Published on: October 1, 2021
ಅಮೃತ್ 2.0,ಸ್ವಚ್ಛ ಭಾರತ್ ಮಿಷನ್-ನಗರ 2.0ಗೆ ಚಾಲನೆ
ಅಮೃತ್ 2.0,ಸ್ವಚ್ಛ ಭಾರತ್ ಮಿಷನ್-ನಗರ 2.0ಗೆ ಚಾಲನೆ
ಸುದ್ಧಿಯಲ್ಲಿ ಏಕಿದೆ? ಸ್ವಚ್ಛ ಭಾರತ್ ಮಿಷನ್-ನಗರ 2.0 ಮತ್ತು ಅಮೃತ್ 2.0 ಯೋಜನೆಗೆ ಪ್ರಧಾನಿ ಅವರು ಚಾಲನೆ ನೀಡಿದರು .ದೇಶದಲ್ಲಿ ಪ್ರತಿದಿನ 1 ಲಕ್ಷ ಟನ್ ಕಸ ಉತ್ಪಾದನೆಯಾಗುತ್ತಿದ್ದು ಅದನ್ನು ನಿರ್ವಹಣೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಕಸಮುಕ್ತ ನಗರವಾಗಿರುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ಮತ್ತು ಸುರಕ್ಷತಾ ನಿರ್ವಹಣೆಗೆ ಒತ್ತು ನೀಡುವ ಮೂಲಕ ಕೊಳಚೆ ನೀರು ನದಿಗೆ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು
ಏನಿದು ಪ್ರಧಾನಿ ಮೋದಿ ಅವರ 2.0 ಯೋಜನೆಗಳು?
ʻಸ್ವಚ್ಛ ಭಾರತ ಯೋಜನೆ-ನಗರ 2.0ʼ (ಎಸ್ಬಿಎಂ-ಯು 2.0)
- ಈ ಯೋಜನೆಯು ಎಲ್ಲಾ ನಗರಗಳನ್ನು ‘ಕಸ ಮುಕ್ತ’ಗೊಳಿಸುವ ಮತ್ತು ʻಅಮೃತ್ʼ ವ್ಯಾಪ್ತಿಗೆ ಒಳಪಟ್ಟ ನಗರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ನಗರಗಳಲ್ಲಿ ತ್ಯಾಜ್ಯ ನೀರಿನ ಸೂಕ್ತ ನಿರ್ವಹಣೆಯ ಉದ್ದೇಶವನ್ನು ಹೊಂದಿದೆ. ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತವಾಗುವಂತೆ (ಒಡಿಎಫ್+) ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಸಂಸ್ಥೆಗಳು ಒಡಿಎಫ್++ ಆಗಿರುವಂತೆ ಖಾತರಿಪಡಿಸುತ್ತದೆ.
- ಆ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯದ ಗುರಿಯನ್ನು ಸಾಧಿಸುತ್ತದೆ. ಮೂಲದಲ್ಲೇ ಘನ ತ್ಯಾಜ್ಯದ ವಿಂಗಡಣೆ, ʻ3ಆರ್ʼ (ಕಡಿಮೆಮಾಡುವುದು, ಮರುಬಳಕೆ, ಸಂಸ್ಕರಣೆ), ಪುರಸಭೆಯ ಎಲ್ಲಾ ರೀತಿಯ ಘನ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಕಸ ಸುರಿಯುವ ಸ್ಥಳಗಳಲ್ಲಿ ಮಾಲಿನ್ಯಕಾರಕಗಳ ನಿವಾರಣೆಯತ್ತ ಈ ಯೋಜನೆಯು ಗಮನ ಹರಿಸಲಿದೆ.
ʻಅಮೃತ್ 2.0ʼ
- ʻಅಮೃತ್ 2.0ʼ ಯೋಜನೆಯು ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಸುಮಾರು 2.68 ಕೋಟಿ ನೀರಿನ ಕೊಳಾಯಿ ಸಂಪರ್ಕಗಳನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲು ಉದ್ದೇಶಿಸಲಾಗಿದೆ. ಜೊತೆಗೆ 500 ಅಮೃತ್ ನಗರಗಳಲ್ಲಿ 2.64 ಕೋಟಿ ಒಳಚರಂಡಿ/ ಶೌಚಾಲಯ ತ್ಯಾಜ್ಯ ಸಂಪರ್ಕಗಳನ್ನು ಒದಗಿಸುವ ಮೂಲಕ ಶೇ,100ರಷ್ಟು ಒಳಚರಂಡಿ ಮತ್ತು ಶೌಚಾಲಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ10.5 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯಲಿದ್ದಾರೆ.
ನಗರಗಳ ನಡುವೆ ಪ್ರಗತಿಪರ ಸ್ಪರ್ಧೆ
- ʻಅಮೃತ್ 2.0ʼ ಯೋಜನೆಯು ಆವರ್ತನ ಆರ್ಥಿಕತೆಯ ತತ್ವಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಮೇಲ್ಮೈ ಮತ್ತು ಅಂತರ್ಜಲ ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನವನ್ನು ಉತ್ತೇಜಿಸುತ್ತದೆ. ಇತ್ತೀಚಿನ ಜಾಗತಿಕ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನೀರಿನ ನಿರ್ವಹಣೆಯಲ್ಲಿ ದತ್ತಾಂಶ ಆಧರಿತ ಆಡಳಿತ ಹಾಗೂ ʻತಂತ್ರಜ್ಞಾನ ಉಪ-ಯೋಜನೆʼಯನ್ನು ʻಅಮೃತ್ 2.0′ ಉತ್ತೇಜಿಸುತ್ತದೆ. ನಗರಗಳ ನಡುವೆ ಪ್ರಗತಿಪರ ಸ್ಪರ್ಧೆಯನ್ನು ಉತ್ತೇಜಿಸಲು ‘ಪೇ ಜಲ್ ಸುರ್ವೇಕ್ಷಣ್’ ಅನ್ನು ನಡೆಸಲಾಗುತ್ತದೆ.
- ಕಳೆದ ಏಳು ವರ್ಷಗಳಲ್ಲಿ ನಗರ ಭೂದೃಶ್ಯವನ್ನು ಸುಧಾರಿಸಲು ʻಎಸ್ಬಿಎಂ-ಯುʼ ಮತ್ತು ʻಅಮೃತ್ʼ ಗಮನಾರ್ಹ ಕೊಡುಗೆ ನೀಡಿವೆ. ಈ ಎರಡು ಪ್ರಮುಖ ಯೋಜನೆಗಳು ನಾಗರಿಕರಿಗೆ ನೀರು ಸರಬರಾಜು ಮತ್ತು ನೈರ್ಮಲ್ಯದ ಮೂಲಸೌಕರ್ಯ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಸ್ವಚ್ಛತೆಯು ಇಂದು ಜನಾಂದೋಲನವಾಗಿ ಮಾರ್ಪಟ್ಟಿದೆ.