Published on: September 27, 2022
ಅಂಚೆ ‘ಮಕ್ಕಳ ಹುಂಡಿ’
ಅಂಚೆ ‘ಮಕ್ಕಳ ಹುಂಡಿ’

ಸುದ್ದಿಯಲ್ಲಿ ಏಕಿದೆ?
ಶಾಲಾ ಮಕ್ಕಳಲ್ಲಿ ಉಳಿತಾಯದ ಮನೋಭಾವ ಜಾಗೃತಗೊಳಿಸಲು ಮುಂದಾಗಿರುವ ಭಾರತೀಯ ಅಂಚೆ ಇಲಾಖೆ ಮೊದಲ ಹಂತದಲ್ಲಿ ಬೆಂಗಳೂರು ನಗರದ ಆಯ್ದ 10 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಮುಖ್ಯಾಂಶಗಳು
- 10 ವರ್ಷದ ಒಳಗಿನ ಶಾಲಾ ಮಕ್ಕಳು ತಮ್ಮದೇ ಖಾತೆ ತೆರೆದು ಪೋಷಕರು ನೀಡುವ ಹಣವನ್ನು ಖಾತೆಗೆ ಜಮೆ ಮಾಡಬಹುದು.
- ಮಕ್ಕಳೇ ಪೋಷಕರ ಮೊಬೈಲ್ನಿಂದ ಹಣ ಜಮೆ ಮಾಡಿಸಬಹುದು.
- ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅಗತ್ಯವಿದ್ದಾಗ ಆನ್ಲೈನ್ ಮೂಲಕ ಖರ್ಚು ಮಾಡಬಹುದು. 18 ವರ್ಷಗಳ ನಂತರ ಸ್ವತಂತ್ರವಾಗಿ ತಮ್ಮ ಖಾತೆಯನ್ನು ನಿರ್ವಹಣೆ ಮಾಡಬಹುದು.
- ಮೊದಲು ಬೆಂಗಳೂರು ನಗರದಿಂದ ಆರಂಭಿಸಿ, ನಂತರ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.
ಉದ್ದೇಶ
- ಈಗ ಶಾಲಾ ಮಕ್ಕಳಿಗೂ ಖಾತೆ ತೆರೆದು ಬಾಲ್ಯದಿಂದಲೇ ಉಳಿತಾಯ ಮಾಡುವುದನ್ನು ರೂಢಿಸಲು, ಉಳಿತಾಯದಿಂದ ಭವಿಷ್ಯದಲ್ಲಿ ಸಿಗುವ ಪ್ರಯೋಜನ ಕುರಿತು ಮಾಹಿತಿ ನೀಡಲು ಮುಂದಾಗಿದೆ, ಶಾಲಾ ಹಂತದಲ್ಲೇ ಮಕ್ಕಳಿಗೆ ಉಳಿತಾಯದ ಮನೋಭಾವ ಬೆಳೆಸಿದರೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ದೊರೆಯಲಿದೆ.
ಅಂಚೆ ಕಛೇರಿಯ ಕಾರ್ಯಗಳು
- ವಿಶ್ವದ ಅತಿದೊಡ್ಡ ಆರ್ಥಿಕ ಸೇವಾ ಜಾಲವನ್ನು ಹೊಂದಿರುವ ಅಂಚೆ ಇಲಾಖೆ ಭಾರತೀಯ ಅಂಚೆ ಇಲಾಖೆ ತನ್ನ ಎಲ್ಲ ಅಂಚೆ ಕಚೇರಿಗಳನ್ನೂ ಕೋರ್ ಬ್ಯಾಂಕಿಂಗ್ ಸರ್ವೀಸ್ (ಸಿಬಿಎಸ್) ಅಥವಾ ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳುವ ಅತ್ಯುನ್ನತ ಸಾಧನೆ ಮಾಡಿದೆ.
- ಸ್ವಾತಂತ್ರ್ಯದ ಅಮೃತ ಮಹೋತ್ಸವ ಸೇವೆ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಅಂಚೆ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ 100ಕ್ಕೂ ಹೆಚ್ಚು ವಿಶೇಷ ಕವರ್ ಬಿಡುಗಡೆ ಮಾಡಿದೆ.
