Published on: November 11, 2021

‘ಸ್ವಾಮಿತ್ವ’ ಯೋಜನೆ

‘ಸ್ವಾಮಿತ್ವ’ ಯೋಜನೆ

ಸುದ್ಧಿಯಲ್ಲಿ ಏಕಿದೆ ?  ಗ್ರಾಮೀಣ ಜನರಿಗೆ ಶಾಸನಬದ್ಧ ಮನೆ ಹಕ್ಕು ಪತ್ರ ನೀಡಿ, ಪರೋಕ್ಷವಾಗಿ ಆರ್ಥಿಕ ಮೂಲ ಸೃಷ್ಟಿಸಿಕೊಡುವ ಮಹತ್ವಾಕಾಂಕ್ಷೆಯ ಯೋಜನೆ ‘ಸ್ವಾಮಿತ್ವ’ಕ್ಕೆ ಹತ್ತಾರು ವಿಘ್ನಗಳು ಎದುರಾಗಿವೆ.

ಏನಿದು ‘ಸ್ವಾಮಿತ್ವ’ ಯೋಜನೆ?

  • ನೂರಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಿದ್ದರೂ ಮನೆಗಳ ಮಾಲೀಕತ್ವದ ಹಕ್ಕು ಹೊಂದಿರದ ವಾರಸುದಾರರಿಗೆ ಗ್ರಾಮೀಣ ಮನೆಗಳ ನಾಲ್ಕು ದಿಕ್ಕಿನಲ್ಲೂ ಗಡಿ ನಿಗದಿಪಡಿಸಿ ಶಾಸನಬದ್ಧ ಮನೆ ಮಾಲೀಕತ್ವದ ಹಕ್ಕು ಪತ್ರ ನೀಡುವ ಯೋಜನೆಯೇ ‘ಸ್ವಾಮಿತ್ವ’. ನಗರ ಪ್ರದೇಶದಂತೆಯೇ ದೇಶದ ಪ್ರತಿ ಗ್ರಾಮದ ಮನೆಗಳಿಗೂ 2024ರೊಳಗೆ ಹಕ್ಕು ಪತ್ರ ಒದಗಿಸುವ ಕೇಂದ್ರ ಸರಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಸ್ವಾಮಿತ್ವವೂ ಒಂದು.

ಸರ್ವೆಗೆ ಹಿನ್ನಡೆ?

  • ‘ಸ್ವಾಮಿತ್ವ’ ಯೋಜನೆ ಮಹತ್ವದ್ದಾಗಿದ್ದರೂ ಸರ್ವೆ ಇಲಾಖೆಗೆ ಈ ಕಾರ್ಯ ಹೆಚ್ಚುವರಿ ಹೊರೆಯಾಗಿದೆ. ಹೀಗಾಗಿ ಸರ್ವೆ ಕಾರ್ಯದ ಪ್ರಗತಿ ಸಾಧಿಸುತ್ತಿಲ್ಲ. ಇಲಾಖೆ ಬಳಿ ಮಾನವ ಸಂಪನ್ಮೂಲ ಕೊರತೆ ಇದೆ. ಸರ್ವೆ, ಕೋರ್ಟ್‌ ವ್ಯಾಜ್ಯ, ದಾಯಾದಿಗಳ ಕಲಹ ಒಳಗೊಂಡಂತೆ ರಾಜ್ಯದಲ್ಲಿ ಪ್ರತಿವರ್ಷ 6 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಈ ವ್ಯಾಜ್ಯಗಳನ್ನು ಬಗಹರಿಸುವುದೇ ಸವಾಲಾಗಿರುವುದರಿಂದ ‘ಸ್ವಾಮಿತ್ವ’ ಯೋಜನೆಗೆ ವಿಶೇಷ ಸಿಬ್ಬಂದಿ ಮತ್ತು ಸಮಯ ಮೀಸಲಿಡುವ ಅಗತ್ಯವಿದೆ.

ವಿಘ್ನಗಳೇನು?

