Published on: October 14, 2023
ವಾಯು ಶಕ್ತಿ ಶ್ರೇಯಾಂಕ
ವಾಯು ಶಕ್ತಿ ಶ್ರೇಯಾಂಕ
ಸುದ್ದಿಯಲ್ಲಿ ಏಕಿದೆ? 2022 ಮೇ ತಿಂಗಳಲ್ಲಿ ಜಾಗತಿಕ ವಾಯು ಶಕ್ತಿ ಶ್ರೇಯಾಂಕಗಳು ಎಂಬ ವರದಿಯನ್ನು ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್ಕ್ರಾಫ್ಟ್ (ಡಬ್ಲ್ಯುಡಿಎಂಎಂಎ) ಸಂಸ್ಥೆ ಪ್ರಕಟಿಸಿತು. ಮುಖ್ಯಾಂಶಗಳು
- ಭಾರತೀಯ ವಾಯುಪಡೆಯು ಜಾಗತಿಕವಾಗಿ 6ನೇ ರ್ಯಾಂಕ್ ಪಡೆದುಕೊಂಡಿದ್ದರೆ, ಚೀನಾ ವಾಯುಪಡೆಗೆ ದೊರೆತಿದ್ದು 7ನೇ ಸ್ಥಾನ. 2023ನೇ ಸಾಲಿನಲ್ಲೂ ಇದೇ ರ್ಯಾಂಕಿಂಗ್ ಮುಂದುವರಿದಿದೆ. ಪಾಕಿಸ್ತಾನವು ರ್ಯಾಂಕಿಂಗ್ನಲ್ಲಿ 18ನೇ ಸ್ಥಾನದಲ್ಲಿದೆ
- ಭಾರತೀಯ ವಾಯುಪಡೆಯ ಬಳಿ ಇರುವ ವಿಮಾನಗಳ ಸಂಖ್ಯೆ 1,645. ಚೀನಾ ಬಳಿ ಇರುವ ವಿಮಾನಗಳ ಸಂಖ್ಯೆ 2084.
- ಭಾರತೀಯ ವಾಯುಪಡೆಯ ಒಟ್ಟು 1645 ವಿಮಾನಗಳಲ್ಲಿ 632 ಮಾತ್ರ ಯುದ್ಧ ವಿಮಾನಗಳಾಗಿವೆ. ವಾಸ್ತವದಲ್ಲಿ ಭಾರತವು ಜಾಗತಿಕವಾಗಿ ಮೂರನೇ ಶಕ್ತಿಶಾಲಿ ವಾಯುಪಡೆಯಾಗಿದೆ. ಮೊದಲ ಐದು ಸ್ಥಾನಗಳ ಪೈಕಿ ಅಮೆರಿಕದ ವಿವಿಧ ವಾಯುಪಡೆಗಳೇ ಮೂರು ಸ್ಥಾನಗಳನ್ನು ಅಲಂಕರಿಸಿವೆ. ಹೀಗಾಗಿ, ಭಾರತದ ವಾಯುಪಡೆಗಿಂತ ಉನ್ನತ ರ್ಯಾಂಕಿಂಗ್ ಇರುವ ರಾಷ್ಟ್ರಗಳೆಂದರೆ ಅಮೆರಿಕ ಮತ್ತು ರಷ್ಯಾ ಮಾತ್ರ.
ಮಾನದಂಡಗಳು :
- ರ್ಯಾಂಕಿಂಗ್ ನೀಡಲು ಡಬ್ಲ್ಯುಡಿಎಂಎಂಎ ಅನುಸರಿಸಿರುವುದು ಟ್ರೂ ವ್ಯಾಲ್ಯು ರೇಟಿಂಗ್ (ಟಿವಿಆರ್- ನೈಜ ಮೌಲ್ಯ ಶ್ರೇಯಾಂಕ) ಎಂಬ ಸಾಕಷ್ಟು ವಸ್ತುನಿಷ್ಠ ವಿಧಾನವನ್ನು. ಇದು ವಾಯುಪಡೆಯೊಂದರ ಒಟ್ಟಾರೆ ಶಕ್ತಿಯ ಅಂಕಿ-ಅಂಶಗಳನ್ನು ಬಿಂಬಿಸುತ್ತದೆ. ಆಧುನೀಕರಣದ ಮಟ್ಟ, ಸರಕುಸಾಮಗ್ರಿ ಬೆಂಬಲ ಕಾರ್ಯವಿಧಾನಗಳು, ಆಕ್ರಮಣಕಾರಿ/ರಕ್ಷಣಾತ್ಮಕ ಸಾಮರ್ಥ್ಯಗಳು, ವಿಶೇಷ ಮಿಷನ್ ಸಾಮರ್ಥ್ಯ, ಬಾಂಬರ್ ದಾಸ್ತಾನುಗಳು, ತರಬೇತಿ ವೈಖರಿ, ವೈಮಾನಿಕ ಕೈಗಾರಿಕಾ ಸಾಮರ್ಥ್ಯ ಮತ್ತು ಪಡೆಯ ದಕ್ಷತೆ ಮುಂತಾದ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ರ್ಯಾಂಕಿಂಗ್ ನೀಡಲಾಗಿದೆ.
ಭಾರತೀಯ ವಾಯುಪಡೆಯ ಹಿನ್ನೆಲೆ:
- ಭಾರತೀಯ ವಾಯುಪಡೆಯನ್ನು ಬ್ರಿಟಿಷ್ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ 1932ರ ಅಕ್ಟೋಬರ್ 8ರಂದು ಸ್ಥಾಪಿಸಲಾಯಿತು. 1933ರ ಏಪ್ರಿಲ್ನಲ್ಲಿ ಮೊದಲ ಕಾರ್ಯಾಚರಣೆಯ ಸ್ಕಾ್ವಡ್ರನ್ ಅಸ್ತಿತ್ವಕ್ಕೆ ಬಂದಿತು. ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ ನಂತರದಲ್ಲಿ, ಭಾರತದಲ್ಲಿನ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ಫೋರ್ಸ್ ಎಂದು ಕರೆಯಲಾಯಿತು. ಈ ಮೊದಲು ಭಾರತದಲ್ಲಿ ವಾಯುಪಡೆಯನ್ನು 1932ರಲ್ಲಿ ಬ್ರಿಟನ್ನ ರಾಯಲ್ ಏರ್ ಫೋರ್ಸ್ ಪೋಷಕ ಪಡೆಯಾಗಿ ಬೆಳೆಸಲಾಯಿತು.
ನಿಮಗಿದು ತಿಳಿದಿರಲಿ
- ಭಾರತೀಯ ವಾಯುಪಡೆಯ (ಐಎಎಫ್) ಧ್ಯೇಯವಾಕ್ಯ: ‘ನಭಂ ಸ್ಪರ್ಶಂ ದೀಪ್ತಂ’(ವೈಭವದಿಂದ ಆಕಾಶವನ್ನು ಸ್ಪರ್ಶಿಸಿ). ವಾಯುಪಡೆಯು ಈ ಧ್ಯೇಯ ವಾಕ್ಯವನ್ನು ಭಗವದ್ಗೀತೆಯ 11ನೇ ಅಧ್ಯಾಯದಿಂದ ತೆಗೆದುಕೊಂಡಿದೆ. ಭಾರತೀಯ ವಾಯುಪಡೆಯು ಅಂದಾಜು 1,70,000 ಸಿಬ್ಬಂದಿಯನ್ನು ಹೊಂದಿದೆ.