Published on: March 8, 2023

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ


ಸುದ್ದಿಯಲ್ಲಿ ಏಕಿದೆ? ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 75 ಮಹಿಳಾ ಬೈಕರ್‌ಗಳ ತಂಡವು ದೆಹಲಿಯಿಂದ ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶದವರೆಗೆ 1,848 ಕಿಮೀ ಯಾತ್ರೆ ಕೈಗೊಳ್ಳಲಿದೆ.


ಮುಖ್ಯಾಂಶಗಳು

  • ಮಾರ್ಚ್ 9ರಂದು ಈ ತಂಡವು ದೆಹಲಿಯ ಇಂಡಿಯಾ ಗೇಟ್‌ನಿಂದ ಹೊರಟು ಮಾರ್ಚ್ 25ರಂದು ಛತ್ತೀಸ್‌ಗಢದ ದಕ್ಷಿಣ ಬಸ್ತಾರ್ ಪ್ರದೇಶದ ಜಗದಲ್‌ಪುರದಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿದೆ.
  • ‘ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವಾಗ ಮಹಿಳಾ ಶಕ್ತಿ’ ಎಂಬ ಸಂದೇಶವನ್ನು ತಂಡ ಹೊತ್ತು ಸಾಗಲಿದೆ.
  • ಸಿಆರ್‌ಪಿಎಫ್ ತನ್ನ 84ನೇ ರೈಸಿಂಗ್ ಡೇ ಆಚರಣೆಯನ್ನು ಮಾರ್ಚ್ 25ರಂದು ಜಗದಲ್‌ಪುರದಲ್ಲಿ ನಡೆಸಲು ನಿರ್ಧರಿಸಿದೆ.

ಮಾರ್ಚ್ 8 ಮಹಿಳಾ ದಿನಾಚರಣೆ

  • ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ವರ್ಷಕ್ಕೊಮ್ಮೆ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
  • ಉದ್ದೇಶ : ಈ ದಿನವು ಮಹಿಳೆಯರ ಸಾಧನೆಗಳನ್ನು ಎತ್ತಿ ತೋರಿಸಲು ಮತ್ತು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

2023ರ ಮಹಿಳಾ ದಿನದ ಥೀಮ್

  • ಯುಎನ್ ಥೀಮ್: “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ”.
  • ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂಬರುವ 67 ನೇ ಅಧಿವೇಶನದ ಆದ್ಯತೆಯ ಥೀಮ್‌ನೊಂದಿಗೆ ಈ ಥೀಮ್ ಅನ್ನು ಹೊಂದಿಸಲಾಗಿದೆ. “ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣ” ಎನ್ನುವುದಾಗಿದೆ.

ಈ ದಿನದ ಘೋಷಣೆ

  • ವಿಶ್ವಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. 1977 ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಲಾಯಿತು.

ಇತಿಹಾಸ

  • 1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆಯಿತು. ದುಡಿಯುವ ಮಹಿಳೆಯರು ಅವರ ಹಕ್ಕಿನ ಪರವಾಗಿ ಧ್ವನಿಯೆತ್ತಿದ್ದರು ಸುಮಾರು 15,000 ಮಹಿಳೆಯರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಿ ವೇತನದ ಶ್ರೇಣಿಯನ್ನು ಹೆಚ್ಚಿಸಬೇಕು. ಮಹಿಳೆಯರಿಗೂ ಮತದಾನದ ಹಕ್ಕು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ನಂತರ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ 1909 ರಲ್ಲಿ ಫೆ.28 ರಂದು ಮಹಿಳಾ ದಿನವನ್ನು ಘೋಷಿಸಿತು.
  • 1917 ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಮಹಿಳೆಯರು ಆಹಾರಕ್ಕಾಗಿ ಮುಷ್ಕರ ನಡೆಸಿದ್ದರು. ಅದಾಗಿ ಕೆಲವು ದಿನಗಳ ನಂತರ ಚಕ್ರವರ್ತಿ ನಿಕೋಲಸ್ ರಾಜೀನಾಮೆ ನೀಡಿದರು. ಈ ವೇಳೆ ಮಹಿಳೆಯರು ಮತದಾನದ ಹಕ್ಕನ್ನು ಪಡೆದರು. ಇದರ ಹಿನ್ನಲೆಯಲ್ಲಿ ಯುರೋಪ್‌ನಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8 ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಿದರು. ಇದೇ ಕಾರಣಕ್ಕಾಗಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಪ್ರಾರಂಭಿಸಲಾಯಿತು. ಇದರಿಂದ ಯುರೋಪ್‌ನಲ್ಲಿ ಮಹಿಳಾ ದಿನಾಚರಣೆ ಒಂದು ಮಹತ್ವದ ದಿನವಾಗಿದೆ.