Published on: September 1, 2021
ಅಣೆಕಟ್ಟೆಗಳ ಅಭಿವೃದ್ಧಿ
ಅಣೆಕಟ್ಟೆಗಳ ಅಭಿವೃದ್ಧಿ
ಸುದ್ಧಿಯಲ್ಲಿ ಏಕಿದೆ? ರಾಜ್ಯದ 58 ಅಣೆಕಟ್ಟೆಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಗೆ (ಡಿಆರ್‌ಐಪಿ) ವಿಶ್ವಬ್ಯಾಂಕ್ 2 ಮತ್ತು 3ನೇ ಹಂತದಲ್ಲಿ 1,500 ಕೋಟಿ ರೂ. ಸಾಲದ ನೆರವು ನೀಡಿದೆ.
ಹಿನ್ನಲೆ
- ಮೊದಲನೇ ಹಂತದಲ್ಲಿ ಬಾಕಿ ಇದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುವುದೂ ಸೇರಿದಂತೆ ಅಣೆಕಟ್ಟೆಗಳ ಭೌತಿಕ ಅಭಿವೃದ್ಧಿಗೆ ಹಣಕಾಸಿನ ನೆರವು ಕೋರಿ ನೀರಾವರಿ ನಿಗಮಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಬಜೆಟ್‌ನಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರಕಾರವು ವಿಶ್ವಬ್ಯಾಂಕ್‌ಗೆ ಡಿಆರ್‌ಐಪಿ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿತ್ತು.
ಯೋಜನೆಯ ಉದ್ದೇಶ
- ನೀರಿನ ಸಮರ್ಪಕ ಸಂಗ್ರಹ ಮತ್ತು ಬಳಕೆ ಜತೆಗೆ ಬಾಳಿಕೆಯನ್ನು ಉತ್ಕೃಷ್ಟಗೊಳಿಸುವುದು ಯೋಜನೆಯ ಉದ್ದೇಶ. ಕೇಂದ್ರ ಸರಕಾರ ಶೇ.70 ಮತ್ತು ರಾಜ್ಯ ಸರಕಾರ ಶೇ.30ರಷ್ಟು ಸಾಲದ ನೆರವನ್ನು ವಂತಿಕೆ ರೂಪದಲ್ಲಿ ಮರುಪಾವತಿಸಲಿವೆ.
ಅನುಮತಿ ಪಡೆದ ಯೋಜನೆಗಳು
- ಕೆಆರ್‌ಎಸ್ ಡ್ಯಾಂಗೆ ಹೊಸ ಗೇಟ್: ಕೆಆರ್‌ಎಸ್ ಗೇಟ್‌ಗಳನ್ನು ಬದಲಿಸಿ ಮತ್ತು ಪ್ರತಿಯೊಂದು ಗೇಟ್‌ಗಳಿಂದ ನೀರಿನ ಹೊರ ಹರಿವಿನ ದತ್ತಾಂಶ ಸಂಗ್ರಹಣೆಗೆ ಹೈಡ್ರೋ ಮೆಕ್ಯಾನಿಸಮ್ ಅಳವಡಿಸಲು ಯೋಜಿಸಲಾಗಿದೆ.
- ತುಂಗಭದ್ರ: ಪ್ರಸ್ತಾವನೆ ಸಲ್ಲಿಸಿದ್ದ 104 ಕೋಟಿಯಲ್ಲಿ 39 ಕೋಟಿ ರೂ.ಗೆ ಅನುಮತಿ ದೊರೆತಿದೆ. ಡ್ಯಾಂ ಕೆಳಗಿನಿಂದ ಮೇಲ್ಭಾದವರೆಗೆ ಎಂ60 ಉತ್ಕೃಷ್ಟದ ಕಾಂಕ್ರಿಟ್ ಗೋಡೆ ಅಳವಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ಕೈಗೆತ್ತಿಕೊಳ್ಳಲಾಗಿದೆ. ಗ್ರಿಡ್ ವಾಲ್ ಮತ್ತು ಎಲೆಕ್ಟ್ರಿಕ್ ಕೆಲಸಗಳನ್ನು ನಡೆಸಲಾಗುತ್ತದೆ.
- ಆಲಮಟ್ಟಿ: ಹೈಡ್ರೋ ಮೆಕ್ಯಾನಿಸಮ್ ಹೊಂದಿರುವ ರಾಜ್ಯದ ಏಕಮಾತ್ರ ಜಲಾಶಯ ಇದು. ಹೈಡ್ರೋ ಮೆಕ್ಯಾನಿಸಮ್ ಉನ್ನತೀಕರಣ ಸೇರಿದಂತೆ ಇತರ ಕೆಲಸಗಳಿಗೆ 170 ಕೋಟಿ ರೂ. ನೀಡಲಾಗಿದೆ.
- ಉದ್ಯಾನವನ ನಿರ್ಮಾಣ: ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಆರು ಅಣೆಕಟ್ಟೆಗಳಲ್ಲಿ ಉದ್ಯಾನವನ ನಿರ್ಮಿಸಲಾಗುವುದು. ರಾಮನಹಳ್ಳಿ, ಜಂಬದಹಳ್ಳ, ಕರಿಮುದ್ದೇನಹಳ್ಳಿ, ಕನಕನಾಲಾ ಡ್ಯಾಂ ಹಾಗು ಚಿಕ್ಲಿಹೊಳೆ ಜಲಾಶಯಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಉತ್ಕೃಷ್ಟ ಶೈಲಿಯ ಉದ್ಯಾನವನ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಅಣೆಕಟ್ಟು ಪುನರುಜ್ಜೀವನ ಮತ್ತು ಅಭಿವೃದ್ಧಿ ಯೋಜನೆ
- ಇದನ್ನು 2012 ರಲ್ಲಿ ಆರಂಭಿಸಲಾಯಿತು ಮತ್ತು 2018 ರಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು.
- ಸೆಪ್ಟೆಂಬರ್ 2018 ರಲ್ಲಿ, ಸರ್ಕಾರವು ಅದರ ಪರಿಷ್ಕೃತ ವೆಚ್ಚದ ಅಂದಾಜುಗಳನ್ನು ಪೂರ್ಣಗೊಳಿಸಲು 2018 ರಿಂದ 2020 ರವರೆಗೆ ಎರಡು ವರ್ಷಗಳ ಅವಧಿಯ ವಿಸ್ತರಣೆಯನ್ನು ಅನುಮೋದಿಸಿತು.
- ಅದರ ಸಾಮಾನ್ಯ ಉದ್ದೇಶಗಳ ಹೊರತಾಗಿ, ಇದು ಅಣೆಕಟ್ಟು ವೈಫಲ್ಯ ಅಥವಾ ಕಾರ್ಯಾಚರಣೆಯ ವೈಫಲ್ಯದ ಸಂದರ್ಭದಲ್ಲಿ ಪರಿಣಾಮ ಬೀರುವ ಕೆಳಭಾಗದ ಜನಸಂಖ್ಯೆ ಮತ್ತು ಆಸ್ತಿಯ ಸುರಕ್ಷತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
- ಇದನ್ನು ಆರಂಭದಲ್ಲಿ ಭಾರತದ ಏಳು ರಾಜ್ಯಗಳಾದ ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಉತ್ತರಾಖಂಡಗಳಾದ್ಯಂತ ಅಣೆಕಟ್ಟು ಯೋಜನೆಗಳ ದುರಸ್ತಿ ಮತ್ತು ಪುನರುಜ್ಜೀವನ ತೆಗೆದುಕೊಳ್ಳಲಾಯಿತು.