Published on: June 23, 2023

ಸಿಬಿಐ ತನಿಖೆಗೆ ವಿಶೇಷ ಅನುಮತಿ

ಸಿಬಿಐ ತನಿಖೆಗೆ ವಿಶೇಷ ಅನುಮತಿ

ಸುದ್ದಿಯಲ್ಲಿ ಏಕಿದೆ? ಸಿಬಿಐ ತನಿಖೆಗೆ ನೀಡಿದ್ದ ‘ಸಾಮಾನ್ಯ ಸಮ್ಮತಿ’ಯ ಆದೇಶವನ್ನು ತಮಿಳುನಾಡು ಹಿಂಪಡೆದಿದೆ. ತಮಿಳುನಾಡಿನ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, ”ದೆಹಲಿ ವಿಶೇಷ ಪೊಲೀಸ್‌ ಸ್ಥಾಪನೆ ಕಾಯಿದೆ- 1946ರ ಅಡಿಯಲ್ಲಿ, ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡುವ ಮೊದಲು ಸಿಬಿಐ ಇನ್ಮುಂದೆ ರಾಜ್ಯ ಸರಕಾರದಿಂದ ವಿಶೇಷ ಅನುಮತಿ ಪಡೆಯಬೇಕು,” ಎಂದು ಉಲ್ಲೇಖಿಸಲಾಗಿದೆ. ಇಂಥ ನಿಲುವು ಕೈಗೊಂಡ 10ನೇ ರಾಜ್ಯ ತಮಿಳುನಾಡು ಆಗಿದೆ.

ಸಿಬಿಐಗೆ ಯಾವ್ಯಾವ ರಾಜ್ಯಗಳಲ್ಲಿ ನಿಷೇಧ?

  • ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್‌, ಕೇರಳ, ಮೇಘಾಲಯ, ಮಿಜೋರಾಂ, ಪಂಜಾಬ್‌, ರಾಜಸ್ಥಾನ ಹಾಗೂ ತೆಲಂಗಾಣ- ಈ ರಾಜ್ಯಗಳಿಗೆ ಸಿಬಿಐ ಏಕಾಏಕಿ ಧಾವಿಸಿ, ವಿಚಾರಣೆ ಕೈಗೊಳ್ಳುವಂತಿಲ್ಲ.

ಕಾರಣ

  • ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿಬಿಐ, ಜಾರಿ ನಿರ್ದೇಶನಾಲಯದಂಥ (ಇಡಿ) ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಈ ಸಂಬಂಧವಾಗಿ ಸಂಸತ್ತಿನ ಮುಂದೆ ಪ್ರತಿಭಟನೆಯನ್ನೂ ದಾಖಲಿಸಿದ್ದವು.

‘ಸಾಮಾನ್ಯ ಒಪ್ಪಿಗೆ’ ಎಂದರೆ ಏನು?

  • ದೆಹಲಿ ವಿಶೇಷ ಪೊಲೀಸ್‌ ಸ್ಥಾಪನೆ ಕಾಯಿದೆ-1946ರ ಅಡಿಯಲ್ಲಿ ಸಿಬಿಐ ಸ್ಥಾಪಿಸಲಾಗಿದೆ. ಯಾವುದೇ ಪ್ರಕರಣದ ತನಿಖೆಗೆ ಸಿಬಿಐ ಸಂಬಂಧಪಟ್ಟ ರಾಜ್ಯ ಸರಕಾರದ ಅನುಮತಿ ಪಡೆಯಬೇಕು ಎಂದು ಈ ಕಾನೂನಿನ ಸೆಕ್ಷನ್‌ 6 ಹೇಳುತ್ತದೆ. ಸಾಮಾನ್ಯವಾಗಿ ರಾಜ್ಯ ಸರಕಾರಗಳು ಸಿಬಿಐಗೆ ‘ಸಾಮಾನ್ಯ ಸಮ್ಮತಿ’ ನೀಡುತ್ತವೆ. ಈ ಒಪ್ಪಿಗೆ ಪಡೆದ ಮೇಲೆ, ಸಿಬಿಐ ಯಾವ ಅಡೆತಡೆಯಿಲ್ಲದೆ ರಾಜ್ಯಗಳಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡಬಹುದು.

ಈ  ರಾಜ್ಯಗಳಲ್ಲಿ ಸಿಬಿಐ ಯಾವಾಗ ತನಿಖೆ ಕೈಗೊಳ್ಳಬಹುದು?

  • ಸಿಬಿಐ ಕೇಂದ್ರ ಸರಕಾರದ ಅಧೀನದಲ್ಲಿದ್ದರೂ ಹೈಕೋರ್ಟ್‌, ಸುಪ್ರೀಂಕೋರ್ಟ್‌ ಅಥವಾ ಕೇಂದ್ರದಿಂದ ಆದೇಶ ಬಂದಾಗ ಮಾತ್ರ ಪ್ರಕರಣದ ತನಿಖೆ ನಡೆಸುತ್ತದೆ. ಒಂದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೆ, ತನಿಖೆಗಾಗಿ ಅಲ್ಲಿನ ರಾಜ್ಯ ಸರಕಾರದಿಂದ ಪ್ರೊಟೊಕಾಲ್‌ನಂತೆ ಅನುಮತಿ ಪಡೆಯಬೇಕು. ಒಂದು ವೇಳೆ, ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದರೆ ಸಂಸ್ಥೆಯು ಅಲ್ಲಿನ ಸರಕಾರದ ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ.

ಇತರೆ ಏಜೆನ್ಸಿಗಳಿಗೂ ಸರಕಾರದ ಒಪ್ಪಿಗೆ ಬೇಕೆ?

