Published on: November 7, 2022

ಆರ್ಥಿಕವಾಗಿ ಹಿಂದುಳಿದ ವರ್ಗ(EWS)

ಆರ್ಥಿಕವಾಗಿ ಹಿಂದುಳಿದ ವರ್ಗ(EWS)

ಸುದ್ದಿಯಲ್ಲಿ  ಏಕಿದೆ?

ಮುಂದುವರೆದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ  ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಯ ಮಾನ್ಯತೆಯನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರನ್ನೊಳಗೊಂಡ  ಪಂಚ ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ.

ಮುಖ್ಯಾಂಶಗಳು 

ನ್ಯಾಯಾಧೀಶರ ಅಭಿಪ್ರಾಯಗಳು

  • ನಾಲ್ವರು ನ್ಯಾಯಾಧೀಶರು ಈ ಕಾಯ್ದೆ ಪರವಾಗಿ ವಾದಿಸಿದರೆ, ಮತ್ತೋರ್ವರು ವಿರುದ್ಧವಾಗಿ ವಾದಿಸಿದ್ದಾರೆ.
  • ನ್ಯಾಯಾಧೀಶ ಮಹೇಶ್ವರಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿ ಒದಗಿಸುವುದರಿಂದ ಸಂವಿಧಾನದ ಮೂಲ ರಚನೆ ಉಲ್ಲಂಘಿಸುವುದಿಲ್ಲ ಎಂದರು.
  • ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನ್ಯಾಯಮೂರ್ತಿ ಮಹೇಶ್ವರಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಹೊರತುಪಡಿಸಿ ಇತರರಿಗೆ ವಿಶೇಷ ಅವಕಾಶ ಕಲ್ಪಿಸಲು ರಾಜ್ಯಕ್ಕೆ ಅನುವು ಮಾಡಿಕೊಡುವ ತಿದ್ದುಪಡಿಯನ್ನು ಸಂಸತ್ತಿನ ದೃಢವಾದ ಕ್ರಮವೆಂದು ಪರಿಗಣಿಸಬೇಕು ಎಂದು ಅವರು ತೀರ್ಪು ನೀಡಿದರು.
  • ಮೀಸಲಾತಿ ನೀತಿಯನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಧೀಶರಾದ  ತ್ರಿವೇದಿ ಮತ್ತು ಪಾರ್ದಿವಾಲಾ ಹೇಳಿದರು. ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ EWS ಎತ್ತಿಹಿಡಿದು ತಮ್ಮ ತೀರ್ಪಿನಲ್ಲಿ, ಅನಿರ್ದಿಷ್ಟಾವಧಿಗೆ ಮೀಸಲಾತಿಯ ಮುಂದುವರಿಕೆಗೆ ಅಂತ್ಯ ಹಾಡುವ ಬಗ್ಗೆ ಪ್ರಸ್ತಾಪಿಸಿದರು. ಮೀಸಲಾತಿ ಅನಿರ್ದಿಷ್ಟ ಕಾಲಕ್ಕೆ ಮುಂದುವರಿಯಬಾರದು. ಅದು ಪಟ್ಟಭದ್ರ ಹಿತಾಸಕ್ತಿಯಾಗುತ್ತದೆ ಎಂದು ಅವರು ಹೇಳಿ EWS ಪರ ಆದೇಶ ನೀಡಿದರು.
  • ಆದಾಗ್ಯೂ, ನ್ಯಾಯಾಧೀಶರಾದ ಎಸ್. ರವೀಂದ್ರ ಭಟ್ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಬಡವರನ್ನು ಇದರಿಂದ ಹೊರಗಿಡುವುದು ತಾರತಮ್ಯವಾಗುತ್ತದೆ ಎಂದು ಅಸಮ್ಮತಿ ವ್ಯಕ್ತಪಡಿಸಿದರು.
  • EWS ಮೀಸಲು , ಒಟ್ಟಾರೆ ಮೀಸಲಾತಿಯು ಶೇ.50 ರನ್ನು ಮೀರಬಾರದು ಎಂಬ ಸಂವಿಧಾನದ ಮೂಲ ಆಶಯದ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಆದಾಯ ಮಿತಿ: 

  • ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗವು (ಇಡಬ್ಲ್ಯೂಎಸ್) ಸಾಮಾನ್ಯ ವರ್ಗಕ್ಕೆ ಸೇರಿದ ಜನರ ಉಪವರ್ಗವಾಗಿದ್ದು, ಕುಟುಂಬದ ವಾರ್ಷಿಕ ಆದಾಯ ೮ ಲಕ್ಷಕ್ಕಿಂತ ಕಡಿಮೆ ಮತ್ತು ಎಸ್‌ಸಿ / ಎಸ್‌ಟಿ / ಒಬಿಸಿ (ಕೇಂದ್ರ ಪಟ್ಟಿ) ಯಂತಹ ಯಾವುದೇ ಕಾಯ್ದಿರಿಸಿದ ವರ್ಗಕ್ಕೆ ಒಳಪಟ್ಟಿರತಕ್ಕದ್ದಲ್ಲ.  ಇಡಬ್ಲ್ಯೂಎಸ್ ಅಭ್ಯರ್ಥಿಯ ವಾರ್ಷಿಕ ಕುಟುಂಬ ಆದಾಯವು ನಿಗದಿತ ಮಿತಿಗಿಂತ ಹೆಚ್ಚಿದ್ದರೆ, ಅವನು / ಅವಳು ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ಗುರುತಿಸಲ್ಪಡುತ್ತಾರೆ.

ಹಿನ್ನೆಲೆ

  • ಕೇಂದ್ರ ಸರ್ಕಾರವು 2019ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದಿತ್ತು. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು. ಇದು ಸಂವಿಧಾನಬಾಹಿರ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಸುಪ್ರೀಂಕೋರ್ಟ್‍ಗೆ ಹಲವರು ಅರ್ಜಿ ಸಲ್ಲಿಸಿದ್ದರು.
  • ಇತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟಾರೆಯಾಗಿ ಇರುವ ಶೇ.50ರ ಮೀಸಲಾತಿಗೆ ಹೊರತಾಗಿ ಇಡಬ್ಲ್ಯು ಎಸ್ ಕೋಟಾ ಕಲ್ಪಿಸಿರುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ 103ನೇ ತಿದ್ದು ಪಡಿಯನ್ನು ರದ್ದು ಮಾಡಬೇಕು ಎಂದು ಕೋರಲಾಗಿತ್ತು.