Published on: July 22, 2023
ಸ್ಥಳೀಯ ಕರೆನ್ಸಿ ಸಂದಾಯ ವ್ಯವಸ್ಥೆ (LCSS)
ಸ್ಥಳೀಯ ಕರೆನ್ಸಿ ಸಂದಾಯ ವ್ಯವಸ್ಥೆ (LCSS)
ಸುದ್ದಿಯಲ್ಲಿ ಏಕಿದೆ? ಗಡಿಯಾಚೆಗಿನ ವಹಿವಾಟುಗಳಿಗಾಗಿ ಭಾರತೀಯ ರೂಪಾಯಿ (INR) ಮತ್ತು UAE ದಿರ್ಹಾಮ್ (AED) ಬಳಕೆಯನ್ನು ಉತ್ತೇಜಿಸಲು ಸ್ಥಳೀಯ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ (LCSS) ಅನ್ನು ಸ್ಥಾಪಿಸಲು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಒಪ್ಪಂದಕ್ಕೆ ಸಹಿ ಹಾಕಿವೆ.
ಮುಖ್ಯಾಂಶಗಳು
- ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಸಂಯುಕ್ತ ಅರಬ್ ಸಂಸ್ಥಾನಗಳಿಗೆ (ಯುಎಇ) ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ಆರಂಭಿಸಲು ಮಾಡಿಕೊಂಡಿರುವ ಒಪ್ಪಂದವು ರೂಪಾಯಿಯನ್ನು ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ಹೆಚ್ಚೆಚ್ಚು ಬಳಕೆಮಾಡಬೇಕು ಎಂಬ ಕೇಂದ್ರದ ನೀತಿಗೆ ಅನುಗುಣವಾಗಿ ಇದೆ.
- ಈ ದಿಸೆಯಲ್ಲಿ, ದ್ವಿಪಕ್ಷೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಆರಂಭಿಕ ಹೆಜ್ಜೆಗಳನ್ನು ಇರಿಸಿಯಾಗಿದೆ.
ಉದ್ದೇಶ
- ಭಾರತದ ಪಾಲಿಗೆ ಯುಎಇ ಮೂರನೆಯ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಕಾರಣ, ಆ ದೇಶದ ಜೊತೆ ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸಲು ಮಾಡಿಕೊಂಡಿರುವ ಒಪ್ಪಂದವು ಮಹತ್ವದ್ದಾಗುತ್ತದೆ. ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಯನ್ನು ಹೆಚ್ಚಿಸುವ ಬಯಕೆ ಭಾರತದ್ದು.
ಏನಿದು LCSS?
- ಎರಡು ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಆಯಾ ದೇಶೀಯ ಕರೆನ್ಸಿಗಳಲ್ಲಿ ನಡೆಸಲು ಅನುವು ಮಾಡಿಕೊಡುವ ಕಾರ್ಯವಿಧಾನವಾಗಿದೆ. ಇದು ಎಲ್ಲಾ ಚಾಲ್ತಿ ಖಾತೆ ವಹಿವಾಟುಗಳು ಮತ್ತು ಅನುಮತಿಸಲಾದ ಬಂಡವಾಳ ಖಾತೆ ವಹಿವಾಟುಗಳನ್ನು ಒಳಗೊಳ್ಳುತ್ತದೆ.
ಪ್ರಯೋಜನಗಳು
- ಯುಎಇ ಭಾರತ ದೇಶದ 4 ನೇ ಅತಿದೊಡ್ಡ ಇಂಧನ ಪೂರೈಕೆದಾರ (ಎಫ್ವೈ 22-23 ರಲ್ಲಿ) ಯುಎಇಯಿಂದ ತೈಲ ಮತ್ತು ಇತರ ಸರಕುಗಳ ಆಮದುಗಳಿಗೆ ಪಾವತಿಸಲು ಈ ಕಾರ್ಯವಿಧಾನವನ್ನು ಬಳಸಬಹುದು.
