Published on: March 4, 2024

ಆ್ಯಂಟಿ ಸ್ನೇಕ್ ವೆನಮ್

ಆ್ಯಂಟಿ ಸ್ನೇಕ್ ವೆನಮ್

ಸುದ್ದಿಯಲ್ಲಿ ಏಕಿದೆ? ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ ‘ಆ್ಯಂಟಿ ಸ್ನೇಕ್ ವೆನಮ್’ ಅನ್ನು ಉಚಿತವಾಗಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಹಾವು ಕಡಿತವನ್ನು ಅಧಿಸೂಚಿತ ರೋಗವೆಂದು(ಫೆಬ್ರವರಿ 2024 ರಲ್ಲಿ) ಘೋಷಿಸಿದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ
  • ಹಾವು ಕಡಿತ ಪ್ರಕರಣಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಬೇಕು.
  • ಆ್ಯಂಟಿ ಸ್ನೇಕ್ ವೆನಮ್ ಪಡೆದ ವ್ಯಕ್ತಿಯಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು.
  • ಹಾವು ಕಡಿತದ ಪ್ರಕರಣ ಹಾಗೂ ಮರಣವನ್ನು (ಸಮಗ್ರ ಆರೋಗ್ಯ ಮಾಹಿತಿ ವೇದಿಕೆ)IHIP ಪೋರ್ಟಲ್ನಲ್ಲಿ ವರದಿಮಾಡಬೇಕು.

ಉದ್ದೇಶ

ಕರ್ನಾಟಕದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆ ಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  2023 ರಲ್ಲಿ, ಕರ್ನಾಟಕದಲ್ಲಿ 6,595 ಹಾವು ಕಡಿತಗಳು ಮತ್ತು 19 ಸಾವುಗಳು ವರದಿಯಾಗಿವೆ.

ನಿಮಗಿದು ತಿಳಿದಿರಲಿ

ಹಾವು ಕಡಿತವನ್ನು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆ(Neglected tropical disease)ಗಳ ಪಟ್ಟಿಗೂ ಸೇರಿಸಲಾಗಿದೆ.

’ಆ್ಯಂಟಿ ಸ್ನೇಕ್ ವೆನಮ್’ ಎಂದರೆ

ಭಾರತದಲ್ಲಿ ಕಂಡುಬರುವ ಸುಮಾರು ಮುನ್ನೂರು ಬಗೆಯ ಹಾವುಗಳಲ್ಲಿ ಸುಮಾರು ಅರವತ್ತರಷ್ಟು ವಿಷಪೂರಿತ ಹಾವುಗಳಿವೆ. ಪ್ರಮುಖವಾದ ನಾಲ್ಕು ಹಾವುಗಳ ವಿಷದ ದೋ ಷವನ್ನು ಮಾತ್ರ ನಿವಾರಿಸುವ ಶಕ್ತಿಯನ್ನು ‘ಆ್ಯಂಟಿ ಸ್ನೇಕ್ ವೆನಮ್‘ (ASV)ಹೊಂದಿದೆ.  ಕೋಬ್ರಾ (ನಾಗರಹಾವು),  ಕ್ರೈಟ್ (ಕಟ್ಟು/ಕಂದಡಿ ಹಾವು), ರಸಲ್ ವೈ ಪರ್ (ಕೊಳಕ ಮಂಡಲ), ಸ್ವಾಸ್ಕೇಲ್ಡ್ ವೈಪರ್ (ಉರಿ ಮಂಡಲ ಹಾವು) ಈ ನಾಲ್ಕು ವಿಷಯುಕ್ತ ಹಾವುಗಳು ಭಾರತದಲ್ಲಿ ಹೆಚ್ಚಾಗಿ ಜನರಿಗೆ ಕಡಿಯುತ್ತಿರುವುದು. ಹೀಗಾಗಿ ’ಆ್ಯಂಟಿ ಸ್ನೇಕ್ ವೆನಮ್’ ಅನ್ನು ತಯಾರಿಸುವಾಗ ಈ ನಾಲ್ಕು ಜಾತಿಯ ಹಾವಿನ ವಿಷವನ್ನು ಮಾತ್ರ ಬಳಸಲಾಗುತ್ತದೆ.  ಈ ನಾಲ್ಕು ಪ್ರಮುಖ ಹಾವುಗಳ ವಿಷವನ್ನು ಕುದುರೆಯ ದೇಹಕ್ಕೆ ಲಘುವಾದ ಪ್ರಮಾಣದಲ್ಲಿ ನೀಡಿದಾಗ ಕುದುರೆಯ ರಕ್ತದಲ್ಲಿ ಈ ವಿಷಗಳ ವಿರುದ್ಧ ‘ಆ್ಯಂಟಿಬಾಡಿಗಳ ಉತ್ಪಾದನೆಯಾಗುತ್ತದೆ. ಕುದುರೆಯ ರಕ್ತದಿಂದ ಈ ಆ್ಯಂಟಿಬಾಡಿಯಲ್ಲಿ ಸಂಗ್ರಹಿಸಿ ಅದರಿಂದ ’ಆ್ಯಂಟಿ ಸ್ನೇಕ್ ವೆನಮ್’ ಅನ್ನು ತಯಾರಿಸಲಾಗುತ್ತದೆ. ಇದರ ಉತ್ಪಾದನೆಯು ಚೆನ್ನೈ ಯಲ್ಲಿ ನಡೆಯುತ್ತದೆ.