Published on: March 11, 2023

ಆರೋಗ್ಯ ಸಂಜೀವಿನಿ ಯೋಜನೆ

ಆರೋಗ್ಯ ಸಂಜೀವಿನಿ ಯೋಜನೆ


ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸಂಬಂಧ ರಾಜ್ಯ ಸರ್ಕಾರ ಪರಿಷ್ಕೃತ ಕಾರ್ಯನೀತಿ ಪ್ರಕಟಿಸಿದ್ದು, ಆ ಮೂಲಕ ಈ ಯೋಜನೆಯಡಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು (ಉದಾ: ಪತಿ, ಪತ್ನಿ, ತಂದೆ, ತಾಯಿ ಮತ್ತು ಮಕ್ಕಳು) ನಗದು ರಹಿತವಾಗಿ ಆರೋಗ್ಯ ಸೇವಾ ಸೌಲಭ್ಯವನ್ನು ಪಡೆಯಬಹುದಾಗಿದೆ.


ಪರಿಷ್ಕೃತ ಕಾರ್ಯನೀತಿ

  • ಸರ್ಕಾರಿ ನೌಕರನ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರು ಯೋಜನೆಗೆ ಒಳಪಡಲು ಅರ್ಹತೆ ಹೊಂದಿದಲ್ಲಿ (ಉದಾ: ಕುಟುಂಬದಲ್ಲಿ ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿರುವ ಆತನ ಮಗ, ಮಗಳು ಅಥವಾ ತಂದೆ ಮತ್ತು ತಾಯಿ ಕೂಡ ಯೋಜನೆಗೆ ಒಳಪಟ್ಟಿದ್ದಲ್ಲಿ) ಅವರು ಕೂಡ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.ಈ ಉದ್ದೇಶಕ್ಕಾಗಿ ಅಂತಹ ನೌಕರರನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಲಾಗುವುದು.
  • ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ಈ ಯೋಜನೆಯಡಿ ನೋಂದಾಯಿಸಬಹುದಾಗಿದೆ.
  • ಪುರುಷ ಸರ್ಕಾರಿ ನೌಕರನ ಕಾನೂನುಬದ್ಧ ಸಂಪ್ರದಾಯದಂತೆ ವಿವಾಹವಾದ ಜೀವಿತ ಮೊದಲನೇ ಪತ್ನಿಯನ್ನು ಮತ್ತು ಆಕೆಯಿಂದ ಜನಿಸಿದ ಮಕ್ಕಳನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುವುದು.
  • ಮೊದಲನೇ ಪತ್ನಿ, ಜೀವಂತವಾಗಿದ್ದು, ಸರ್ಕಾರದಿಂದ ಅನುಮತಿ ಪಡೆದು ಎರಡನೇ ವಿವಾಹವಾದ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ.

ಈ ಯೋಜನೆ ಯಾರಿಗೆ ಅನ್ವಯಿಸಲ್ಲ?

  • ಈ ಯೋಜನೆಗೆ ರಾಜ್ಯ ಉಚ್ಚ ನ್ಯಾಯಾಲಯದ ನೌಕರರು, ರಾಜ್ಯ ವಿಧಾನ ಮಂಡಲದ ನೌಕರರು, ‘ಆರೋಗ್ಯ ಭಾಗ್ಯ’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ, ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ ಮಂಡಳಿಗಳು, ಸಹಕಾರ ಸಂಸ್ಥೆಗಳ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಇತರ ಸಂಸ್ಥೆಗಳ ನೌಕರರು ಒಳಪಡುವುದಿಲ್ಲ.
  • ಅವರ ಒಟ್ಟು ಮಾಸಿಕ ಆದಾಯ- ಕನಿಷ್ಠ ಕುಟುಂಬ ಪಿಂಚಣಿ (ರೂ.85,000) ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿ ಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಿರಬಾರದು.

‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

  • 2021ರ ಜುಲೈ 22 ರಂದು ಕರ್ನಾಟಕ ರಾಜ್ಯ ಸಚಿವ ಸಮಿತಿ ಕರ್ನಾಟಕ ಆರೋಗ್ಯ ಸಂಜೀವನಿ ಯೋಜನೆ (ಕೆಎಎಸ್ಎಸ್) ಅನುಷ್ಠಾನಕ್ಕೆ ಅನುಮೋದನೆ ನೀಡಿತು. ಈ ಯೋಜನೆಯನ್ನು ಕರ್ನಾಟಕ ಬಜೆಟ್ 2021 ರಲ್ಲಿ ಘೋಷಿಸಲಾಗಿತ್ತು.  ಈ ಯೋಜನೆಯಡಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ಈ ಮೂಲಕ ಜೀವನ ಮತ್ತು ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.