Published on: April 6, 2023
ಅಂಕೋಲಾದ ಕರಿ ಇಷಾಡ ಮಾವಿನ ಹಣ್ಣು
ಅಂಕೋಲಾದ ಕರಿ ಇಷಾಡ ಮಾವಿನ ಹಣ್ಣು
ಸುದ್ದಿಯಲ್ಲಿ ಏಕಿದೆ? ಅಂಕೋಲಾದ ಕರಿ ಇಷಾಡ ಮಾವಿನ ಹಣ್ಣಿಗೆ ಭೌಗೋಳಿಕ ಗುರುತು (ಜಿ.ಐ ಟ್ಯಾಗ್) ದೊರೆತಿದ್ದು ಶಿರಸಿ ಸುಪಾರಿ ಬಳಿಕ ಈ ಗುರುತು ಪಡೆದ ಜಿಲ್ಲೆಯ ಎರಡನೆ ಬೆಳೆಯಾಗಿದೆ.
ಮುಖ್ಯಾಂಶಗಳು
- ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ ಸಂಸ್ಥೆ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಕರಿ ಇಷಾಡ ಮಾವಿನ ಹಣ್ಣನ್ನು ಜಿ.ಐ ಟ್ಯಾಗ್‍ಗೆ ಪರಿಗಣಿಸಿರುವ ಮಾಹಿತಿ ಪ್ರಕಟಿಸಿದೆ.
- 2032ರ ಮಾರ್ಚ್‍ವರೆಗೆ ಜಿ.ಐ ಟ್ಯಾಗ್‍ಗೆ ಪರಿಗಣಿಸುವುದಾಗಿ ಸಂಸ್ಥೆ ತಿಳಿಸಿದೆ.
ಕರಿ ಇಷಾಡ ಮಾವಿನ ಹಣ್ಣು
- ಅಪರೂಪದ ಮಾವು ಎನ್ನಲಾದ ಈ ಕರಿ ಇಷಾಡ ಮಾವನ್ನ ಕೇವಲ ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ ಹಾಗೂ ಕುಮಟಾದ ಕೆಲ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ.
- ಅದ್ರಲ್ಲೂ ಅಂಕೋಲಾ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನ ಬೆಳೆಯುತ್ತಾರೆ.
- ನೈಸರ್ಗಿಕವಾಗಿ ಬೆಳೆದ ಕರಿ ಇಷಾಡ ಮಾವನ್ನ ಹಣ್ಣಾಗಿ ಮಾಡಲು ಯಾವುದೇ ಕೆಮಿಕಲ್ ಬಳಸದೇ ಹುಲ್ಲಿನಲ್ಲಿ ಕಾಯಿಯನ್ನ ಇಟ್ಟು ಹಣ್ಣು ಮಾಡಿ ತಂದು ಮಾರಾಟ ಮಾಡುವುದು ಇದರ ವಿಶೇಷ.
- ಅಂಕೋಲಾ ತಾಲ್ಲೂಕಿನಲ್ಲಿ ಸುಮಾರು 80 ಹೆಕ್ಟೇರ್ ಪ್ರದೇಶದಲ್ಲಿ ಈ ತಳಿಯ ಮಾವಿನ ಹಣ್ಣು ಬೆಳೆಯಲಾಗುತ್ತಿದೆ. ಬೇರೆಲ್ಲೂ ಸಿಗದ ಕರಿ ಇಷಾಡಕ್ಕೆ ಭಾರಿ ಬೇಡಿಕೆಯೂ ಇದೆ.
ಜಿಐ ಟ್ಯಾಗ್
- ಜಿಐ ಟ್ಯಾಗ್ ಎಂದರೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್. ಅಂದರೆ ಭೌಗೋಳಿಕ ಸೂಚನಾ ಟ್ಯಾಗ್.
- ಒಂದು ಉತ್ಪನ್ನದ ಭೌಗೋಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿಐ ಟ್ಯಾಗ್ ನೀಡಲಾಗುತ್ತದೆ. ಒಂದು ಉತ್ಪನ್ನದ ಮೂಲ ಯಾವ ಪ್ರದೇಶದ್ದು ಎಂಬುದನ್ನು ಅದು ತಿಳಿಸುತ್ತದೆ.
