Published on: August 9, 2022
ಹೈಕೋರ್ಟ್ ತೀರ್ಪಿನಲ್ಲಿ ಫೋಟೊ: ದೇಶದಲ್ಲೇ ಮೊದಲು
ಹೈಕೋರ್ಟ್ ತೀರ್ಪಿನಲ್ಲಿ ಫೋಟೊ: ದೇಶದಲ್ಲೇ ಮೊದಲು
ಸುದ್ದಿಯಲ್ಲಿ ಏಕಿದೆ?
ಪಟಾಕಿಗಳನ್ನು ಬೆಂಗಳೂರು ನಗರ ಪ್ರದೇಶದ ಹೊರವಲಯದಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಹೊರಡಿಸಿದ್ದ ಪೊಲೀಸ್ ಇಲಾಖೆಯ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ‘ನಗರ ಪ್ರದೇಶಗಳ ಒಳಗೆ ಪಟಾಕಿ ಮಾರಾಟ ನಡೆಸುವುದು ಜೀವಸಂಕುಲಕ್ಕೆ ಅತ್ಯಂತ ಅಪಾಯ ಕಾರಿಯಾದುದು’ ಎಂದು ಅಭಿಪ್ರಾಯಪಟ್ಟಿದೆ.
ಹಿನ್ನಲೆ
- ಬೆಂಗಳೂರು ಮಹಾನಗರದ ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವುದಕ್ಕೆ ನೀಡಲಾಗಿದ್ದ ನಿರಾಕ್ಷೇಪಣ ಪತ್ರವನ್ನು ಹಿಂಪಡೆದ ಪೊಲೀಸ್ ಇಲಾಖೆಯ ಆದೇಶ ಪ್ರಶ್ನಿಸಿ ಮೆಸರ್ಸ್ ಮಧಿ ಟ್ರೇಡಿಂಗ್ ಕಂಪನಿ ಸೇರಿದಂತೆ ಒಟ್ಟು 10 ವ್ಯಾಪಾರಸ್ಥರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಮುಖ್ಯಾಂಶಗಳು
- ‘ಪಟಾಕಿ ಮಾರಾಟ ಮಾಡುವುದು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು ಎನಿಸುವುದಿಲ್ಲ. ಯಾಕೆಂದರೆ ಈ ವಿಧಿಯಡಿ, ವಿಷ, ಲಿಕ್ಕರ್, ತಂಬಾಕು, ಸ್ಫೋಟಕ ವಸ್ತುಗಳ ಮಾರಾಟ ಹೇಗೆ ಮೂಲಭೂತ ಹಕ್ಕು ಎನ್ನಿಸಿಕೊಳ್ಳುವುದಿಲ್ಲವೋ ಅದೇ ರೀತಿ ಪಟಾಕಿ ಮಾರಾಟವೂ ಕೂಡಾ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಹಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದೆ.
- ‘ಬೆಂಗಳೂರಿನಂತಹ ಜನನಿಬಿಡ ಪ್ರದೇಶಗಳು ಈಗಾಗಲೇ ಶಬ್ದ ಹಾಗೂ ವಾಯು ಮಾಲಿನ್ಯದಿಂದ ತತ್ತರಿಸುತ್ತಿವೆ. ಇಂತಹುದರಲ್ಲಿ ಪಟಾಕಿ ಸುಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಈಗಿರುವ ಸಂಕಟ ಮತ್ತಷ್ಟು ಹೆಚ್ಚುತ್ತದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
- ‘ಪಟಾಕಿಗಳು ವ್ಯಾಪಾರ ವಹಿವಾಟು ನಡೆಸಲು ಅತೀತವಾದ ಸರಕುಗಳ (ರೆಸ್ ಎಕ್ಸ್ಟ್ರಾ ಕಮರ್ಶಿಯಮ್) ವ್ಯಾಪ್ತಿಗೆ ಒಳಪಡುತ್ತವೆ. ಅಂತೆಯೇ, ಹಸಿರು ಪಟಾಕಿಗಳೂ ಸ್ಫೋಟಕವೇ ಆದ್ದರಿಂದ ಅವೂ ಪರಿಸರಕ್ಕೆ ಮಾರಕ. ಹಾಗಾಗಿ, ಪಟಾಕಿಗಳ ಉತ್ಪಾದನೆ, ಸಾಗಾಟ ಮೂಲಭೂತ ಹಕ್ಕಿನ ಮಿತಿಯಲ್ಲಿ ಪ್ರಶ್ನಾರ್ಹ ಎನಿಸುವುದಿಲ್ಲ ಹಾಗೂ ಪಟಾಕಿಗಳನ್ನು ಸುಡುವುದರಿಂದ ಪ್ರಕೃತಿಗೆ ಅಪಾಯವಿದೆ ಎಂದು ಹೇಳುವುದಕ್ಕೆ ಯಾವುದೇ ಹೆಚ್ಚಿನ ಸಂಶೋಧನೆ ಬೇಕಿಲ್ಲ’ ಎಂದು ನ್ಯಾಯಪೀಠ ವಿವರಿಸಿದೆ.
ತೀರ್ಪಿನಲ್ಲಿ ಫೋಟೊ:
- ದೇಶದಲ್ಲೇ ಮೊದಲು ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದವರ ಎರಡು ಕ್ಲಿನಿಕಲ್ ಛಾಯಾಚಿತ್ರಗಳನ್ನು ತೀರ್ಪಿನ ಒಂಬತ್ತನೇ ಪುಟದಲ್ಲಿ ಮುದ್ರಿಸಲು ಅವಕಾಶ ಕಲ್ಪಿಸಲಾಗಿದೆ. ದೇಶದ ಹೈಕೋರ್ಟ್ ತೀರ್ಪುಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನವನ್ನು ಮಾಡಲಾಗಿದೆ.
19ನೇ ವಿಧಿ:
- 19ನೇ ವಿಧಿ 6 ವಿಧದ ಸ್ವತಂತ್ರವನ್ನು ಒದಗಿಸುತ್ತದೆ, (19ನೇ ವಿಧಿಯನ್ನು ಸಂವಿಧಾನದ ಬೆನ್ನೆಲುಬು ಎಂದು ಕರೆಯುತ್ತಾರೆ, )
- ವಾಕ್‍ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ.
- ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ.
- ಸಂಘಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ.
- ದೇಶದ ಎಲ್ಲೆಡೆ ನಿರ್ಬಂಧವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ.
- ಭಾರತದ ಯಾವುದೇ ಭಾಗದಲ್ಲಾದರೂ ವಾಸಿಸುವ ಸ್ವಾತಂತ್ರ್ಯ.
-
ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ, ವ್ಯವಹಾರ ಮಾಡುವ ಸ್ವಾತಂತ್ರ್ಯ.