Published on: September 8, 2021
ಅನ್ಯಗ್ರಹಕ್ಕೆ ಸೂಕ್ಷ್ಮ ಜೀವಿ ಒಯ್ಯುವ ‘ಚಿಪ್:
ಅನ್ಯಗ್ರಹಕ್ಕೆ ಸೂಕ್ಷ್ಮ ಜೀವಿ ಒಯ್ಯುವ ‘ಚಿಪ್:
ಸುದ್ಧಿಯಲ್ಲಿ ಏಕಿದೆ? ಭೂಮಿಯಿಂದ ಲಕ್ಷಾಂತರ ಕಿ.ಮೀ ದೂರದಲ್ಲಿರುವ ಮಂಗಳಗ್ರಹಕ್ಕೆ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳನ್ನು ಒಯ್ದು ಅಲ್ಲಿ ಅವುಗಳನ್ನು ಬಿಟ್ಟು ಅಧ್ಯಯನ ಮಾಡಲು ಸಾಧ್ಯವಾಗುವ ‘ಲ್ಯಾಬ್ ಆನ್ ಚಿಪ್’ ಎಂಬ ಪುಟ್ಟ ಉಪಕರಣವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಿದ್ಧಪಡಿಸಿದೆ.
- ಇಸ್ರೊ ಕೈಗೊಳ್ಳಲಿರುವ ಎರಡನೇ ಮಂಗಳಯಾನದಲ್ಲಿ ಈ ರೀತಿಯ ಸೂಕ್ಷ್ಮಜೀವಿಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.
ಬ್ಯಾಕ್ಟೀರಿಯಗಳ ಬೆಳವಣಿಗೆ
- ಬಾಹ್ಯಾಕಾಶ ಯಾನದ ವೇಳೆ ನೌಕೆಯಲ್ಲೇ ಬ್ಯಾಕ್ಟೀರಿಯಾಗಳನ್ನು ‘ಲ್ಯಾಬ್ ಆನ್ ಚಿಪ್’ನಲ್ಲಿ ಬೆಳೆಸಲಾಗುತ್ತದೆ. ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಭೂಮಿಯಿಂದಲೇ ನಿಯಂತ್ರಿಸಲಾಗುತ್ತದೆ.
- ಬ್ಯಾಕ್ಟೀರಿಯಾಗಳನ್ನು ಬೆಳೆಸಲು ಬೆಚ್ಚಗಿನ ವಾತಾವರಣ ಇರಬೇಕಾಗುತ್ತದೆ. ಬಾಹ್ಯಾಕಾಶ ಯಾನದಲ್ಲಿ ಪುಟ್ಟ ಗಾತ್ರದ ಲ್ಯಾಬ್ ಆನ್ ಚಿಪ್ ಈ ಅಗತ್ಯವನ್ನು ಪೂರೈಸಬಲ್ಲದು.
ಲ್ಯಾಬ್ ಆನ್ ಚಿಪ್ ಬಗ್ಗೆ
- ಈ ಉಪಕರಣದಲ್ಲಿ (ಲ್ಯಾಬ್ ಆನ್ ಚಿಪ್) ಒಮ್ಮೆಗೇ 12 ವಿಭಿನ್ನ ರೀತಿಯ ಬ್ಯಾಕ್ಟೀರಿಯಾಗಳನ್ನು ಬೆಳೆಸಬಹುದಾಗಿದೆ. ಇದಕ್ಕೆ ಒಂದು ವಾಟ್ ವಿದ್ಯುತ್ ಸಾಕಾಗುತ್ತದೆ.
- ಪುಟ್ಟ, ಪುಟ್ಟ ಕೆಲವೇ ಮಿಲಿ ಮೀಟರ್ ಅಗಲದ ಪ್ಲಾಸ್ಟಿಕ್ ಕೋಣೆಗಳನ್ನು ಲ್ಯಾಬ್ ಆನ್ ಚಿಪ್ ಒಳಗೊಂಡಿರುತ್ತದೆ. ಇದರ ತಳದಲ್ಲಿ ಎಲ್ಇಡಿ ದೀಪವನ್ನೂ, ಮೇಲ್ಭಾಗದಲ್ಲಿ ಬೆಳಕು ತಗುಲಿದಾಗ ಅದರ ಪ್ರಖರತೆಗೆ ತಕ್ಕಂತೆ ವಿದ್ಯುತ್ ಉತ್ಪಾದಿಸಬಲ್ಲ ಫೋಟೋಡಯೋಡ್ ಸಂವೇದಕವನ್ನೂ ಜೋಡಿಸಲಾಗಿದೆ.
