Published on: October 25, 2022

ಅಡಿಕೆಗೆ ಎಲೆಚುಕ್ಕಿ ರೋಗ:

ಅಡಿಕೆಗೆ ಎಲೆಚುಕ್ಕಿ ರೋಗ:

ಸುದ್ದಿಯಲ್ಲಿ ಏಕಿದೆ?

ಕರ್ನಾಟಕದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆ ಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಲು ಏಳು ತಜ್ಞರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಕೃಷಿ ಸಚಿವಾಲಯ ರಚಿಸಿದೆ. 

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಎಲೆಚುಕ್ಕಿ ರೋಗದಿಂದಾಗಿ 20 ಸಾವಿರ ಹೆಕ್ಟೇರ್‌ನಷ್ಟು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಈ ರೋಗದ ಬಗ್ಗೆ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಕಳುಹಿಸಿಕೊಡಬೇಕು ಎಂದು ಕರ್ನಾಟಕದ ಅಡಿಕೆ ಬೆಳೆಗಾರರ ನಿಯೋಗವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
  • ‘ದೇಶದಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ವಹಿವಾಟು ₹5,400 ಕೋಟಿ ಆಗಿದೆ.
  • ಕರ್ನಾಟಕದಲ್ಲಿ ₹4,300 ಕೋಟಿ ಮೌಲ್ಯದ 9.5 ಲಕ್ಷ ಟನ್‌ ಅಡಿಕೆ ಬೆಳೆಯಲಾಗುತ್ತಿದೆ.ಅಡಿಕೆ ಬೆಳೆಯು 50 ಲಕ್ಷ ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ.
  • ಕಳೆದ ಕೆಲವು ವರ್ಷಗಳಿಂದ ಅಡಿಕೆಗೆ ಉತ್ತಮ ಬೆಲೆ ದೊರಕುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಈ ರೋಗದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಲೆ ಚುಕ್ಕೆ ರೋಗ ಲಕ್ಷಣಗಳು

  • ಎಲೆ ಚುಕ್ಕೆ ರೋಗ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತದೆ. ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಜೋತು ಬಿದ್ದು ಮರ ಶಕ್ತಿಕಳೆದುಕೊಂಡು ಇಳುವರಿ ಕುಂಠಿತವಾಗುತ್ತದೆ

ರೋಗಕ್ಕೆ ಕಾರಣ;

  • ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂದ್ರಗಳಿಂದ ಉಂಟಾಗುತ್ತದೆ. ಶಿಲೀಂದ್ರವು ಬಿದ್ದ ಗರಿಗಳಲ್ಲಿ ವಾಸಿಸುತ್ತದೆ. ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ.
  • ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (180 ರಿಂದ 240 ಸೆ) ಮತ್ತು ಹೆಚ್ಚಿನ ಆದ್ರತೆ (80 ರಿಂದ 90%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿವೆ. ಈ ರೋಗ ವರ್ಷ ಪೂರ್ತಿ ಕಂಡುಬಂದರೂ ಮಾರ್ಚ್‌ನಿಂದ ಸೆಪ್ಟಂಬರ್ ತಿಂಗಳ ತನಕ ಹೆಚ್ಚಾಗಿ ಬಾಧೆ ಉಂಟುಮಾಡುತ್ತದೆ.

ರೋಗ ನಿರ್ವಹಣೆ ಹೇಗೆ?

  • ಎಲೆ ಚುಕ್ಕೆ ರೋಗ ಬಾಧಿತ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.
  • ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
  • ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತವಾಗಿ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ (2.5 ಗ್ರಾಂ) ಅಥವಾ ಸಾಫ್ (ಮ್ಯಾಂಕೋಜೆಂಬ್ 63%+ ಕಾರ್ಬೆನ್‍ಡೈಜೀಮ್ 12%) 2 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
  • ಹೆಕ್ಸಕೊನಜೋಲ್ ಶೇ 5 ಎಸ್. ಸಿ ಅಥವಾ ಪ್ರೊಪಿಕೊನಜೋಲ್ ಶೇ 25 ಇ. ಸಿ ಅಂತರವ್ಯಾಪಿ ಶಿಲೀಂಧ್ರನಾಶಕಗಳನ್ನು 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಅಂಟು ದ್ರಾವಣದ (1 ಮಿ.ಲೀ) ಜೊತೆಗೆ ಸಿಂಪಡಿಸಬೇಕು