ಸಿಬಿಐ ಮಾತ್ರವೇ ರಾಜ್ಯ ಸರಕಾರದ ಅನುಮತಿ ಪಡೆಯಬೇಕು. ಆದರೆ, ಉಳಿದ ಕೇಂದ್ರ ಏಜೆನ್ಸಿಗಳಿಗೆ ಈ ಅವಶ್ಯಕತೆ ಇಲ್ಲ. ಅದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಥವಾ ಜಾರಿ ನಿರ್ದೇಶನಾಲಯ (ಇಡಿ) ಆಗಿರಲಿ. ಈ ಸಂಸ್ಥೆಗಳು ದೇಶದ ಎಲ್ಲಿಗೆ ಬೇಕಾದರೂ ಹೋಗಿ, ಏಕಾಏಕಿ ದಾಳಿ ನಡೆಸಿ ತನಿಖೆ ಕೈಗೊಳ್ಳಬಹುದು.

ಆ ಸಂಸ್ಥೆಗಳು ಈ ಕೆಳಗಿನಂತಿವೆ

  1. ಇಂಟೆಲಿಜೆನ್ಸ್‌ ಬ್ಯುರೊ (ಐಬಿ): ಆಂತರಿಕ ಗುಪ್ತಚರ ಸಂಸ್ಥೆ. ಇದರ ಸ್ಥಾಪನೆ ಬ್ರಿಟಿಷರ ಕಾಲದಲ್ಲೇ (1887) ಆಗಿರುವುದು ವಿಶೇಷ.
  2. ಎನ್‌ಫೋರ್ಸ್‌ಮೆಂಟ್‌ ಡೈರೆಕ್ಟೊರೇಟ್‌ (ಇಡಿ):ದೇಶೀಯ, ಆರ್ಥಿಕ ಕಾನೂನು ಜಾರಿ ಸಂಸ್ಥೆ. ಆರ್ಥಿಕ ಅಪರಾಧದ ವಿರುದ್ಧ ಹೋರಾಡುವ ಏಜೆನ್ಸಿ
  3. ಜಾಯಿಂಟ್‌ ಸಿಫರ್‌ ಬ್ಯುರೊ ದತ್ತಾಂಶಗಳ ಗೂಢಲಿಪೀಕರಣದ ಜಾಡನ್ನು ಬೆನ್ನಟ್ಟುವ ಸಂಸ್ಥೆ. ಇಂಟೆಲಿಜೆನ್ಸ್‌ ಬ್ಯುರೊ ಜತೆಗೂಡಿ ಕೆಲಸ ಮಾಡುತ್ತದೆ.
  4. ಸೆಂಟ್ರಲ್‌ ಎಕನಾಮಿಕ್‌ ಇಂಟೆಲಿಜೆನ್ಸ್‌ ಬ್ಯುರೊ (ಸಿಇಐಬಿ):ಆರ್ಥಿಕ ಅಪರಾಧಗಳನ್ನು ಬೆನ್ನಟ್ಟುವ ಗುಪ್ತಚರ ಸಂಸ್ಥೆ ಇದು. ಭ್ರಷ್ಟಾಚಾರದ ಪ್ರಕರಣವನ್ನು ಭೇದಿಸುತ್ತದೆ.
  5. ರೀಸರ್ಚ್ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ (ಆರ್‌ ಆ್ಯಂಡ್‌ ಎಡಬ್ಲ್ಯೂ): ಭಾರತದಲ್ಲಿನ ವಿದೇಶಿ ಇಂಟೆಲಿಜೆನ್ಸ್‌ ಏಜೆನ್ಸಿ ಇದಾಗಿದ್ದು, ದೇಶದೊಳಗಿನ ಜಾಗತಿಕ ಹಿತಾಸಕ್ತಿಗಳನ್ನು ಪರಾಮರ್ಶೆ ಮಾಡುತ್ತಿರುತ್ತದೆ.
    6. ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಡಿಐಎ) ಭದ್ರತಾಪಡೆಗಳಿಗೆ ಸೇನಾ ಗುಪ್ತಚರ ಮಾಹಿತಿಗಳನ್ನು ಪೂರೈಸುತ್ತದೆ.
  6. ನ್ಯಾಷನಲ್‌ ಇನ್ವೆಸ್ಟಿಗೇಟಿವ್‌ ಏಜೆನ್ಸಿ (ಎನ್‌ಐಎ): ಭಾರತದ ಬಹುಮುಖ್ಯ ಉಗ್ರ ನಿಗ್ರಹ ತನಿಖಾ ಏಜೆನ್ಸಿ.
  7. ನ್ಯಾಷನಲ್‌ ಟೆಕ್ನಿಕಲ್‌ ರಿಸರ್ಚ್ ಆರ್ಗನೈಸೇಶನ್‌ (ಎನ್‌ಟಿಆರ್‌ಒ): ಇತರೆ ಏಜೆನ್ಸಿಗಳಿಗೆ ಬಾಹ್ಯ ಹಾಗೂ ಆಂತರಿಕ ಭದ್ರತೆಗೆ ಸಂಬಂಧಿಸಿದ ತಾಂತ್ರಿಕ ಗುಪ್ತಚರ ಮಾಹಿತಿಗಳನ್ನು ಪೂರೈಸುತ್ತದೆ.
    9. ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯುರೊ (ಎನ್‌ಸಿಬಿ): ಮಾದಕವಸ್ತು ಕಳ್ಳಸಾಗಣೆ ಟ್ರ್ಯಾಕ್‌ ಮಾಡುವುದಷ್ಟೇ ಅಲ್ಲ, ಡ್ರಗ್‌ ಸಂಬಂಧಿತ ಅಪರಾಧ ತಡೆಯುತ್ತದೆ.