Published on: November 30, 2021
‘ವೀರ್ಯ ಅಭಿಯಾನ’
‘ವೀರ್ಯ ಅಭಿಯಾನ’
ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಹಸುಗಳ ಸಂಖ್ಯೆ ವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ’ಲಿಂಗ ನಿರ್ಧಾರಿತ ವೀರ್ಯ’ ಬಳಕೆ ಪ್ರಕ್ರಿಯೆ ಚುರುಕುಗೊಳಿಸಲು 2022 ಜನವರಿಯಿಂದ ಸರಕಾರ ಹೊಸ ಅಭಿಯಾನ ಆರಂಭಿಸಲಿದೆ.
ಹಿನ್ನಲೆ
- ರೈತರಿಗೆ ಆರ್ಥಿಕ ಹೊರೆಯಾಗಿ ಕಾಡುತ್ತಿರುವ ಗಂಡು ಕರುಗಳ ಬದಲಿಗೆ, ಹೆಣ್ಣು ಕರು ಜನಿಸುವಂತೆ ವೀರ್ಯವನ್ನು ಬಳಕೆ ಮಾಡಿಕೊಳ್ಳಲು ದೇಶಾದ್ಯಂತ ಕೇಂದ್ರ ಸರಕಾರ 3 ಕಡೆ ಪ್ರಯೋಗಾಲಗಳನ್ನು ಆರಂಭಿಸಿದ್ದು, ಇವುಗಳ ಮೂಲಕ ರಾಜ್ಯಕ್ಕೆ 2 ಲಕ್ಷ ವೀರ್ಯ ಮಾದರಿ ಪೂರೈಕೆಯಾಗುವ ಸಾಧ್ಯತೆಯಿದೆ
- ಈಗಾಗಲೇ ವೀರ್ಯ ಬಳಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಒಂದು ಬಾರಿಗೆ 900ರಿಂದ 1000ರೂ. ದರ ನಿಗದಿಗೊಳಿಸಲಾಗಿದೆ. ಸರಕಾರದ ಸಬ್ಸಿಡಿಯೊಂದಿಗೆ ರೈತರಿಗೆ 450ರೂ.ಗೆ ಈ ಸೌಲಭ್ಯ ನೀಡಲಾಗುತ್ತಿದೆ. ಸಾಮಾನ್ಯ ವೀರ್ಯವನ್ನು ಬಹುತೇಕ ಹಾಲು ಒಕ್ಕೂಟಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಲಿಂಗ ನಿರ್ಧಾರಿತ ವೀರ್ಯಕ್ಕೆ 450ರೂ. ನೀಡಲು ರೈತರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಂಡು ಕರುಗಳ ಜನನವಾಗುತ್ತಿದೆ.
ಏನಿದು ಲಿಂಗ ನಿರ್ಧಾರಿತ ವೀರ್ಯ?
- ಹಸುಗಳಿಗೆ ಬಳಕೆ ಮಾಡುವ ಸಾಮಾನ್ಯ ವೀರ್ಯದ ಫಲಪ್ರದತೆ ಶೇ.50ರಷ್ಟಿದ್ದು, ಗಂಡು ಅಥವಾ ಹೆಣ್ಣು ಯಾವುದೇ ಕರು ಜನಿಸಬಹುದು. ಆದರೆ, ಲಿಂಗ ನಿರ್ಧಾರಿತ ವೀರ್ಯ ಬಳಕೆ ಮಾಡುವ ವಿಧಾನದಡಿ ಮೊದಲೇ ಹೆಣ್ಣು ಕರು ಜನಿಸಲು ಅಗತ್ಯವಿರುವ ವೀರ್ಯವನ್ನು ಪ್ರತ್ಯೇಕಿಸಿ ಹಸುವಿಗೆ ಬಳಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಶೇ.92ರಷ್ಟು ಫಲಪ್ರದತೆ ದರವಿದ್ದು, ಗಂಡು ಕರುಗಳ ಜನನ ನಿಯಂತ್ರಿಸಬಹುದಾಗಿದೆ. ವಂಶಾವಳಿ ದೃಢೀಕೃತ ಹೋರಿಗಳ ವೀರ್ಯ ಬಳಸುವುದರಿಂದ ಉತ್ಕೃಷ್ಟ ಹೆಣ್ಣು ಕರುಗಳ ಜನನವಾಗಲಿದೆ.
ಗೋಶಾಲೆಗಳಿಗೆ ರಿಲೀಫ್
- ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಜಾರಿಯಾಗಿರುವ ಹಿನ್ನೆಲೆ ಬಹುತೇಕ ಗೋಶಾಲೆಗಳು ಹೌಸ್‌ಫುಲ್ ಆಗಿವೆ. ರೈತರು ಗಂಡು ಕರುಗಳನ್ನು ಸಾಕಲಾಗದೆ ಬೀದಿಯಲ್ಲಿ ಬಿಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಗೋಶಾಲೆಗಳಿಗೆ ಸಂರಕ್ಷಿತ ಗೋವುಗಳ ನಿರ್ವಹಣೆ ಒತ್ತಡ ಸೃಷ್ಟಿಯಾಗಿದೆ. ಇದಲ್ಲದೆ ಎಳೆಯ ಗಂಡು ಕರುಗಳನ್ನು ಕಸಾಯಿಖಾನೆಗೆ ನೀಡುವುದೂ ಕಂಡುಬರುತ್ತಿದ್ದು, ಈ ಸಮಸ್ಯೆ ಪರಿಹರಿಸಲು ಸಹಾಯವಾಗಲಿದೆ.