- ಹೀಗೆ ಒಂದು ಉತ್ಪನ್ನದ ಮೂಲ ಉಗಮ ಸ್ಥಾನವನ್ನು ಜಿಐ ಟ್ಯಾಗ್ ಸೂಚಿಸುತ್ತದೆ. ಭಾರತದಲ್ಲಿ ಇಂಥ 400ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಅತಿ ಹೆಚ್ಚು ಜಿಐ ಟ್ಯಾಗ್ ಹೊಂದಿರುವುದು ವಿಶೇಷ.
- ಭಾರತದಲ್ಲಿ GI ಟ್ಯಾಗ್‌ಗಳನ್ನು ಯಾರು ನೀಡುತ್ತಾರೆ? GI ಟ್ಯಾಗ್‌ಗಳನ್ನು ಸರಕುಗಳ ಭೌಗೋಳಿಕ ಸೂಚನೆಗಳ (ನೋಂದಣಿ ಮತ್ತು ರಕ್ಷಣೆ) ಕಾಯಿದೆ, 1999 ರ ಪ್ರಕಾರ ನೀಡಲಾಗುತ್ತದೆ. ಈ ಟ್ಯಾಗ್ ಅನ್ನು ಕೈಗಾರಿಕಾ ಪ್ರಚಾರ ಮತ್ತು ಆಂತರಿಕ ವ್ಯಾಪಾರ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಭೌಗೋಳಿಕ ಸೂಚಕ ರಿಜಿಸ್ಟ್ರಿ ನೀಡುತ್ತದೆ. ಭಾರತದಲ್ಲಿ 2003 ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ.
ಜಿಐ ಟ್ಯಾಗ್ ಅಸ್ತಿತ್ವ
- ವಿಶ್ವ ವ್ಯಾಪಾರ ಸಂಸ್ಥೆ ಡಬ್ಲ್ಯೂಟಿಒ ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕುಗಳನ್ನು ಕಾಪಾಡಲು ಇಂಥದ್ದೊಂದು ವ್ಯವಸ್ತೆ ರೂಪಿಸಿದೆ.
- 1999ರಲ್ಲಿ ಸರಕುಗಳ ನೊಂದಣಿ ಮತ್ತು ರಕ್ಷಣೆಗೆ ಭೌಗೋಳಿಕ ಸೂಚನೆಗಳ ಕಾಯ್ದೆಯನ್ನು (Geographical Indications of Goods -Registration and Protection- Act, 1999) ರೂಪಿಸಲಾಗಿದೆ.
ಯಾವ ಉತ್ಪನ್ನಗಳಿಗೆ ಜಿಐ ಟ್ಯಾಗ್?
- ಕೃಷಿ, ಕರಕುಶಲ, ಆಹಾರವಸ್ತು, ಔದ್ಯಮಿಕ ಉತ್ಪನ್ನ, ಮದ್ಯ ಉತ್ಪನ್ನಗಳಿಗೆ ಜಿಐ ಟ್ಯಾಗ್ ಕೊಡಲಾಗುತ್ತದೆ. ಒಂದು ಉತ್ಪನ್ನದ ಹಕ್ಕು ಮತ್ತು ಪೇಟೆಂಟ್ ಅನ್ನು ರಕ್ಷಿಸಲು ಈ ಟ್ಯಾಗ್ ಸಹಾಯವಾಗುತ್ತದೆ.
ನಿಮಗಿದು ತಿಳಿದಿರಲಿ
- ಕರ್ನಾಟಕವು ಅತಿ ಹೆಚ್ಚು ಜಿಐ ಟ್ಯಾಗ್ (ಸುಮಾರು 46 ಉತ್ಪನ್ನಗಳು) ಉತ್ಪನ್ನಗಳನ್ನು ಹೊಂದಿರುವ ರಾಜ್ಯವಾಗಿದೆ.
- ದಾರ್ಜಿಲಿಂಗ್ ಟೀ ಭಾರತದಲ್ಲಿ ಜಿಐ ಟ್ಯಾಗ್ ಪಡೆದ ಮೊದಲ ಉತ್ಪನ್ನ.
- 400ಕ್ಕೂ ಹೆಚ್ಚು ಉತ್ಪನ್ನಗಳಿಗೆ ಭಾರತದಲ್ಲಿ ಜಿಐ ಟ್ಯಾಗ್ ಕೊಡಲಾಗಿದೆ.