ್ರಯೋಗಿಸಿದರೆ, ಇದೇ ಕಾಂಗ್ರೆಸ್‌ ಸರಕಾರಗಳ ಮೇಲೆ ನಂತರ ಬಂದ ಜನತಾ ಪಕ್ಷ 9 ಬಾರಿ ಪ್ರತ್ಯಸ್ತ್ರ ಬಳಸಿತು. ದೇಶದ ಒಕ್ಕೂಟ ವ್ಯವಸ್ಥೆಯೇ ಒಡೆದು ಚೂರಾಗುವುದೇ ಎಂಬ ಆತಂಕ ಹುಟ್ಟಿಕೊಂಡ ಕಾಲಘಟ್ಟವದು.

‘ಎಸ್‌.ಆರ್‌. ಬೊಮ್ಮಾಯಿ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ’

  • ಆದರೆ 1994ರಲ್ಲೊಂದು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿತು. ವಿಶೇಷವೆಂದರೆ ಕರ್ನಾಟಕದ್ದೇ ಪ್ರಕರಣಕ್ಕೆ, ಅದರಲ್ಲೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌. ಬೊಮ್ಮಾಯಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ಬಂದಿತ್ತು.
  • ‘ಎಸ್‌.ಆರ್‌. ಬೊಮ್ಮಾಯಿ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ’ ಎಂದೇ ಜನಪ್ರಿಯವಾಗಿರುವ ಈ ಪ್ರಕರಣದಲ್ಲಿ ಬೇಕಾಬಿಟ್ಟಿ ರಾಷ್ಟ್ರಪತಿ ಆಳ್ವೆಕೆ ಹೇರುವಂತಿಲ್ಲ ಎಂದ ಸರ್ವೋಚ್ಚ ನ್ಯಾಯಾಲಯ ರಾಜಕೀಯ ಸ್ವೇಚ್ಛಾಚಾರಗಳಿಗೆ ಬಲವಾದ ಬ್ರೇಕ್‌ ಹಾಕಿತು.
  • ಆಗ ಸಂವಿಧಾನದ 356ನೇ ವಿಧಿಯ ದುರ್ಬಳಕೆಯನ್ನು ತಡೆಯಲು ಸುಪ್ರೀಂ ಕೋರ್ಟ್‌ ಕೆಲವು ಪ್ರಮುಖ ಸೂಚನೆಗಳನ್ನು ನೀಡಿತು. ಅದಿಲ್ಲಿ ಪಂಜಾಬ್‌ನ ಕಾಂಗ್ರೆಸ್‌ ಸರಕಾರದ ನೆರವಿಗೆ ಬರುವ ಸಾಧ್ಯತೆ ಇದೆ.

ಏನದು?

  • ಸದನದಲ್ಲಿ ಬಹುಮತ ಪರೀಕ್ಷಿಸಬೇಕು
  • ಕೇಂದ್ರವು ರಾಜ್ಯಕ್ಕೆ ಎಚ್ಚರಿಕೆ ನೀಡಿ ಉತ್ತರ ನೀಡಲು 1 ವಾರ ಕಾಲಾವಕಾಶ ನೀಡಬೇಕು.
  • ರಾಷ್ಟ್ರಪತಿಗಳಿಗೆ ಸಂಪುಟ ನೀಡಿದ ಸಲಹೆಯನ್ನು ನ್ಯಾಯಾಲಯ ಪ್ರಶ್ನಿಸಲಾಗದು. ಆದರೆ ಸಲಹೆಯನ್ನು ಯಾವ ಆಧಾರದ ಮೇಲೆ ರಾಷ್ಟ್ರಪತಿಗಳು ‘ತೃಪ್ತಿಕರವಾಗಿದೆ’ ಎಂದು ಒಪ್ಪಿಕೊಂಡಿದ್ದಾರೆ ಎಂಬುದನ್ನು ವಿಮರ್ಶಿಸಬಹುದು. ರಾಷ್ಟ್ರಪತಿ ಆಳ್ವಿಕೆ ಘೋಷಣೆಯ ಹಿಂದೆ ನೈಜ ಕಾರಣವಿದೆಯೇ? ಕಾರಣಗಳು ಸಂಬಂಧಿಸಿದವೇ? ಅಧಿಕಾರದ ದುರುಪಯೋಗವಾಗಿದೆಯೇ? ಎಂಬುದನ್ನು ನ್ಯಾಯಾಲಯ ನಿಕಷಕ್ಕೆ ಒಡ್ಡಬಹುದು.
  • ಆರ್ಟಿಕಲ್ 356 ಅನ್ನು ಅನುಚಿತವಾಗಿ ಬಳಸಿದರೆ ನ್ಯಾಯಾಲಯ ಪರಿಹಾರವನ್ನು ನೀಡಲಿದೆ
  • ಆರ್ಟಿಕಲ್ 356(3)ರ ಅಡಿಯಲ್ಲಿ ರಾಷ್ಟ್ರಪತಿಗಳ ಅಧಿಕಾರಕ್ಕೆ ಮಿತಿಯಿದೆ. ಸಂಸತ್ತಿನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಅನುಮೋದನೆ ಸಿಗವ ಮೊದಲೇ ವಿಧಾನಸಭೆಯನ್ನು ವಿಸರ್ಜಿಸಬಾರದು.
  • 356ನೇ ವಿಧಿಯು ಸಾಂವಿಧಾನಿಕ ಸಂಸ್ಥೆಗಳು ಸ್ಥಗಿತಗೊಂಡ ಸಂದರ್ಭದಲ್ಲಿ ಮಾತ್ರ ಸಮರ್ಥಿಸಲ್ಪಡುತ್ತದೆಯೇ ಹೊರತು ಆಡಳಿತ ಯಂತ್ರ ಸ್ಥಗಿತಗೊಂಡಾಗ ಅಲ್ಲ!

ಕೇಂದ್ರ – ರಾಜ್ಯ ಸಂಬಂಧಗಳ ಬಗೆಗಿನ 1983ರ ಸರ್ಕಾರಿಯಾ ಆಯೋಗ ಕೂಡ ರಾಷ್ಟ್ರಪತಿ ಆಳ್ವಿಕೆಯನ್ನು ಬಹಳ ಮಿತವಾಗಿ, ತೀರ ಕೈಮೀರಿದ ಸಂದರ್ಭಗಳಲ್ಲಿ ಕೊನೆಯ ಆಯ್ಕೆಯಾಗಿ ಬಳಸಬಹುದು ಎಂದಿದೆ. ಸ್ವತಃ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಕೂಡ ತೀರ ಅಪರೂಪದ ಸಂದರ್ಭದಲ್ಲಿ ಮಾತ್ರ ಇದನ್ನು ಬಳಸಬೇಕು ಎಂದಿದ್ದಾರೆ.