Published on: July 29, 2021

ಅಂತಾರಾಷ್ಟ್ರೀಯ ಹುಲಿ ದಿನ

ಅಂತಾರಾಷ್ಟ್ರೀಯ ಹುಲಿ ದಿನ

ಸುದ್ಧಿಯಲ್ಲಿ ಏಕಿದೆ ? ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಹುಲಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜುಲೈ 29 ಅನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ.

  • ಘೋಷವಾಕ್ಯ: ಈ ವರ್ಷ ‘ಹುಲಿಗಳ ಉಳಿವು ನಮ್ಮ ಕೈಯಲ್ಲಿದೆ’ ಎನ್ನುವ ಘೋಷವಾಕ್ಯದೊಂದಿಗೆ ಅಂತರರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ.

ಕರ್ನಾಟಕದ ಹುಲಿ ಸಂರಕ್ಷಿತ 5 ಪ್ರದೇಶ!

  • ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ ಹಾಗೂ ಕಾಳಿ .

ಏನಿದು ಹುಲಿ ದಿನ?

  • ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್‌ ಪೀಟರ್‌ ಬರ್ಗ್‌ನಲ್ಲಿಆಚರಿಸಲಾಯಿತು. ಈ ದಿನದಂದು ಹುಲಿ ಸಂರಕ್ಷಣೆ ಕುರಿತು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನದ ಮೂಲಕ ಹುಲಿ ಬೇಟೆ, ಹುಲಿಗಳ ರಕ್ಷಣೆಯ ಕುರಿತಾದ ಜಾಗೃತಿ ಕಾರ್ಯ ನಡೆಯುತ್ತದೆ. ಇಂದಿನ ದಿನಗಳಲ್ಲಿಹುಲಿಗಳ ಬಗ್ಗೆ ಜನರಲ್ಲಿಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ!

  • 2018ರ ಹುಲಿ ಗಣತಿ ಪ್ರಕಾರ ದೇಶದಲ್ಲಿ 2967 ಹುಲಿಗಳು ಇರುವುದಾಗಿ ತಿಳಿದು ಬಂದಿದೆ. ಆ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ
  • ಭಾರತ ಗುರುತಿಸಿಕೊಂಡಿದೆ. ಈ ಬಾರಿ ಗಣತಿಗೆ 1400 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಲಾಗಿತ್ತು. ಪ್ರಪಂಚದ 13 ದೇಶಗಳ ಕಾಡುಗಳಲ್ಲಿಮಾತ್ರ ಹುಲಿಗಳು ಕಂಡು ಬರುತ್ತವೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು ಏಷ್ಯಾ ಖಂಡದಲ್ಲೇ ಇರುವುದು ಗಮನಾರ್ಹ. 2006ರಿಂದ ನಾಲ್ಕು ವರ್ಷಕ್ಕೊಮ್ಮೆ ವೈಜ್ಞಾನಿಕ ರೀತಿಯಲ್ಲಿ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತದೆ. 2006, 2010, 2014 ಹಾಗೂ 2018ರಲ್ಲಿ ಗಣತಿ ಆಗಿದೆ. ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ. 741 ಹುಲಿಗಳು ಹೆಚ್ಚಿವೆ.
  • 2018ರ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 524 ಹುಲಿಗಳಿದ್ದು, ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 442 ಹುಲಿಗಳಿದ್ದು ಮೂರನೇ ಸ್ಥಾನದಲ್ಲಿದೆ. 2014ರಲ್ಲಿ ರಾಜ್ಯದಲ್ಲಿ 406 ಹುಲಿಗಳಿದ್ದವು.

ಗಣತಿ ಹೇಗೆ ನಡೆಯುತ್ತದೆ?