- ರಾಣಿ ಅಬ್ಬಕ್ಕ, ಕಾರ್ನಾಡ್ ಸದಾಶಿವರಾವ್, ನೀಲಕಂಠಯ್ಯ, ಕಡಿದಾಳ್ ಮಂಜಪ್ಪ ಸೇರಿದಂತೆ ರಾಜ್ಯದ ಹಲವರನ್ನು ಸ್ಮರಿಸಲಾಗಿದೆ. ಹರ್ ಘರ್ ತಿರಂಗಾ ಅಂಗವಾಗಿ ರಾಜ್ಯದ ಅಂಚೆ ಕಚೇರಿಗಳು 10 ಲಕ್ಷ ಧ್ವಜ ಮಾರಾಟ ಮಾಡಿವೆ.
- ಆಧಾರ್ ಸೇವೆ : ಶಾಲಾ ಅಂಗಳದಲ್ಲೇ ಆಧಾರ್ ಅಂಚೆ ಇಲಾಖೆಯ ಸಿಬ್ಬಂದಿ ಶಾಲೆಗಳಿಗೇ ತೆರಳಿ ಆಧಾರ್ ಸೇವೆ ಒದಗಿಸುವ ಕೆಲಸವನ್ನು ಅಂಚೆ ಇಲಾಖೆ ಮಾಡುತ್ತಿದೆ. ಮಕ್ಕಳಿಗೆ ಆಧಾರ್ ಸಂಖ್ಯೆ ಕೊಡಿಸುವುದು, ಆಧಾರ್ಗಳಲ್ಲಿನ ಲೋಪಗಳನ್ನು ಸರಿಪಡಿಸುವುದು, ಮೊಬೈಲ್ ನಂಬರ್ ಜೋಡಣೆ ಮತ್ತಿತರ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ.
- ಸ್ತ್ರೀ ಸಬಲೀಕರಣ : ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ 2011–2016ರ ಅವಧಿಯಲ್ಲಿ ಮಹಿಳೆಯರು ಬ್ಯಾಂಕ್ ಖಾತೆ ತೆರೆಯುವ ಪ್ರಮಾಣ ಶೇ 9ರಷ್ಟು ಸ್ಥಗಿತಗೊಂಡಿತ್ತು. ಹೀಗಾಗಿ, ಮಹಿಳೆಯರು ತಮ್ಮ ಜೀವನ ನಿರ್ವಹಣೆಯ ಮೇಲೆ ಸ್ವಯಂ ನಿಯಂತ್ರಣ ಸಾಧಿಸಲು ಕಷ್ಟವಾಗುತ್ತಿತ್ತು. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅಂಚೆ ಇಲಾಖೆ ಖಾತೆಗಳನ್ನು ತೆರೆಯಲು ಮಹಿಳೆಯರನ್ನು ಪ್ರೋತ್ಸಾಹಿಸುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಿದೆ.
- ಸುಕನ್ಯಾ ಸಮೃದ್ಧಿ ಮೂಲಕ ಹೆಣ್ಣು ಮಕ್ಕಳಿಗೆ ಠೇವಣಿ ಯೋಜನೆ ಜಾರಿಗೆ ತಂದಿದೆ. ವರ್ಷಕ್ಕೆ ಗರಿಷ್ಠ ರೂ. 1.5 ಲಕ್ಷ ಠೇವಣಿ ಇಡಬಹುದು. ಅದಕ್ಕೆ ಶೇ 7.6 ಬಡ್ಡಿ ನೀಡಲಾಗುತ್ತಿದೆ.
- ಅಂಚೆಚೀಟಿ ಸಂಗ್ರಹದ ಹವ್ಯಾಸ: ಶಾಲಾ ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹದ ಹವ್ಯಾಸ ಮೂಡಿಸಲು ಇಲಾಖೆ ಶ್ರಮಿಸುತ್ತಿದೆ. ಪ್ರತಿ ಅಂಚೆ ಚೀಟಿಯೂ ಹೊಂದಿರುವ ಭಾಷೆ, ದೇಶ, ನಮೂದಿಸಿದ ಕಾಲಘಟ್ಟ, ಮೌಲ್ಯ, ಇತಿಹಾಸ, ಆ ಪ್ರದೇಶದ ಸಂಸ್ಕೃತಿ, ಕಲೆ, ರಾಜಕೀಯ, ವಿಶೇಷ ಘಟನಾವಳಿಗಳ ಅರಿವು ಮೂಡಿಸುತ್ತದೆ. ಹಾಗಾಗಿ, ಅಂಚೆಚೀಟಿ ಸಂಗ್ರಹ ಅಧ್ಯಯನ ಯೋಗ್ಯವೂ ಆಗಿದೆ.