Published on: September 17, 2021

‘ಆರ್ಟೆಮಿಸ್’

‘ಆರ್ಟೆಮಿಸ್’

ಸುದ್ಧಿಯಲ್ಲಿ ಏಕಿದೆ? 2023ರಲ್ಲಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನತ್ತ ನಾಸಾ ಮತ್ತೆ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಿದೆ. ಈ ಬಾರಿ ಓರ್ವ ಮಹಿಳಾ ಗಗನಯಾತ್ರಿಯನ್ನೂ ಚಂದ್ರನ ನೆಲಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದೆ. ಆರ್ಟೆಮಿಸ್ ಹೆಸರಿನ ಈ ಯೋಜನೆ ಅಂತಾರಾಷ್ಟ್ರೀಯ ಸಹಕಾರದ ಮೊಟ್ಟ ಮೊದಲ ಬಾಹ್ಯಾಕಾಶ ಯೋಜನೆಯಾಗಲಿದೆ.

  • ಆರ್ಟೆಮಿಸ್ ಯೋಜನೆಯ ವಿಶೇಷತೆ ಎಂದರೆ ಇದು ಮೊಟ್ಟ ಮೊದಲ ಅಂತಾರಾಷ್ಟ್ರೀಯ ಸಹಕಾರದ ಬಾಹ್ಯಾಕಾಶ ಯೋಜನೆ. ಅಂದರೆ ವಿಶ್ವದ ಹಲವು ರಾಷ್ಟ್ರಗಳು ನಾಸಾದೊಂದಿಗೆ ಕೈಜೋಡಿಸಿ ಆರ್ಟೆಮಿಸ್ ಯೋಜನೆಯನ್ನು ಯಶಸ್ವಿಗೊಳಿಸಲಿವೆ. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ‘ಆರ್ಟೆಮಿಸ್ ಅಕಾರ್ಡ್'(ಅರ್ಟೆಮಿಸ್ ಒಪ್ಪಂದ)ಕ್ಕೆ ಸಹಿ ಮಾಡಿವೆ.

ಏನಿದು ಆರ್ಟೆಮಿಸ್ ಯೋಜನೆ?

  • ಆರ್ಟೆಮಿಸ್ ಯೋಜನೆ ಎನ್ನುವುದು ನಾಸಾದ ಮೂನ್ ಮಿಷನ್. 2023ರಲ್ಲಿ ಚಂದ್ರನೆಡೆಗೆ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ನಾಸಾ ಸಜ್ಜಾಗಿದೆ. ಈ ಬಾರಿ ಚಂದ್ರನ ನೆಲಕ್ಕೆ ಮೊಟ್ಟಮೊದಲ ಮಹಿಳಾ ಗಗನಯಾತ್ರಿಯನ್ನೂ ಕಳುಹಿಸಲು ನಾಸಾ ನಿರ್ಧರಿಸಿದೆ.
  • ಗ್ರೀಕ್ ಪುರಾಣಗಳ ಪ್ರಕಾರ ಆರ್ಟೆಮಿಸ್ ಜ್ಯೂಸ್ ಮತ್ತು ಲೀಟೋರ ಅವರ ಮಗಳು. ಅಪೊಲೋ ದೇವತೆಯ ಅವಳಿ ಸೋದರಿ. ಅಪೊಲೋ ಸೂರ್ಯ ದೇವತೆಯಾದರೆ ಆರ್ಟೆಮಿಸ್ ಚಂದ್ರ ದೇವತೆ. ಈ ಬಾರಿ ಚಂದ್ರನ ನೆಲಕ್ಕೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸುತ್ತಿರುವುದರಿಂದ ಈ ಯೋಜನೆಗೆ ಆರ್ಟೆಮಿಸ್ ಎಂಬ ಹೆಸರಿಟ್ಟಿರಬಹುದು.

ಭಾರತ ಆರ್ಟೆಮಿಸ್ ಯೋಜನೆಯ ಭಾಗವಾಗಬೇಕೆ?

  • ಆರ್ಟೆಮಿಸ್ ಒಪ್ಪಂದಗಳ ಭಾಗವಾಗಿ, ಭಾರತದ ಬಾಹ್ಯಾಕಾಶ ಕಂಪನಿಗಳು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಬಹುದು. ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಬಂದಿ ಸ್ಟಾರ್ಟ್ಅಪ್‌ಗಳು, ಇದರಿಂದ ಲಾಭ ಪಡೆಯಬಹುದಾಗಿದೆ.
  • ಆರ್ಟೆಮಿಸ್ ಭಾರತೀಯ ಬಾಹ್ಯಾಕಾಶ ಸ್ಟಾರ್ಟ್ಅಪ್‌ಗಳತ್ತ ಬಂಡವಾಳವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎಂಬುದು ಬಾಹ್ಯಾಕಾಶ ತಜ್ಞರ ನಿಲುವು. ಈ ಯೋಜನೆ ಅಂತಾರಾಷ್ಟ್ರೀಯ ಸಹಕಾರವನ್ನು ಹೊಂದಿರುವುದರಿಂದ ವಿಶ್ವದ ಇತರ ದೇಶಗಳು ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಕೈಜೋಡಿಸಬಹುದು ಎಂಬ ಆಶಾಭಾವನೆಯೂ ಇದೆ.