Published on: September 5, 2021
ಆನ್ಲೈನ್ ಜೂಜು ನಿಷೇಧ
ಆನ್ಲೈನ್ ಜೂಜು ನಿಷೇಧ
ಸುದ್ಧಿಯಲ್ಲಿ ಏಕಿದೆ? ರಾಜ್ಯದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ (ಜೂಜು) ಹತ್ತಿಕ್ಕಲು ಹಣವನ್ನು ಪಣವಾಗಿಟ್ಟು ನಡೆಸುವ ಎಲ್ಲ ಬಗೆಯ ಆನ್ಲೈನ್ ಜೂಜು ನಿಷೇಧಿಸುವ ಮಹತ್ವದ ತೀರ್ಮಾನವನ್ನು ಸರಕಾರ ಕೈಗೊಂಡಿದೆ. ಆದರೆ ಲಾಟರಿ, ಕುದುರೆ ರೇಸಿಂಗ್ ಗೆ ನಿಷೇಧ ವಿಧಿಸಲಾಗಿಲ್ಲ
ಜೂಜು ಎಂದರೇನು ?
- ”ಹಣವನ್ನು ಪಣವಾಗಿರಿಸಿ ಆಡುವ ಎಲ್ಲ ಬಗೆಯ ಆಟಗಳನ್ನು ಆನ್ಲೈನ್ ಜೂಜು ಎಂದೇ ಪರಿಗಣಿಸಲಾಗುತ್ತದೆ.
ಯಾವ ತಿದ್ದುಪಡಿಯನ್ನು ತರಲಾಗುತ್ತಿದೆ ?
- ನೇರವಾಗಿ ಹಣ ಮಾತ್ರವಲ್ಲದೆ, ವರ್ಚುಯಲ್ ಕರೆನ್ಸಿ, ಡಿಜಿಟಲ್ ಕರೆನ್ಸಿ, ಎಲೆಕ್ಟ್ರಾನಿಕ್ ಮನಿ, ಎಲೆಕ್ಟ್ರಾನಿಕ್ ಟ್ರಾನ್ಸ್ಫರ್ ಆಫ್ ಫಂಡ್ಸ್, ಪಾಯಿಂಟ್ಸ್ ರೂಪದ ನಗದು ಸೇರಿದಂತೆ ಯಾವುದೇ ಸ್ವರೂಪದಲ್ಲೂ ಹಣವನ್ನು ಪಣವಾಗಿಟ್ಟು ಜೂಜು ಪ್ರಕ್ರಿಯೆಯಲ್ಲಿ ತೊಡಗುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆಯಡಿ ಕ್ರಮ ಜರುಗಿಸಲು ಅವಕಾಶ ಕಲ್ಪಿಸುವುದಕ್ಕೆ ಕಾಯಿದೆಗೆ ತಿದ್ದುಪಡಿ ತರಲಾಗುತ್ತದೆ
- ಇನ್ನೊಂದೆಡೆ ಆನ್ಲೈನ್ ಜೂಜಾಟಕ್ಕೆ ವೇದಿಕೆ ಕಲ್ಪಿಸುವವರು ರಾಜ್ಯದ ಒಳಗೆ ಹಾಗೂ ಹೊರಗೆ ಯಾವುದೇ ಪ್ರದೇಶದಲ್ಲಿದ್ದರೂ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತಾದಾಗ ನಿಯಂತ್ರಣ ಪರಿಣಾಮಕಾರಿಯಾಗಲಿದೆ.
- ಮುಖ್ಯವಾಗಿ ಕಂಪ್ಯೂಟರ್, ಕಂಪ್ಯೂಟರ್ ಸಿಸ್ಟಮ್, ಮೊಬೈಲ್ ಅಪ್ಲಿಕೇಷನ್, ವರ್ಚುಯಲ್ ಪ್ಲಾಟ್ಫಾರಂ, ಇಂಟರ್ನೆಟ್, ಸೈಬರ್ ಸ್ಪೇಸ್, ಕಂಪ್ಯೂಟರ್ ನೆಟ್ವರ್ಕ್, ಕಂಪ್ಯೂಟರ್ ರಿಸೋರ್ಸ್, ಎಲೆಕ್ಟ್ರಾನಿಕ್ ಅಪ್ಲಿಕೇಷನ್, ಸಾಫ್ಟ್ವೇರ್ ಆ್ಯಂಡ್ ಆಕ್ಸೆಸರೀಸ್ ಸೌಲಭ್ಯದೊಂದಿಗೆ ನಡೆಸುವ ಹಾಗೂ ಎಲೆಕ್ಟ್ರಾನಿಕ್, ಡಿಜಿಟಲ್ ರೂಪದ ಯಾವುದೇ ದಾಖಲೆಗಳನ್ನು ಒಳಗೊಂಡ ಎಲ್ಲರೀತಿಯ ಜೂಜಾಟಗಳನ್ನು ಪೊಲೀಸ್ ಕಾಯಿದೆ ವ್ಯಾಪ್ತಿಗೆ ತರಲಾಗುವುದು
ಸದ್ಯ ನಿರ್ದಿಷ್ಟ ಕಾನೂನಿಲ್ಲ!
- ರಾಜ್ಯದಲ್ಲಿ ಯಾವುದೇ ರೀತಿಯ ಆನ್ಲೈನ್ ಜೂಜಿನಲ್ಲಿ ಪಾಲ್ಗೊಳ್ಳುವವರು ಹಾಗೂ ಆನ್ಲೈನ್ ಜೂಜಾಟಕ್ಕೆ ವೇದಿಕೆ ಕಲ್ಪಸುವವರ ವಿರುದ್ಧ ಕ್ರಮ ಜರುಗಿಸಲು ಸದ್ಯ ನಿರ್ದಿಷ್ಟ ಕಾನೂನುಗಳಿಲ್ಲ. ಇದರಿಂದಾಗಿ ಆನ್ಲೈನ್ ಜೂಜಿಗೆ ನಿಯಂತ್ರಣ ಹೇರುವುದು ಕಷ್ಟಸಾಧ್ಯವಾಗಿದೆ. ಕೆಲ ಅಂಶಗಳನ್ನು ಕರ್ನಾಟಕ ಪೊಲೀಸ್ ಕಾಯಿದೆ ವ್ಯಾಪ್ತಿಗೆ ತಂದರೆ ನಿಯಂತ್ರಿಸಲು, ದಂಡ- ಶಿಕ್ಷೆ ವಿಧಿಸಲು ಅವಕಾಶವಾಗಲಿದೆ. ಆ ಕಾರಣಕ್ಕೆ ಕಾಯಿದೆ ತಿದ್ದುಪಡಿ ತೀರ್ಮಾನ ಕೈಗೊಳ್ಳಲಾಗಿದೆ