Published on: December 3, 2022

‘ಅರ್ಜುನ್‌’: ಭಾರತೀಯ ಸೇನೆಗೆ ‘ಗರುಡ’ ಶಕ್ತಿ

‘ಅರ್ಜುನ್‌’: ಭಾರತೀಯ ಸೇನೆಗೆ ‘ಗರುಡ’ ಶಕ್ತಿ

ಸುದ್ದಿಯಲ್ಲಿ  ಏಕಿದೆ?

ಗಡಿ ಭಾಗದಲ್ಲಿ ಪಾಕಿಸ್ತಾನದ ಸೇನೆ ಮತ್ತು ಉಗ್ರರು ಡ್ರೋನ್ ಮೂಲಕ ಉಗ್ರರಿಗೆ ನೆರವಾಗುತ್ತಿರುವ ಚಟುವಟಿಕೆ ಭಾರತಕ್ಕೆ ತಲೆನೋವಾಗಿದೆ. ಇದನ್ನು ನಿವಾರಿಸಲು ಭಾರತೀಯ ಪಡೆಯು ಹದ್ದು ಮತ್ತು ನಾಯಿಗಳಿಗೆ ತರಬೇತಿ ನೀಡುತ್ತಿದೆ.

ಮುಖ್ಯಾಂಶಗಳು

  • ಭಾರತ-ಪಾಕಿಸ್ತಾನ ಗಡಿಯಲ್ಲಿನ 192 ಕಿ.ಮೀ ಉದ್ದನೆಯ ಜಮ್ಮು ಪ್ರಾಂತ್ಯವೊಂದರಲ್ಲೇ ಈ ವರ್ಷ 27 ಪಾಕ್‌ ಡ್ರೋನ್‌ಗಳು (ಯುಎವಿ-ಅನ್‌ಮ್ಯಾನ್ಡ್ ಏರಿಯಲ್‌ ವೆಹಿಕಲ್‌) ಭಾರತದ ಗಡಿ ನುಸುಳಲು ಯತ್ನಿಸಿ ವಿಫಲಗೊಂಡಿರುವುದಾಗಿ ಬಿಎಸ್‌ಎಫ್‌ ವರದಿ ಮಾಡಿದೆ.
  • ಪಾಕಿಸ್ತಾನದ ಸೇನೆ, ಉಗ್ರರು ನಾಲ್ಕು ರೆಕ್ಕೆಗಳ ರೋಟಾರ್ ಹೊಂದಿರುವ ಕ್ವಾಡ್‌ಕಾಪ್ಟರ್‌ ಡ್ರೋನ್ ಅನ್ನು ಹೆಚ್ಚಾಗಿ ಬಳಸುತ್ತಿವೆ. ಹೀಗಾಗಿ ಈ ಮಾದರಿಯ ಡ್ರೋನ್‌ಗಳನ್ನು ಪಕ್ಷಿಗಳಿಗೆ ಪರಿಚಯ ಮಾಡಿ, ದಾಳಿ ನಡೆಸುವಂತೆ ತರಬೇತಿ ಕೊಡಲಾಗುತ್ತಿದೆ.

ಹದ್ದಿನ ಕಾವಲು

  • ಇದನ್ನು ಸಮರ್ಥವಾಗಿ ಎದುರಿಸಲು ಹದ್ದಿನ ಕಣ್ಣಿನ ಕಾವಲಿನ ಜತೆಗೆ ಹದ್ದು/ಗರುಡ ಪಕ್ಷಿಯನ್ನೇ ಭಾರತೀಯ ಸೇನೆ ಪಾಕ್‌ ವಿರುದ್ಧ ‘ಪ್ರತ್ಯಾಸ್ತ್ರ’ವಾಗಿ ಸಿದ್ಧಪಡಿಸಿದೆ. ಹದ್ದುಗಳಿಗೆ ತರಬೇತಿ ನೀಡಿ, ಡ್ರೋನ್‌ಗಳ ಮೇಲೆ ಎರಗಿ ಕುಕ್ಕಿ ಕೆಳಕ್ಕೆ ಬೀಳಿಸುವ ಅಭ್ಯಾಸವನ್ನು ಯೋಧರು ಮಾಡಿಸಿದ್ದಾರೆ.
  • ಇಂಥ ವಿಶೇಷ ಕಾರ್ಯಾಚರಣೆಯ ಪ್ರಯೋಗವನ್ನು ಇತ್ತೀಚೆಗೆ ಉತ್ತರಾಖಂಡದಲ್ಲಿ ನಡೆದ ಅಮೆರಿಕ ಸೇನೆ ಜತೆಗಿನ ಯುದ್ಧಾಭ್ಯಾಸದ ವೇಳೆ ಭಾರತೀಯ ಸೇನೆ ಪ್ರದರ್ಶಿಸಿದೆ.
  • ‘ಅರ್ಜುನ್‌’ ಎಂಬ ಗರುಡ ಡ್ರೋನ್‌ ಅನ್ನು ನೆಲಕ್ಕೆ ಕೆಡವಿದೆ. ನೆಲಕ್ಕೆ ಬೀಳುವ ಡ್ರೋನ್‌ಗಳನ್ನು ಸೇನೆಯಲ್ಲಿನ ತರಬೇತಿ ಪಡೆದ ಶ್ವಾನಗಳು ಎಳೆದುಕೊಂಡು ಸೇನಾ ನೆಲೆಗೆ ತಂದು ಬಿಸಾಡುತ್ತವೆ. ಡ್ರೋನ್‌ಗಳನ್ನು ರಾತ್ರಿ ವೇಳೆ ಕೂಡ ಪತ್ತೆ ಹಚ್ಚುವ ಶ್ವಾನಗಳು ಜೋರಾಗಿ ಬೊಗಳಿ ಯೋಧರನ್ನು ಎಚ್ಚರಿಸುತ್ತವೆ.

ಯಾವ ಜಾತಿಯ ಹದ್ದುಗಳ ಬಳಕೆ?

  • ಬ್ಲ್ಯಾಕ್‌ ಈಗಲ್‌, ಫ್ಯಾಲ್ಕನ್‌ ಪ್ರಭೇದದ ಪಕ್ಷಿಗಳಿಗೆ ಸೇನೆಯಿಂದ ತರಬೇತಿ ನೀಡಲಾಗುತ್ತಿದೆ.
  • ಮೀರತ್‌ನ ರೆಮೌಂಟ್‌ ವೆಟರ್ನರಿ ಕೋರ್‌ (ಆರ್‌ವಿಸಿ) ಕೇಂದ್ರದಲ್ಲಿ ಪಕ್ಷಿಗಳಿಗೆ ಶತ್ರುಪಡೆಯ ಡ್ರೋನ್‌ ಗುರುತಿಸಲು ನಿತ್ಯ ತಾಲೀಮು ಮಾಡಿಸಲಾಗುತ್ತಿದೆ.