- ವಿದೇಶಿ ವಿನಿಮಯ ವೆಚ್ಚದಲ್ಲಿ ಕಡಿತ: ಭಾರತೀಯ ರಫ್ತುದಾರರು INR ನಲ್ಲಿ ಪಾವತಿಸಬಹುದು ಮತ್ತು UAE ಆಮದುದಾರರು AED ನಲ್ಲಿ ಪಾವತಿಸಬಹುದು, ಇದರಿಂದ ಮೂರನೇ ಕರೆನ್ಸಿ USD ಯಲ್ಲಿ ನಡೆಯುವ ವಹಿವಾಟನ್ನು ಕಡಿಮೆ ಮಾಡಬಹದು ಮತ್ತು ಇದನ್ನು ನಮ್ಮ ಸ್ಥಳೀಯ ಕರೆನ್ಸಿಗೆ ಪರಿವರ್ತಿಸಬೇಕಾಗುವ ಅನಿವಾರ್ಯತೆಯನ್ನು ತೆಗೆದುಹಾಕಬಹುದು.
- ವಿನಿಮಯ ದರದ ಅಪಾಯಗಳ ತಗ್ಗಿಸುವಿಕೆ : ಕಂಪನಿಗಳು ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುವ ಮೂಲಕ ವಿನಿಮಯ ದರದ ಅಪಾಯಗಳನ್ನು ತಡೆಗಟ್ಟಬಹುದು, ವಿನಿಮಯ ದರಗಳಲ್ಲಿನ ಏರಿಳಿತಗಳಿಂದ ಉಂಟಾಗುವ ನಷ್ಟಗಳನ್ನು ಸೀಮಿತಗೊಳಿಸಬಹುದು.
- ಸುಧಾರಿತ ವಹಿವಾಟು: ವ್ಯವಹಾರ ಮಾಡುವ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ದೇಶೀಯ ಕರೆನ್ಸಿಗಳಲ್ಲಿ ಇನ್ವಾಯ್ಸ್ ಮತ್ತು ಪಾವತಿಗಳನ್ನು ಇತ್ಯರ್ಥಪಡಿಸಬಹುದು, ಸಂಕೀರ್ಣತೆಗಳು ಮತ್ತು ಸಮಯ ವಿಳಂಬಗಳನ್ನು ಕಡಿಮೆ ಮಾಡುವುದರಿಂದ ವಹಿವಾಟು ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಬಹುದು.
- ವರ್ಧಿತ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳು: LCSS ನ ಬಳಕೆಯು ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾದ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುವ ಮೂಲಕ ಭಾರತ ಮತ್ತು UAE ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ.
- ಪರಿಪೂರ್ಣ ಹಣ ಪಾವತಿಗೆ ಅವಕಾಶ: UAE ನಲ್ಲಿರುವ ಭಾರತೀಯ ನಿವಾಸಿಗಳು INR ನಲ್ಲಿ ಹಣ ಕಳುಹಿಸಬಹುದು, ಕಡಿಮೆ ವಹಿವಾಟು ವೆಚ್ಚಗಳು ಮತ್ತು ವೇಗವಾಗಿ ಸಂದಾಯವಾಗುವುದರಿಂದ ಸಮಯದ ಲಾಭ ಪಡೆಯಬಹುದು.
- ಅಂತರರಾಷ್ಟ್ರೀಯ ಮಟ್ಟದಲ್ಲಿನ ವಹಿವಾಟುಗಳಲ್ಲಿ ಡಾಲರ್ ಬಳಕೆಯನ್ನು ತಗ್ಗಿಸಿದರೆ, ಆ ಕರೆನ್ಸಿಯ ಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ತುಂಬಲು ಬೇರೆ ಯಾವ ಕರೆನ್ಸಿಗೂ ಶಕ್ತಿಯಿಲ್ಲ. ಹೀಗಾಗಿ, ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿಗೆ ಒಂದಿಷ್ಟು ಪಾಲುಹೊಂದುವ ಅವಕಾಶವಿದೆ ಎಂದು ಕೇಂದ್ರ ಅಂದಾಜಿಸಿದೆ.