  • ಹುಲಿ ಗಣತಿಯನ್ನು ನಾಲ್ಕು ವಿಧಾನದಲ್ಲಿ ನಡೆಸಲಾಗುತ್ತದೆ. ಮೊದಲ ಎರಡು ಹಂತದಲ್ಲಿ ಹುಲಿ ಇರುವಿಕೆಯ ಚಿಹ್ನೆ, ಸ್ಕ್ಯಾ‌ಟ್‌ ಮತ್ತು ಪಗ್‌ ಮಾರ್ಕ್ ಮೂಲಕ ಗುರುತಿಸಲಾಗುತ್ತದೆ. ಮೂರನೇ ಹಂತದಲ್ಲಿ ಜಿಐಎಸ್‌ ಅಪ್ಲಿಕೇಶನ್‌ನೊಂದಿಗೆ ಸಿದ್ಧಪಡಿಸಿದ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ ಎಣಿಸಲಾಗುತ್ತದೆ. ಕೊನೆ ಹಂತದ ಲ್ಲಿಕ್ಯಾಮೆರಾ ಹಾಕದ ಪ್ರದೇಶದಲ್ಲಿ ಸರ್ವೇ ಕಾರ‍್ಯ ನಡೆಸಿ ದತ್ತಾಂಶ ಕಲೆ ಹಾಕಲಾಗುತ್ತದೆ.

ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು?

  • ಅರಣ್ಯ ಇಲಾಖೆಯ ಜಾಗರೂಕತೆ ಹಾಗೂ ಸಂರಕ್ಷಣೆಯ ಪ್ರಯತ್ನಗಳು ಹುಲಿ ಸಂಖ್ಯೆ ಹೆಚ್ಚಾಗಲು ಒಂದು ಕಾರಣ. ಜತೆಗೆ ಕಳ್ಳ ಬೇಟೆ ಕಡಿಮೆ ಆಗಿದ್ದು, ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೆಚ್ಚು ಮಾಡಲಾಗಿದೆ. ನ್ಯಾಷನಲ್‌ ಟೈಗರ್‌ ಕನ್ಜರ್‌ವೇಷನ್‌ ಅಥಾರಿಟಿ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಸ್ಥಾಪನೆಯಾಗಿದ್ದು ಪ್ರಯೋಜನಕಾರಿಯಾಗಿದೆ.

ಹುಲಿ ಸಂರಕ್ಷಣೆಯಾದರೆ ಕಾಡು ಸಮೃದ್ಧ

  • ಹುಲಿ ಸಂರಕ್ಷಣೆಯಾದರೆ ಕಾಡು ಚೆನ್ನಾಗಿರುತ್ತದೆ. ಪ್ರಾಕೃತಿಕ ಸಮತೋಲನಕ್ಕೂ ಇದು ಸಹಕಾರಿ. ಒಂದು ಕಾಡಿನಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆಎಂದರೆ ಆ ಕಾಡು ಸಮೃದ್ಧವಾಗಿದೆ ಎಂದರ್ಥ ಎನ್ನುತ್ತಾರೆ ವನ್ಯಜೀವಿ ತಜ್ಞರು. ಹುಲಿ ಇರುವ ಜಾಗದಲ್ಲಿ ಪಕ್ಷಿ, ಕೀಟ, ಕಾಡು ಪ್ರಾಣಿಗಳು ಹೇರಳವಾಗಿರುತ್ತವೆ. ಬಯೋ ಸಿಸ್ಟಂ ಕೂಡ ಉತ್ತಮವಾಗಿರುತ್ತದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ!

  • ದೇಶದಲ್ಲಿ ಹುಲಿಗಳ ಸಂರಕ್ಷಣೆಗಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್‌ ಅಸ್ತಿತ್ವಕ್ಕೆ ಬಂತು. ನಂತರ ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಾಗಿ ಬದಲಾಗಿ ಹುಲಿಗಳ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಸ್ಪೆಷಲ್‌ ಟೈಗರ್‌ ಪ್ರೊಟೆಕ್ಷನ್‌ ಫೋರ್ಸ್‌ ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಜಾರಿಗೆ ತರಲಾಗಿದೆ.