- ಇವೆರಡರ ನಡುವೆ ಇರುವ ಕೋಣೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಬೇಕಾದ ಸಕ್ಕರೆ ದ್ರಾವಣವನ್ನು ಇಡಬಹುದು. ಈ ದ್ರಾವಣಕ್ಕೆ ಬೇಕಾದ ಬ್ಯಾಕ್ಟೀರಿಯಾಗಳನ್ನು ಸೇರಿಸುವ ವ್ಯವಸ್ಥೆಯೂ ಇದೆ.
- ಬ್ಯಾಕ್ಟೀರಿಯಾಗಳು ಬೆಳೆದಂತೆ ಎಲ್ಇಡಿ ದೀಪದಿಂದ ಹರಿಯುವ ಬೆಳಕಿನ ಪ್ರಖರತೆ ಕುಂದುತ್ತದೆ. ಇದನ್ನು ವಿಶ್ಲೇಷಿಸುವ ಮೂಲಕ ಅವುಗಳ ಬೆಳವಣಿಗೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಹೀಗೆ ದೂರನಿಯಂತ್ರಕದಿಂದಲೇ ಬೇಕೆಂದ ಬ್ಯಾಕ್ಟೀರಿಯಾವನ್ನು ಅಗತ್ಯ ಪೋಷಕಾಂಶಗಳನ್ನು ನೀಡಿ ಬೆಳೆಸಿ, ಪರೀಕ್ಷಿಸುವ ವ್ಯವಸ್ಥೆ ಈ ಸಾಧನದಲ್ಲಿದೆ.
- ಕೋಣೆಗಳಲ್ಲಿಟ್ಟ ಬ್ಯಾಕ್ಟೀರಿಯಾ ಸೋರದಂತೆ ಭದ್ರವಾಗಿಯೂ, ಎಲ್ಇಡಿ ದೀಪದ ಪ್ರಮಖರತೆಯಿಂದಾಗಿ ಹೆಚ್ಚು ಬಿಸಿಯಾಗದಂತೆಯೂ, ಇದರಿಂದಾಗಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಲಾಗಿದೆ. ಈ ಸಾಧನದಲ್ಲಿ ಸ್ಪೋರೋಸಾರ್ಸಿನಾ ಪ್ಯಾಶ್ಚುರೈ ಎನ್ನುವ ಬ್ಯಾಕ್ಟೀರಿಯಾ ಬೆಳೆಸಿ ಪರೀಕ್ಷಿಸಿ ನೋಡಲಾಗಿದೆ.
- ವ್ಯೋಮದಲ್ಲಿರುವ ಒತ್ತಡಗಳ ವ್ಯತ್ಯಾಸ, ವ್ಯೋಮನೌಕೆಯ ಅಲುಗಾಟ ಸಹಿಸಿಕೊಳ್ಳುವಂತೆ ಮಾಡಿದರೆ ಮುಂದಿನ ಮಂಗಳಯಾನ ಅಥವಾ ಇತರ ಬಾಹ್ಯಾಕಾಶ ಯಾನದಲ್ಲಿ ಈ ಜೀವಿಗಳ ಪರೀಕ್ಷೆ ನಡೆಸಬಹುದು. ಅಲ್ಲದೆ, ಬೇರೆ ಜಂತುಗಳನ್ನೂ ಬೆಳೆಸಲು ಸಹಾಯಕವಾಗುತ್ತದೆ.
- ‘ಲ್ಯಾಬ್ ಆನ್ ಚಿಪ್’ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಕೌಶಿಕ್ ವಿಶ್ವನಾಥನ್ ಮತ್ತು ಅಲೋಕ್ ಕುಮಾರ್ ಅಭಿವೃದ್ಧಿಪಡಿಸಿದ್ದಾರೆ.