ಭಾರತದ ಇತರ ದೇಶಗಳೊಂದಿಗಿನ ಸ್ಥಳೀಯ ಕರೆನ್ಸಿಯಲ್ಲಿ ವ್ಯವಹಾರ
- ಬಾಂಗ್ಲಾದೇಶದ ಜೊತೆ ರೂಪಾಯಿಯಲ್ಲಿ ವಹಿವಾಟಿಗೆ ಚಾಲನೆ ನೀಡಲಾಗಿದೆ.
- ರಷ್ಯಾ ದೇಶವು ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ಒಟ್ಟಾಗಿ ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದವು. ಇದಾದ ನಂತರದಲ್ಲಿ ಭಾರತವು ರೂಪಾಯಿ ಬಳಸಿ ವಹಿವಾಟು ನಡೆಸುವ ವಿಚಾರವಾಗಿ ರಷ್ಯಾ ಜೊತೆಗೂ ಒಪ್ಪಂದವೊಂದನ್ನು ಮಾಡಿಕೊಂಡಿದೆ.
- ಭಾರತ ಮತ್ತು ತಾಂಜಾನಿಯಾ ಸ್ಥಳೀಯ ಕರೆನ್ಸಿ ಮೂಲಕ ವ್ಯವಹಾರ ಆರಂಭಿಸಿವೆ. ಇದರಿಂದ ಉಭಯ ದೇಶಗಳ ವಾಣಿಜ್ಯ ವ್ಯವಹಾರಗಳಿಗೆ ಉತ್ತೇಜನ ದೊರಕಲಿದೆ. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು ಬಲಿಷ್ಠವಾಗಿ ಬೆಳೆಯುತ್ತಿದೆ. 2022–23ನೇ ಸಾಲಿನಲ್ಲಿ 52,873 ಕೋಟಿ (6.4 ಬಿಲಿಯನ್ ಡಾಲರ್) ತಲುಪಿದೆ. ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ ಮತ್ತು ಕೆನರಾ ಬ್ಯಾಂಕ್ಗಳು ತಾಂಜಾನಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
- ಇಂಡೊನೇಷ್ಯಾ ಜೊತೆ ಕೂಡ ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುವ ವಿಚಾರವಾಗಿ ಮಾತುಕತೆಗಳು ನಡೆದಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಮಿತಿ
- ರೂಪಾಯಿ ಬಳಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಚ್ಚಿಸಲು ಯೋಜನೆಯೊಂದನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರಚಿಸಿದ್ದ ಸಮಿತಿಯೊಂದು ವರದಿಯನ್ನು ಈಚೆಗೆ ಸಲ್ಲಿಸಿದೆ. ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಯನ್ನು ಇನ್ನಷ್ಟು ಹೆಚ್ಚು ಮಾಡಲು ಅದು ಹಲವು ಪ್ರಸ್ತಾವಗಳನ್ನು ಪಟ್ಟಿ ಮಾಡಿದೆ.
- ರೂಪಾಯಿಯಲ್ಲಿ ಮಾಡುವ ಪಾವತಿಗಳಿಗೆ ಏಕರೂಪದ ಮಾದರಿಯೊಂದನ್ನು ಅಳವಡಿಸಿಕೊಳ್ಳುವುದು, ಪಾವತಿಗಳಲ್ಲಿ ರೂಪಾಯಿಯನ್ನು ಬಳಕೆಮಾಡುವ ರಫ್ತುದಾರರಿಗೆ ಉತ್ತೇಜನ ನೀಡುವುದು, ಭಾರತದ ಪಾವತಿ ವ್ಯವಸ್ಥೆಯನ್ನು ಇತರ ದೇಶಗಳ ಪಾವತಿ ವ್ಯವಸ್ಥೆಯ ಜೊತೆ ಒಂದಾಗಿಸುವುದು ಸಮಿತಿಯ ಪ್ರಸ್ತಾವಗಳಲ್ಲಿ ಇವೆ. ಇವೆಲ್ಲ ರೂಪಾಯಿಯಲ್ಲಿ ವಹಿವಾಟು ಹೆಚ್ಚಿಸಲು ಇರುವ ಅಲ್ಪಾವಧಿ ಕ್ರಮಗಳು.
