Published on: June 8, 2022
ಆರ್ ಬಿಐ ವಿತ್ತೀಯ ನೀತಿ
ಆರ್ ಬಿಐ ವಿತ್ತೀಯ ನೀತಿ
ಸುದ್ಧಿಯಲ್ಲಿಏಕಿದೆ?
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲ ನೀಡುವ ದರವನ್ನು ಅಂದರೆ ರೆಪೊ ದರವನ್ನು ಶೇಕಡಾ 4.90ಕ್ಕೆ ಏರಿಸಿದೆ. ಆರ್‌ಬಿಐ ‘withdrawal of accommodation’ ನೀತಿಯ ನಿಲುವನ್ನು ಉಳಿಸಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಕಳೆದ ಎರಡು ತಿಂಗಳಲ್ಲಿ ರೆಪೊ ದರ ಹೆಚ್ಚಳವಾಗುತ್ತಿರುವುದು ಇದು ಎರಡನೇ ಸಲ.
ಮುಖ್ಯಾಂಶಗಳು
- ಹಣದುಬ್ಬರದ ಒತ್ತಡ ಮತ್ತು ಹೆಚ್ಚಿನ ಪೂರೈಕೆ ಆಘಾತಗಳ ಹಿನ್ನೆಲೆಯಲ್ಲಿ ದರಗಳನ್ನು ಹೆಚ್ಚಿಸಲು ವಿತ್ತೀಯ ನೀತಿ ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ.
- ಕಳೆದ ತಿಂಗಳು, ತನ್ನ ವಿತ್ತೀಯ ನೀತಿ ಪರಾಮರ್ಶೆಯಲ್ಲಿ ಆರ್ ಬಿಐ ಪಾಲಿಸಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಅಂದರೆ ಶೇಕಡಾ 0.40ರಿಂದ ಶೇಕಡಾ 4.4 ಕ್ಕೆ ಹೆಚ್ಚಿಸಿತು. ಕೋವಿಡ್ ಬಳಿಕ ಎರಡು ವರ್ಷಗಳಲ್ಲಿ ಪಾಲಿಸಿ ರೆಪೊ ದರದಲ್ಲಿ ಮೊದಲ ಹೆಚ್ಚಳ ಇದಾಗಿತ್ತು.
- ಈ ಹಣಕಾಸು ವರ್ಷಾರಂಭದಿಂದ ಹಣದುಬ್ಬರವು ಆರ್‌ಬಿಐನ ಶೇಕಡಾ 2ರಿಂದ ಶೇಕಡಾ 6ರ ಗುರಿಗಿಂತ ಹೆಚ್ಚಾಗಿದೆ. ಇತ್ತೀಚಿನ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಶೇಕಡಾ 7.79ಕ್ಕೆ ಏರಿದೆ. ಜನವರಿ 2022 ರಿಂದ ಇದು ಶೇಕಡಾ 6ಕ್ಕಿಂತ ಹೆಚ್ಚಿದೆ.
- ಕಳೆದ ಏಪ್ರಿಲ್‌ನಲ್ಲಿ, ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದ ಹಣದುಬ್ಬರ ಮುನ್ನೋಟವನ್ನು ಫೆಬ್ರವರಿಯಲ್ಲಿ ಘೋಷಿಸಿದ ನಂತರ ಶೇಕಡಾ 4.5 ರ ಹಿಂದಿನ ಪ್ರಕ್ಷೇಪಣದಿಂದ ಶೇಕಡಾ 5.7 ಕ್ಕೆ ಪರಿಷ್ಕರಿಸಿತ್ತು.
ಉದ್ದೇಶ
- ಉಕ್ರೇನ್ ಮತ್ತು ರಷ್ಯಾ ಯುದ್ಧವು ಹಣದುಬ್ಬರದ ಜಾಗತೀಕರಣಕ್ಕೆ ಕಾರಣವಾಗಿದೆ. ಕೋವಿಡ್ ಲಾಕ್ ಡೌನ್ ಬಳಿಕ ಭಾರತೀಯ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ. ಆರ್‌ಬಿಐ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲುತ್ತದೆ.
- ರೆಪೊ ದರ ಹೆಚ್ಚಳದಿಂದ ಗೃಹ ಸಾಲ, ವೈಯಕ್ತಿಕ ಸಾಲದ ಬಡ್ಡಿದರ ಹೆಚ್ಚಳವಾಗಲಿದೆ.
ರೆಪೊ ದರ ಮತ್ತು ರಿವರ್ಸ್ ರೆಪೊ ದರ ಎಂದರೇನು?
- ರೆಪೊ ದರ :ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
- ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
-
ರಿವರ್ಸ್ ರೆಪೊ ದರ : ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.