  • ಕೋವಿಡ್‌, ಲಾಕ್‌ಡೌನ್‌
  • ಪ್ರಾಕೃತಿಕ ವಿಕೋಪ ಹಿನ್ನೆಲೆಯಲ್ಲಿ ಗ್ರಾಮಗಳ ಡ್ರೋನ್‌ ಚಿತ್ರೀಕರಣ ಮತ್ತು ಮ್ಯಾಪಿಂಗ್‌ ಸಮಸ್ಯೆ
  • ಮಲೆನಾಡು ಗ್ರಾಮಗಳಲ್ಲಿ ಡ್ರೋನ್‌ ಮ್ಯಾಪಿಂಗ್‌ ಅಸಾಧ್ಯ
  • ಗ್ರಾ.ಪಂ.ಗಳಲ್ಲಿ ಮಾಲೀಕತ್ವದ ಮಾಹಿತಿ ಸಿಕ್ಕರೂ ತೀವ್ರ ಮಳೆ, ಭೂಕುಸಿತದಿಂದ ಸ್ಥಳದಲ್ಲಿ ಸರ್ವೆ ಸಾಧ್ಯವಾಗುತ್ತಿಲ್ಲ
  • ದಾಯಾದಿಗಳ ನಡುವೆ ನ್ಯಾಯ ಪಂಚಾಯಿತಿ ಬಾಕಿ
  • ಹವಾಮಾನದಲ್ಲಿ ಬದಲಾವಣೆ.

ಗ್ರಾಮ ಠಾಣಾ ವ್ಯಾಪ್ತಿ ಮೀರಿ

  • ಗ್ರಾಮ ಠಾಣಾ ಎಂದರೆ ಜನವಸತಿ ಪ್ರದೇಶ. ಗ್ರಾಮೀಣ ಭಾಗದಲ್ಲೂ ಕಂದಾಯ ಸೃಷ್ಟಿಸುವ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶ ಹೊರತುಪಡಿಸಿ ಸುತ್ತಲಿನ ಕೃಷಿ ಭೂಮಿಯನ್ನು ಅಳತೆ ಮಾಡಿ ಗಡಿ ನಿಗದಿಪಡಿಸಿದ್ದ ಬ್ರಿಟಿಷ್‌ ಸರಕಾರ, ಅಳತೆ ಮಾಡದೆ ಬಿಟ್ಟಿದ್ದ ಜಮೀನಿಗೆ ಗ್ರಾಮ ಠಾಣಾ ಎಂದು ಹೆಸರಿಸಿತ್ತು. ಸದ್ಯಕ್ಕೆ ಗ್ರಾಮ ಠಾಣಾ ವ್ಯಾಪ್ತಿಗೂ ಮೀರಿ ಜನವಸತಿ ಬೆಳೆದಿದೆ. ಹೀಗಾಗಿ ಗ್ರಾಮ ಠಾಣಾ ವ್ಯಾಪ್ತಿಗೂ ಹೊರಗಡೆ ವಿಸ್ತರಿಸಿದ ಗ್ರಾಮೀಣ ಪ್ರದೇಶದ 1.75 ಲಕ್ಷ ಹೆಚ್ಚುವರಿ ಮನೆಗಳಿಗೆ ‘ಸ್ವಾಮಿತ್ವ’ದ ಪತ್ರಗಳನ್ನು ಇಲಾಖೆ ವಿತರಿಸಿದೆ.

ಕೃಷಿಕರಿಗೆ ಅನುಕೂಲ

  • ಮನೆಗಳಿಗೆ ನೀಡುವ ಶಾಸನಬದ್ಧ ಹಕ್ಕು ಪತ್ರವೊಂದು ಸರಕಾರಿ ದಾಖಲೆ ಆಗಿರುತ್ತದೆ. ಹೀಗಾಗಿ ಕೃಷಿಕರಿಗೆ ಆರ್ಥಿಕ ಮೂಲ ಸೃಷ್ಟಿಸಿಕೊಡುವ ಈ ಯೋಜನೆಯಿಂದ ನಾನಾ ಅನುಕೂಲಗಳಿವೆ. ಶಾಸನಬದ್ಧ ಮಾಲೀಕತ್ವ ಹೊಂದುವುದರ ಜತೆಗೆ ಆರೋಗ್ಯ, ಶಿಕ್ಷಣ, ಮದುವೆ ಇತ್ಯಾದಿ ಸಮಾರಂಭಗಳಿಗೂ ಹಕ್ಕುಪತ್ರ ಅಡಮಾನವಾಗಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದು. ನಗದೀಕರಣ, ಮಾರಾಟಕ್ಕೆ ಅಡ, ಆಸ್ತಿ ಅಡಮಾನ, ವ್ಯಾಜ್ಯಗಳು ಸೃಷ್ಟಿಯಾದರೆ ಸಾಕ್ಷಿ ಪತ್ರವಾಗಿ ದಾಖಲೆಯಾಗಿಯೂ ಬಳಕೆಯಾಗುತ್ತದೆ.