Published on: October 15, 2021
ಹಸಿವು ಸೂಚ್ಯಂಕ
ಹಸಿವು ಸೂಚ್ಯಂಕ
ಸುದ್ಧಿಯಲ್ಲಿ ಏಕಿದೆ? ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಂದ ಹಿಂದುಳಿದಿದೆ.
- ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ 76, ಬಾಂಗ್ಲಾದೇಶ 76, ಮ್ಯಾನ್ಮಾರ್ 71 ಮತ್ತು ಪಾಕಿಸ್ತಾನ 92ನೇ ರ್ಯಾಂಕ್ ಪಡೆದಿವೆ.
- ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ರಾಷ್ಟ್ರಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಆದರೆ ಭಾರತ 101ನೇ ರ್ಯಾಂಕ್ಗೆ ಕುಸಿದಿರುವುದು ಕಳವಳಕಾರಿಯಾಗಿದೆ. ಕಳೆದ ವರ್ಷ 107 ರಾಷ್ಟ್ರಗಳ ಪೈಕಿ 94ನೇ ಸ್ಥಾನದಲ್ಲಿತ್ತು.
- ಜಾಗತಿಕ ಹಸಿವು ಸೂಚ್ಯಂಕ(ಜಿಎಚ್ಐ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತದೆ. ಐರ್ಲೆಂಡ್ನ ಧನಸಹಾಯ ಹೊಂದಿರುವ ಏಜೆನ್ಸಿ ಕನ್ಸರ್ನ್ ವರ್ಲ್ಡ್ವೈಡ್ ಮತ್ತು ಜರ್ಮನಿಯ ಸಂಸ್ಥೆ ವೆಲ್ಟ್ ಹಂಗರ್ ಹೆಲ್ಪ್ ಸಹಯೋಗದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
- ವಿಶ್ವದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ. 2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇಕಡಾ 17.3 ಇದೆ. 1998-2002ರ ನಡುವೆ ಈ ಪ್ರಮಾಣ ಶೇಕಡಾ 17.1 ಇತ್ತು ಎಂದು ಜಿಎಚ್ಐ ವರದಿ ಹೇಳಿದೆ.
- ಕೋವಿಡ್-19 ಸೋಂಕು ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾದ ಲಾಕ್ಡೌನ್, ಕರ್ಫ್ಯೂಗಳಂತಹ ಕಠಿಣ ಕ್ರಮಗಳು ಹಸಿವಿನ ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ ಮಾಡಲು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
- ಸೋಮಾಲಿಯಾದಲ್ಲಿ ಗರಿಷ್ಠ ಹಸಿವಿನ ಸಮಸ್ಯೆಯಿದೆಯೆಂದು ತಿಳಿದುಬಂದಿದ್ದು, ಈ ಪಟ್ಟಿಯಲ್ಲಿ ಈ ದೇಶ ಕೊನೆಯ ಸ್ಥಾನದಲ್ಲಿದೆ. 2000ರಿಂದ ಜಾಗತಿಕ ಹಸಿವಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಪ್ರಗತಿ ನಿಧಾನಗತಿಯಲ್ಲಿದೆ
- ಈ ವರ್ಷ ಈ ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿನ ಸ್ಥಾನಗಳಲ್ಲಿ ವಪುವಾ ನ್ಯೂ ಗಿನಿ, ಅಫ್ಘಾನಿಸ್ತಾನ, ನೈಜೀರಿಯಾ, ಕಾಂಗೊ,ಮೊಂಜಂಬಿಕ್, ಸಿಯೆರಾ ಲಿಯೋನ್, ಟಿಮೋರ್ ಲೆಸ್ಟೆ, ಹೈಟಿ, ಲೈಬೀರಿಯಾ, ಮಡಗಾಸ್ಕರ್, ಕಾಂಗೋ ಗಣರಾಜ್ಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಯೆಮೆನ್ ಹಾಗೂ ಸೋಮಾಲಿಯಾ ಇವೆ.