ಸವಾಲುಗಳು
- ದೇಶದ ಅರ್ಥವ್ಯವಸ್ಥೆಯು ಇನ್ನಷ್ಟು ದೊಡ್ಡದಾಗಿ ಬೆಳೆಯಬೇಕು
- ವ್ಯಾಪಾರ ವಹಿವಾಟಿನ ಗಾತ್ರವು ವಿಸ್ತಾರವಾಗಬೇಕು.
- ಒಪ್ಪಂದ ಆಗಿದ್ದರೂ ರಷ್ಯಾ ಜೊತೆ ರೂಪಾಯಿಯಲ್ಲಿ ವಹಿವಾಟು ಆರಂಭವಾಗಿಲ್ಲ. ಭಾರತದಿಂದ ತಾನು ಮಾಡಿಕೊಳ್ಳುವ ಆಮದಿನ ಮೊತ್ತವು ರೂಪಾಯಿಯಲ್ಲಿ ವಹಿವಾಟು ನಡೆಸಲು ಸಾಕಾಗುವಷ್ಟು ಇಲ್ಲ, ಭಾರತವು ರೂಪಾಯಿಯಲ್ಲಿ ಪಾವತಿಗಳನ್ನು ಮಾಡಿದರೆ ಆ ರೂಪಾಯಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಳಕೆ ಮಾಡಲು ತನಗೆ ಇರುವ ಅವಕಾಶಗಳು ಕಡಿಮೆ ಎಂದು ರಷ್ಯಾ ಹೇಳಿದೆ ಎಂಬ ವರದಿಗಳು ಇವೆ. ಅದಕ್ಕಾಗಿ, ಭಾರತವು ತನಗೆ ಮಾಡಬೇಕಿರುವ ಪಾವತಿಗಳನ್ನು ಯುವಾನ್ ಬಳಸಿ ಮಾಡಲಿ ಎಂದು ರಷ್ಯಾ ಬಯಸಿದೆ.
- ಜಾಗತಿಕ ವಹಿವಾಟಿನಲ್ಲಿ ಭಾರತದ ಪಾಲು ಶೇಕಡ 2ರಷ್ಟು ಮಾತ್ರವೇ ಇದೆ. ಇದು ಬಹಳ ಸಣ್ಣ ಪ್ರಮಾಣ. ದೇಶದ ವ್ಯಾಪಾರ ಕೊರತೆ ಅಂತರವು ಬಹಳ ದೊಡ್ಡದಾಗಿದೆ.
ಮುಂದಿನ ದಾರಿ
- ರೂಪಾಯಿಯ ಅಂತರರಾಷ್ಟ್ರೀಕರಣವು ನಿಜ ಅರ್ಥದಲ್ಲಿ ಆಗಬೇಕು ಎಂದಾದರೆ ದೇಶದೊಳಕ್ಕೆ ಬರುವ ಹಾಗೂ ದೇಶದಿಂದ ಹೊರಹೋಗುವ ವಿದೇಶಿ ಬಂಡವಾಳದ ಮೇಲೆ ಸರ್ಕಾರ ಅಥವಾ ಕೇಂದ್ರೀಯ ಬ್ಯಾಂಕ್ನ ನಿಯಂತ್ರಣ ಇರಬಾರದು. ಭಾರತದ ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಬಳಸುವುದರಿಂದ ಹಲವು ಪ್ರಯೋಜನಗಳು ಇವೆಯಾದರೂ, ಅದರ ಅನುಷ್ಠಾನವು ಬಹಳ ನಿಧಾನಗತಿಯ ಪ್ರಕ್ರಿಯೆಯಾಗಿರುತ್ತದೆ. ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಯ ಜೊತೆಯಲ್ಲೇ ಇದು ವಿಕಾಸ ಹೊಂದುತ್ತ ಸಾಗುತ್ತದೆ. ಜಾಗತಿಕ ಮಟ್ಟದಲ್ಲಿ ಆಗುವ ಬದಲಾವಣೆಗಳು ಕೂಡ ಇದರ ಮೇಲೆ ಪ್ರಭಾವ ಬೀರುತ್ತವ